Lokah Chapter 1 (ಮಲಯಾಳಂ)
ಅವಳು ಚಂದ್ರ.
ಆದರೆ ಅದು ಆಕೆ ತಾನಾಗಿಯೇ ಬದಲಾವಣೆ ಮಾಡಿಕೊಂಡಿರುವ ಹೆಸರು. ಅವಳ ನಿಜವಾದ ಹೆಸರು ನೀಲಿ..! ಅದು ಹಳೆಯ, ತುಂಬಾ ಹಳೆಯ ಹೆಸರು.. ಎಷ್ಟು ಹಳೆಯದೆಂದು ಅವಳಿಗೂ ಗೊತ್ತಿಲ್ಲ. ಸುಮಾರು ಸಾವಿರ ವರ್ಷಗಳಿಗೂ ಹಳೆಯದು ಇರಬಹುದು.
ಏಕೆಂದರೆ ಅವಳ ಹಳೆಯ ಕತೆಯನ್ನು (ಫ್ಲಾಷ್ ಬ್ಯಾಕ್) ನೋಡುವಾಗ, ಆಕೆಯ ತಂದೆ- ತಾಯಿ ಮತ್ತು ಅವರ ಕಡೆಯವರು ಹಾಕಿಕೊಂಡಿರುವ ಉಡುಗೆಯನ್ನು ಗಮನಿಸಿದರೆ, ಇದು ತುಂಬಾ ಪ್ರಾಚೀನ ಕಾಲದ ಘಟನೆ ಅಂತ ಗೊತ್ತಾಗುತ್ತದೆ.
ಆಗ ಬಾಲಕಿ ನೀಲಿಗೆ, ತನ್ನಲ್ಲಿ ಇರುವ ಶಕ್ತಿಯ ಬಗ್ಗೆ ಅರಿವಿರುವುದಿಲ್ಲ. ಆದರೆ ತನ್ನಪ್ಪ- ಅಮ್ಮನ ಮೇಲೆ ದೌರ್ಜನ್ಯ ನಡೆದಾಗ, ಅವಳ ಒಳಗಿನ ಶಕ್ತಿ ಒಮ್ಮೆಲೇ ಜಾಗೃತವಾಗುತ್ತದೆ. ನಂತರ ಆಕೆ ತನ್ನಲ್ಲಿರುವ ಶಕ್ತಿಯನ್ನು, ಅಸಹಾಯಕರ ಉದ್ಧಾರಕ್ಕಾಗಿ ಬಳಸುತ್ತಾ, ಲೋಕ ಕಲ್ಯಾಣಕ್ಕಾಗಿ ಶ್ರಮಿಸುತ್ತಿರುತ್ತಾಳೆ.
ಸಧ್ಯಕ್ಕೆ ಅವಳು ತನ್ನ ಹೆಸರನ್ನು 'ಚಂದ್ರ' ಅಂತ ಇರಿಸಿಕೊಂಡು, ಭಾರತಕ್ಕೆ ಬಂದು, ಬೆಂಗಳೂರಿನಲ್ಲಿ ನೈಟ್ ಶಿಫ್ಟ್ ಕೆಲಸಕ್ಕೆ ಸೇರಿ, ಲೋ ಪ್ರೊಫೈಲ್ ಮೇನ್‌ಟೇನ್ ಮಾಡುತ್ತಾ ಬದುಕುತ್ತಿರುತ್ತಾಳೆ. ಏಕೆಂದರೆ ಅವಳು ಒಂದೇ ಜಾಗದಲ್ಲಿ ಇಪ್ಪತ್ತು ವರ್ಷಗಳಿಗಿಂತಾ ಹೆಚ್ಚಿನ ಕಾಲ ನೆಲೆಸುವುದಿಲ್ಲ. ಅದು ಅವರ ರೂಲ್ಸು!
ಸಿನೆಮಾ ಮುಂದೆ ಹೋಗುತ್ತಾ ಇದ್ದಂತೆ, ನಮಗೆ ಅವಳಲ್ಲಿರುವ ಸೂಪರ್ ಪವರ್ಸ್‌ನ ಪರಿಚಯವಾಗುತ್ತಾ ಹೋಗುತ್ತದೆ. ಆಗ ಇವಳೇನು ಸೂಪರ್ ನ್ಯಾಚುರಲ್ ಹೀರೋಯಿನ್ನಾ ಅಥವಾ ಯಾವುದಾದರೂ ದೇವತೆಯಾ ಅಥವಾ ಏನೂ ಇಲ್ಲದೇ ಜಸ್ಟ್ ಮೋಹಿನಿಯಾ ಅಂತ ನಾವು ಕನ್ಫ್ಯೂಸ್ ಆಗುತ್ತೇವೆ.
ಅಸಲಿಗೆ ಅವಳೊಬ್ಬಳು ಯಕ್ಷಿ.
ಆದರೆ ಅವಳು ಇಂಗ್ಲೀಷ್ ಸಿನೆಮಾದ ವ್ಯಾಂಪೈರುಗಳಂತೆ, ರಾತ್ರಿ ಕತ್ತಲಿನಲ್ಲಿ ಮಾತ್ರ ಓಡಾಡುತ್ತಾಳೆ... ರಕ್ತ ಕುಡಿಯುತ್ತಾಳೆ.... ಬಿಸಿಲು ಮೈ ಮೇಲೆ ಬಿದ್ದರೆ ನರಳುತ್ತಾಳೆ.... ಆಗಾಗ ಅವಳ ಶಕ್ತಿ ಕಡಿಮೆ ಆಗುತ್ತಿರುತ್ತದೆ, ಆಗ ರಕ್ತ ಕುಡಿದು ತನ್ನ ಶಕ್ತಿಯನ್ನು ವಾಪಸ್ ಪಡೆಯುತ್ತಿರುತ್ತಾಳೆ...
ಇವಳಿಗೆ ಸಾವಿಲ್ಲ. ಅದಕ್ಕೆ ಸಾವಿರಾರು ವರ್ಷಗಳಿಂದ ಜೀವಂತವಿದ್ದಾಳೆ. ಜೊತೆಗೆ ತನ್ನ ವಯಸ್ಸನ್ನು ಯೌವ್ವನ ದಾಟಿ ಮುಂದೆ ಹೋಗದಂತೆ ನೋಡಿಕೊಂಡಿದ್ದಾಳೆ. ಅಷ್ಟು ಮಾತ್ರವಲ್ಲ.. ಇವಳ ಮೈ ಮೇಲೆ ಏನೇ ಗಾಯವಾದರೂ, ಅದು ತಾನಾಗಿಯೇ ರಿಪೇರಿಯಾಗುತ್ತದೆ. ಆದರೆ ಅದಕ್ಕೆ ಅವಳಿಗೆ ರಕ್ತದ ಅವಶ್ಯಕತೆ ಇರುತ್ತದೆ.
ಇಲ್ಲಿ ಇವಳು ಮಾತ್ರವಲ್ಲದೇ, ಇವಳಂತೆಯೇ ವಿಶೇಷ ಶಕ್ತಿ ಇರುವ ಜನರ ಸಂತೆಯೇ ಇದೆ. ಇವರೆಲ್ಲರನ್ನೂ ಯಾವುದೋ ಸೀಕ್ರೆಟ್ ಸೊಸೈಟಿ ಕಂಟ್ರೋಲ್ ಅಂಡ್ ಪ್ರೊಟೆಕ್ಟ್ ಎರಡನ್ನೂ ಮಾಡುತ್ತಿರುತ್ತದೆ. ಈಗ ಅವರ ಸೂಚನೆಯಂತೆಯೇ ಆಕೆ ಇಲ್ಲಿಗೆ ಬಂದಿರುತ್ತಾಳೆ.
ಚಂದ್ರ ಬೆಂಗಳೂರಿನಲ್ಲಿ ತನ್ನ ಪಾಡಿಗೆ ತಾನು ಜೀವನ ಮಾಡುತ್ತಿರುತ್ತಾಳೆ. ಇದು ಹೀಗೆಯೇ ನಡೆದಿದ್ದರೆ, ಇಲ್ಲಿಯೂ ಇಪ್ಪತ್ತು ವರ್ಷಗಳ ತನಕ ಜೀವನ ಸವೆಸಿ, ಆಕೆ ಮತ್ತೆಲ್ಲಿಗಾದರೂ ಹೋಗಬಹುದಿತ್ತು. ಆದರೆ 'ಮಾನವನ ಕುತೂಹಲದ ಮಟ್ಟ' ಅವಳಿಗೆ ಮಾರಕವಾಗಿ ಪರಿಣಮಿಸುತ್ತದೆ.
ಅವಳ ಎದುರು ಮನೆಯ ಯುವಕನಿಗೆ ಚಂದ್ರಳ ಮೇಲೆ ಏನೋ ಕುತೂಹಲ... ಈ ಕುತೂಹಲ ಪ್ರೀತಿ- ಪ್ರೇಮವಲ್ಲ ಬದಲಿಗೆ ಬೇರೆಯದು. ಆ ಕುತೂಹಲದಿಂದಲೇ ಆತ ತಾನೂ ಅಪಾಯಕ್ಕೆ ಬಿದ್ದುದಲ್ಲದೇ, ಚಂದ್ರಳನ್ನೂ ಸಹಾ ಅಪಾಯಕ್ಕೆ ಸಿಲುಕಿಸುತ್ತಾನೆ. ಕಡೆಗೆ ಅವಳು ಮನುಷ್ಯಳಲ್ಲ ಅಂತ ಗೊತ್ತಾದ ಮೇಲೆಯೂ, ಆತ ಅವಳನ್ನು ಬಿಡುವುದಿಲ್ಲ.
ಕಡೆಗೆ ಚಂದ್ರಳೇ ಅವನನ್ನು ಕಾಪಾಡಬೇಕಾದ ಪರಿಸ್ಥಿತಿ ಬರುತ್ತದೆ.... ಅವಳು ತನ್ನ ಸುರಕ್ಷತೆಗಾಗಿ ಈಗಿರುವ ಸ್ಥಳದಿಂದ ಬೇರೆ ಸ್ಥಳಕ್ಕೆ ಹೋಗಬೇಕಾಗಿ ಬರುತ್ತದೆ... ಇಡೀ ನಗರದಲ್ಲಿ ಪೊಲೀಸರು ಇವರಿಬ್ಬರಿಗಾಗಿ ಹುಡುಕುತ್ತಿರುತ್ತಾರೆ.. ಭ್ರಷ್ಟ ಪೊಲೀಸ್ ಅಧಿಕಾರಿಯೊಬ್ಬ ಚಂದ್ರಳಿಂದ ಕಚ್ಚಿಸಿಕೊಂಡು, ತಾನೂ ಅವಳಂತೆಯೇ ಬದಲಾಗಿ ಅವಳನ್ನೇ ಮುಗಿಸಲು ಹೊರಟಿರುತ್ತಾನೆ.. ಅವನ ಶಕ್ತಿ ಚಂದ್ರಳಿಗಿಂತಲೂ ಜಾಸ್ತಿ ಇರುತ್ತದೆ.. ಈಗ ಚಂದ್ರ ತನ್ನನ್ನೇ ತಾನು ಕಾಪಾಡಿಕೊಳ್ಳಲಾಗದ ಪರಿಸ್ಥಿತಿಗೆ ಬರುತ್ತಾಳೆ...
ಇದೆಲ್ಲಾ ಆಗಿದ್ದು ಕೇವಲ ನಾಯಕನ ಕುತೂಹಲದಿಂದ!!
ಆತನೊಬ್ಬ ಸುಮ್ಮನೆ ಇದ್ದಿದ್ದರೆ ಇದ್ಯಾವುದೂ ಆಗುತ್ತಿರಲಿಲ್ಲ. ಚಂದ್ರ ತಾನು ಬಂದಿರುವ ಕೆಲಸ ಮುಗಿಸಿ ತನ್ನ ಪಾಡಿಗೆ ಹೊರಟು ಹೋಗುತ್ತಿದ್ದಳು. ಯಾವುದೇ ರೀತಿಯ ಸಾವು-ನೋವು ಆಗಲಿ, ನಷ್ಟವಾಗಲಿ ಸಂಭವಿಸುತ್ತಿರಲಿಲ್ಲ.
ಇದರಿಂದ ನಾವು ಅರ್ಥ ಮಾಡಿಕೊಳ್ಳಬೇಕಾಗಿರುವುದು ಏನೆಂದರೆ, ಬೇರೆಯವರ ವಿಷಯದಲ್ಲಿ ಸುಖಾಸುಮ್ಮನೆ ಮೂಗು ತೂರಿಸಲು ಹೋಗಬಾರದು. ಅವರ ಜೀವನ ಅವರದು ಅಂತ, ಸುಮ್ಮನೆ ಬಿಟ್ಟುಬಿಡಬೇಕು. ಇಲ್ಲದಿದ್ದರೆ ಕಥಾ ನಾಯಕನ ಪರಿಸ್ಥಿತಿಯೇ ಎಲ್ಲರಿಗೂ ಬರುತ್ತದೆ.
ಸಿನಿಮಾ ಮುಗಿದರೂ ಈ ಕಥೆ ಮುಗಿಯುವುದಿಲ್ಲ. ಏಕೆಂದರೆ ಇದು ಬರೀ ಚಾಪ್ಟರ್ 1 ಮಾತ್ರ. ಇನ್ನು ಇದರ ಸರಣಿಗಳು ಬರುವುದು ಬಾಕಿ ಇರುವುದರಿಂದ, ಕಥೆ ಮುಂದುವರಿಯುತ್ತದೆ. ಜನರು ಸಹ ಈಗ ಸೀಕ್ವೆಲ್ ಮತ್ತು ಪ್ರೀಕ್ವೆಲ್‌ಗಳನ್ನು ನೋಡಲು ಕುತೂಹಲ ತೋರುವುದರಿಂದ, ಇದೇನು ದೊಡ್ಡ ವಿಷಯ ಅನಿಸುವುದಿಲ್ಲ.
ಯಕ್ಷಿ ಎಂಬ ಕಾನ್ಸೆಪ್ಟ್:
ಈ ಸಿನಿಮಾದಲ್ಲಿ ನಾಯಕಿ ಪಾತ್ರವನ್ನು ಜಾನಪದ ‘ಯಕ್ಷಿ" ಎಂದು ಹೇಳುತ್ತಾರೆ, ಆದರೆ ಅವಳು ಪರದೆ ಮೇಲೆ ವ್ಯಾಂಪೈರ್-like ಗುಣಗಳೊಂದಿಗೆ ತೋರಿಸಲ್ಪಟ್ಟಿದ್ದಾಳೆ.
ಯಕ್ಷ ಮತ್ತು ಯಕ್ಷಿಣಿಯರು ಭಾರತೀಯ ವೇದ ಪುರಾಣದ ಪ್ರಕಾರ ಅರ್ಧದೈವಿಕ ಜೀವಿಗಳು. ಜೊತೆಗೆ ಅವರು ಭೂಸಂಪತ್ತಿನ ರಕ್ಷಕರು. ಯಕ್ಷಿಯರೆಂದರೆ ಕೆಟ್ಟವರಲ್ಲ.. ಒಳ್ಳೆಯವರೇ! ಆದರೆ ಇದು ಪುರಾಣದ ಪ್ರಕಾರ ಮಾತ್ರ. ಅವರು ತಮ್ಮ ಶಕ್ತಿಯನ್ನು ಬಳಸುವುದು ದುಷ್ಟರನ್ನು ಸಂಹರಿಸುವಾಗ ಮಾತ್ರ.
ಆದರೆ ಈ ಸಿನಿಮಾದಲ್ಲಿ ಯಕ್ಷಿ ಎಂದರೆ ಇಂಗ್ಲೀಷಿನ 'ವ್ಯಾಂಪೈರ್' ಎನ್ನುವಂತೆ ತೋರಿಸಲಾಗಿದೆ.
ಯುರೋಪಿನ ಜನಪದರ ಪ್ರಕಾರ ವ್ಯಾಂಪೈರ್‌ಗಳು ರಕ್ತ ಸೇವನೆ ಮಾಡುತ್ತಾರೆ, ಅವರಿಗೆ ಅಮರತ್ವ ಇರುತ್ತದೆ, ಕತ್ತಲಿನಲ್ಲಿ ಜೀವನ ನಡೆಸುತ್ತಾರೆ, ಬಿಸಿಲಿಗೆ ಬರಲು ಹೆದರುತ್ತಾರೆ, ಮುಖ್ಯವಾಗಿ ರಕ್ತವನ್ನು ಮನುಷ್ಯರಿಂದ ಕಚ್ಚಿ ಹೀರಿಕೊಳ್ಳುತ್ತಾರೆ...
ಇದೆಲ್ಲಾ ಗುಣಗಳೂ ಚಂದ್ರಳಿಗೆ ಇದೆ ಎನ್ನುವಂತೆ ತೋರಿಸಲಾಗಿದೆ. ಆದರೆ ಅವಳು ವ್ಯಾಂಪೈರ್ ಅಲ್ಲ ಯಕ್ಷಿ...!! ಯಕ್ಷಿ ಎಂದರೆ ಭಾರತೀಯ ಪುರಾಣದ ಪ್ರಕಾರ ದೈವಿಶಕ್ತಿ ಇರುವ ಜೀವಿಗಳು. ದೆವ್ವಗಳಲ್ಲ..!!
ಆದರೆ ಇಂದಿನ ಹಲವಾರು ದಕ್ಷಿಣ ಭಾರತೀಯ ಹಾರರ್/ಫ್ಯಾಂಟಸಿ ಸಿನಿಮಾಗಳಲ್ಲಿ “ಯಕ್ಷಿಣಿ” ಪಾತ್ರವನ್ನು ವ್ಯಾಂಪೈರ್ ಲಕ್ಷಣಗಳೊಂದಿಗೆ ಮಿಶ್ರ ಮಾಡುತ್ತಾರೆ. ಇದಕ್ಕೆ ಕೆಲವು ಕಾರಣಗಳಿವೆ.
* ಭಾರತೀಯ ಪ್ರೇಕ್ಷಕರಿಗೆ ಕನೆಕ್ಟ್ ಆಗಲು
- ಪಾಶ್ಚಾತ್ಯ ವ್ಯಾಂಪೈರ್ ಕಲ್ಪನೆ ಎಲ್ಲರಿಗೂ ತಿಳಿದಿದೆ. ರಕ್ತ ಕುಡಿಯುವುದು, ಅಮರತ್ವ, ಯೌವ್ವನ, ರಾತ್ರಿ ಶಕ್ತಿಗಳು.. ಇತ್ಯಾದಿ. ಆದರೆ “ವ್ಯಾಂಪೈರ್” ಎಂಬ ಪದ ಭಾರತೀಯ ಜನಪದದಲ್ಲಿ ಬೇರೂರಿಲ್ಲ. ಹಾಗಾಗಿ "ಯಕ್ಷಿಣಿ" ಅಂತ ಹೆಸರಿಸಿ, ಆ ಪಾತ್ರಕ್ಕೆ "ವ್ಯಾಂಪೈರ್"ನ ಗುಣ ಚೆಲ್ಲುತ್ತಾರೆ. ಇದರಿಂದ ಕಥೆಗೂ ಜನಪ್ರಿಯತೆಯೂ ಬರುತ್ತದೆ. ಜೊತೆಗೆ international audience ಕೂಡಾ ಕನೆಕ್ಟ್ ಆಗುತ್ತಾರೆ.
* ಯಕ್ಷಿಣಿಯರು ಸುಂದರ/ ಮೋಹಕ ಅಂತ ಪುರಾಣದಲ್ಲಿ ಹೇಳಿರುವುದರಿಂದ
- ಪಾಶ್ಚಾತ್ಯ ವ್ಯಾಂಪೈರ್ ಮಹಿಳೆಯೂ seductive ಆಗಿ ಕಾಣಿಸಿಕೊಳ್ಳುತ್ತಾಳೆ, ನಮ್ಮ ಭಾರತೀಯ ಯಕ್ಷಿಣಿಯ ಪರಿಕಲ್ಪನೆಯೂ ಹಾಗೇ ಇರುವುದರಿಂದ, ಈ ಒಂದು ಪಾಯಿಂಟ್‌ನಲ್ಲಿ ಇಬ್ಬರೂ cinematic ಆಗಿ ಹೋಲುತ್ತಾರೆ.
ಹಾಗಿದ್ದರೆ ಇಬ್ಬರೂ ಒಂದೇನಾ?
ಇಲ್ಲ. ಶಾಸ್ತ್ರೀಯ ಮತ್ತು ಪೌರಾಣಿಕವಾಗಿ ಇವರಿಬ್ಬರಿಗೂ ಬಹಳ ವ್ಯತ್ಯಾಸ ಇದೆ.
• ಯಕ್ಷಿಣಿಗೆ ರಕ್ತ ಕುಡಿಯುವ concept ಇಲ್ಲ.
• ವ್ಯಾಂಪೈರಿಗೆ ಭೂಮಿ ಮತ್ತು ಸಂಪತ್ತಿನ ರಕ್ಷಕ ಎಂಬ ಹೊಣೆಗಾರಿಕೆ ಇಲ್ಲ.
• ಯಕ್ಷಿಣಿಗೆ ಮಂತ್ರತಂತ್ರಗಳೇ ಮುಖ್ಯ
• ವ್ಯಾಂಪೈರಿಗೆ ರಕ್ತ ಕುಡಿಯುವುದೇ ಮುಖ್ಯ
ಆದರೆ ಸಿನೆಮಾದವರು, ಎರಡೂ ಕಾನ್ಸೆಪ್ಟ್ ಅನ್ನು ಮಿಕ್ಸ್ ಮಾಡುತ್ತಾರೆ. ಅದನ್ನು cinematic liberty ಎಂದು ಕರೆಯಲಾಗುತ್ತದೆ. ಪೌರಾಣಿಕವಾಗಿ ಯಕ್ಷಿಣಿ ವ್ಯಾಂಪೈರ್ ಅಲ್ಲ. ಆದರೆ ಸಿನೆಮಾದಲ್ಲಿ ವ್ಯಾಂಪೈರ್ ಶೈಲಿ ಇರುವ ಯಕ್ಷಿಣಿ ಪಾತ್ರವನ್ನು ತೋರಿಸುತ್ತಾರೆ. ಇದು ಸಂಪೂರ್ಣವಾಗಿ Fictionl Hybrid Representation.
ಪೌರಾಣಿಕವಾಗಿ: Yakshi ≠ Vampire
ಆದರೆ ಈ ಸಿನೆಮಾದಲ್ಲಿ, "ಯಕ್ಷಿ" ಪಾತ್ರಕ್ಕೆ "ವ್ಯಾಂಪೈರ್" ಗುಣಗಳನ್ನು ಸೇರಿಸಿ ತೋರಿಸಿದ್ದಾರೆ. ಹೀಗಾಗಿ... strictly speaking, ಚಂದ್ರಳನ್ನು ವ್ಯಾಂಪೈರ್ ಹೇಳುವುದು ಸರಿಯಾದ ವ್ಯಾಖ್ಯಾನ ಅಲ್ಲ. ಆದರೆ cinematic portrayal ಪ್ರಕಾರ ಇದು ಸರಿಯಾಗಿದೆ. ಅದು ಅವರ ಸ್ವಾತಂತ್ರ್ಯ.
**************
ಕೆ.ಎ.ಸೌಮ್ಯ
ಮೈಸೂರು
