ಥಪ್ಪಡ್ (ಹಿಂದಿ)


ಅದೊಂದು ಪಾರ್ಟಿ. 


ಆ ಪಾರ್ಟಿಗೆ ಸುಮಾರು ನಲವತ್ತು ಜನ ಬಂದಿರುತ್ತಾರೆ. ಪಾರ್ಟಿಯ ಉದ್ದೇಶವೇ ಚಿತ್ರದ ನಾಯಕನಿಗೆ ಪ್ರಮೋಶನ್ ಸಿಕ್ಕಿರುವುದು. ಆದರೆ ಆ ಪ್ರಮೋಶನ್ ಅವನಿಗೆ ಸಿಗದೇ, ಬೇರೆಯವರಿಗೆ ಸಿಕ್ಕಿದೆ ಅಂತ ಗೊತ್ತಾದಾಗ, ನಾಯಕ ತನಗೆ ಅನ್ಯಾಯವಾಗಿದೆ ಅಂತ ಕೂಗಾಡುತ್ತಾನೆ. 


ಆಗ ಎಲ್ಲರೂ ಅವನಿಗೆ ಸಮಾಧಾನ ಮಾಡಲು ಯತ್ನಿಸುತ್ತಾರೆ. ಆದರೆ ಅವನು ಕೇಳದೇ ಮತ್ತಷ್ಟು ವ್ಯಗ್ರನಾಗುತ್ತಾನೆ. ಅಷ್ಟರಲ್ಲಿ ಅವನ ಹೆಂಡತಿ ಸಮಾಧಾನಿಸಲು ಅವನ ಬಳಿಗೆ ಬರುತ್ತಾಳೆ. ಅಷ್ಟೇ, ಆತ ಅವಳಿಗೆ ಸಮಾ ಒಂದು ಬಿಡುತ್ತಾನೆ... ಥಪ್ಪಡ್! 


ಅಲ್ಲಿಗೆ ಅವನ ಕೋಪ ಮುಗಿಯುತ್ತದೆ‌. ಆದರೆ ಆಕೆಗೆ? 


ಅಲ್ಲಿ ಸುಮಾರು ನಲವತ್ತು ಜನರಿದ್ದರು. ಜೊತೆಗೆ ತನ್ನ ಬೆನ್ನಿಗೆ ಇರಿದ ವ್ಯಕ್ತಿಯೂ ಇದ್ದ. ಅವರಲ್ಲಿ ಯಾರಿಗೆ ಬೇಕಿದ್ದರೂ ನಾಯಕ ಹೊಡೆಯಬಹುದಿತ್ತು. ಮತ್ತೂ ಕೋಪವಿದ್ದರೆ ತನಗೆ ಪ್ರಮೋಶನ್ ಕೊಡದ ಬಾಸಿಗೇ ಹೋಗಿ ಬಾರಿಸಬಹುದಿತ್ತು. ಆದರೆ ಆತ ತನ್ನ ಕೋಪವನ್ನು ಹೊರಹಾಕಲು ಬಳಸಿಕೊಂಡಿದ್ದು ತನ್ನ ಪತ್ನಿಯನ್ನ!! 


ಯಾಕೆ? ಹೇಗಿದ್ದರೂ ಹೆಂಡತಿ ತನಗೆ ತಿರುಗಿಸಿ ಹೊಡೆಯಲಾರಳು ಎನ್ನುವ ಕಾನ್ಫಿಡೆನ್ಸ್ ಇಂದಲಾ ಅಥವಾ ಬೇರೆ ಯಾರಿಗೆ ಹೊಡೆದರೂ ಅದು ಅಫೆನ್ಸೀವ್ ಆಗುತ್ತದೆ ಎಂಬ ಕಾರಣದಿಂದಲಾ? ಬೇರೆಯವರಿಗೆ ಹೊಡೆಯಲು ಇಲ್ಲದ ಶಕ್ತಿ- ಧೈರ್ಯ, ಹೆಂಡತಿಯನ್ನು ಹೊಡೆಯುವಾಗ ಮಾತ್ರ ಯಾಕೆ ಬರುತ್ತದೆ? 


ಸಮಾಜ ಗಂಡುಮಕ್ಕಳಿಗೆ ಏನು ಹೇಳಿ ಬೆಳೆಸುತ್ತದೆ? 


ಹೆಂಡತಿಗೆ ಹೊಡೆಯುವುದನ್ನು ನಮ್ಮ ಸಮಾಜ ಮತ್ತು ನಮ್ಮ ಕುಟುಂಬದವರು ಯಾಕೆ ಅಷ್ಟೊಂದು ನಾರ್ಮಲೈಸ್ ಮಾಡಿದ್ದಾರೆ? ಅದೊಂದು ತಲೆ ಕೆಡಿಸಿಕೊಳ್ಳುವ ಪ್ರಶ್ನೆಯೇ ಅಲ್ಲ ಎಲ್ಲರಿಗೂ. ಗಂಡ ಹೆಂಡತಿಗೆ ಹೊಡೆಯದೇ ಮತ್ಯಾರಿಗೆ ಹೊಡೆಯುತ್ತಾನೆ ಎಂಬ ಮೂರ್ಖ ಪ್ರಶ್ನೆಯನ್ನು ಜನ ತಮಗೆ ತಾವೇ ಹಾಕಿಕೊಂಡು ಸುಮ್ಮನಾಗುತ್ತಾರೆ. ಜೊತೆಗೆ ಆ ಹೆಂಡತಿಗೂ ಅದನ್ನೇ ಹೇಳುತ್ತಾರೆ. 


ಆದರೆ ನನ್ನ ಪ್ರಶ್ನೆ ಏನೆಂದರೆ‌.. 


ಆಕೆ ಎಲ್ಲರ ಮುಂದೆ ಹೊಡೆಸಿಕೊಳ್ಳುವಂತಹಾ ತಪ್ಪು ಏನು ಮಾಡಿದ್ದಳು? ಅವನ ಪ್ರಮೋಶನ್ ತಪ್ಪಿ‌ ಹೋಗಲು ಆಕೆ ಕಾರಣಳಾ? ಅದರ ನಿಜವಾದ ಕಾರಣಕರ್ತ ಎದುರಿಗಿದ್ದರೂ ನಾಯಕ ಆತನಿಗೆ ಯಾಕೆ ಹೊಡೆಯಲಿಲ್ಲ? ಬದಲಿಗೆ ಯಾವುದೇ ತಪ್ಪು ಮಾಡದ ಹೆಂಡತಿಯನ್ನೇಕೆ ಶಿಕ್ಷಿಸಿದ? 


ಆಕೆಗೆ ಆತ್ಮಗೌರವ ಇಲ್ಲವೇ? ಘನತೆಯಿಂದ ಬಾಳುವ ಹಕ್ಕಿಲ್ಲವೇ? ಈ ರೀತಿ ಒಬ್ಬರ ಕೈಲಿ ಹೊಡೆಸಿಕೊಂಡು ಆಕೆ ಬಾಳಬೇಕೇ? ನಾನು ಈ ವಿಷಯವನ್ನು ಯಾಕೆ ಇಷ್ಟೊಂದು ಒತ್ತಿ ಹೇಳುತ್ತಿದ್ದೇನೆ ಎಂದರೆ, ಇದೇ ಹೊಡೆತವನ್ನು ಹೆಂಡತಿಯಾದವಳು ಗಂಡನಿಗೆ ಎಲ್ಲರ ಮುಂದೆ ಕೊಟ್ಟಿದ್ದರೆ... ಸಮಾಜ ಹೇಗೆ ಯೋಚಿಸುತ್ತಿತ್ತು? ಅದು ಹೇಗೆ ಗಂಡ ಹೊಡೆದರೆ ಸರಿ, ಹೆಂಡತಿ ಹೊಡೆಯುವುದು ತಪ್ಪಾಗುತ್ತದೆ? 


ಇದಕ್ಕಿಂತಲೂ ತಲೆ ಕೆಡಿಸುವ ಅಂಶ ಎಂದರೆ, ಈ ಘಟನೆಯ ನಂತರ ಆಕೆಯ ಗಂಡ ಮತ್ತು ಅತ್ತೆ ಇಬ್ಬರೂ, ನಡೆದಿರುವ ಘಟನೆಯ ಕುರಿತು ಒಂದೂ ಕ್ಷಮಾಪಣೆ ಕೇಳದೇ, ಆಕೆಯ ಜೊತೆ ಏನೂ ನಡೆದೇ ಇಲ್ಲ ಎನ್ನುವಂತೆ ಬಿಹೇವ್ ಮಾಡುತ್ತಾರೆ. ಕಾಲ ಕಳೆದಂತೆ ಆಕೆಯೂ ಇದನ್ನು ಮರೆತು ಬಿಡುತ್ತಾಳೆ ಅಂತ ತಿಳಿದಿದ್ದರೇನೋ? 


ಅವಳ ಜಾಗದಲ್ಲಿ ಬೇರೆ ಯಾರೇ ಇದ್ದಿದ್ದರೂ ಹಾಗೇ ಮಾಡುತ್ತಿದ್ದರು. ಆದರೆ ನಾಯಕಿ ಹಾಗೆ ಮಾಡುವುದಿಲ್ಲ. ಬದಲಿಗೆ ಡಿವೋರ್ಸ್ ಫೈಲ್ ಮಾಡುತ್ತಾಳೆ. 


ಆಗ ಹತ್ತಿಕೊಳ್ಳುತ್ತದೆ ನೋಡಿ ನಿಜವಾದ ಬೆಂಕಿ!! 


ಆತ ಮೊದಲೆಂದೂ ಹೊಡೆದಿಲ್ಲ. ಇದೇ ಮೊದಲ ಸಲ. ಅದರಲ್ಲೂ ಹೊಡೆದಿರೋದು ಬೇರೆ ಯಾರೂ ಅಲ್ಲ, ಆಕೆಯ ಸ್ವಂತ ಗಂಡ. ಅಷ್ಟಕ್ಕೇ ಡಿವೋರ್ಸ್ ತೆಗೆದುಕೊಳ್ಳುವುದಾ? 


"ಈ ರೀತಿ ಯೋಚಿಸಿದರೆ ಈ ದೇಶದ ಅರ್ಧಕ್ಕರ್ಧ ಮಹಿಳೆಯರು ಅಪ್ಪನ ಮನೆಯಲ್ಲಿರಬೇಕಾಗುತ್ತೆ, ಹಾಗಾಗಿ ಈ ವಿಷಯ ಬಿಟ್ಟು ಗಂಡನ ಜೊತೆ ಹೊಂದಿಕೊಂಡು ಹೋಗು" ಅಂತಲೇ ಎಲ್ಲರೂ ಹೇಳುತ್ತಾರೆ. 


ಎಲ್ಲರೂ ಎಂದರೆ ಆಲ್ಮೋಸ್ಟ್ ಎಲ್ಲರೂ.... 


ನಾಯಕಿಯ ತಾಯಿ ಕೂಡಾ ಮಗಳಿಗೆ ಸಪೋರ್ಟ್ ಮಾಡುವುದಿಲ್ಲ. ಏಕೆಂದರೆ, ಮಗಳು ಡಿವೋರ್ಸಿಯಾದರೆ ಅಕ್ಕಪಕ್ಕದ ಮನೆಯವರಿಗೆ ಏನು ಹೇಳುವುದು ಎಂಬ ಚಿಂತೆ ಆಕೆಯದು. ಹೆಂಡತಿ ಮನೆ ಬಿಟ್ಟು ಹೋದರೆ ತನ್ನ ಸಂಬಂಧಿಕರಲ್ಲಿ ಮತ್ತು ಆಫೀಸಿನಲ್ಲಿ ಏನು ಹೇಳುವುದು ಎಂಬ ಆತಂಕ ನಾಯಕನದು. ಗಂಡನೇ ಬಂದು ಕರೆದಾಗ ಹೋಗುವುದು ಬಿಟ್ಟು, ಇವಳದ್ದೇನು ಉದ್ಧಟತನ ಎಂಬ ಕೋಪ ನಾಯಕಿಯ ಅಣ್ಣನದು. 


ಯಾರಿಗೂ ಆಕೆಯ ಮನಸ್ಥಿತಿ ಬೇಕಿಲ್ಲ. 


ಅವಳು ಏನಾದರೂ ಸಾಯಲಿ.. ಎಲ್ಲರಿಗೂ ಈ ಸಮಾಜದ ಮುಂದೆ ಒಂದು ಕ್ಲೀನ್ ಇಮೇಜ್ ಬೇಕು. ತಮ್ಮ ಮನೆಯ ವಿಷಯ, ಎಲ್ಲರ ಬಾಯಿಯಲ್ಲಿಯೂ ಆಡಿಕೊಳ್ಳುವ ವಸ್ತು ಆಗಬಾರದು. ಹಾಗೆ ಆಗಬಾರದು ಎಂದರೆ ನಾಯಕಿ ಗಂಡನ ಮನೆಗೆ ವಾಪಸ್ ಹೋಗಬೇಕು. ಆದರೆ ಅವಳು ಚಿಕ್ಕ ವಿಷಯವನ್ನು ದೊಡ್ಡದು ಮಾಡಿ, ಸುಮ್ಮನೆ ಪ್ರಾಬ್ಲಮ್ ಕ್ರಿಯೇಟ್ ಮಾಡುತ್ತಿದ್ದಾಳೆ ಎಂಬ ಅನಿಸಿಕೆ ಎಲ್ಲರಿಗೂ. 


ಆದರೆ ನಿಜಕ್ಕೂ ಪ್ರಾಬ್ಲಮ್ ಕ್ರಿಯೇಟ್ ಮಾಡಿಕೊಳ್ಳುತ್ತಿರುವುದು ಸ್ವತಃ ನಾಯಕನೇ...‌ 


ಹೆಂಡತಿ ಮ್ಯೂಚ್ಯುವಲ್ ಒಪ್ಪದದ ಪ್ರಕಾರ ಡಿವೋರ್ಸ್ ಕೇಳಿದಾಗ ಕೊಡದೇ, ಕೇಸನ್ನು ಕೋರ್ಟಿನ ತನಕ ಹೋಗುವ ಹಾಗೆ ಮಾಡಿ, ಅವಳು ಆಸ್ತಿಗಾಗಿ ಮದುವೆಯಾದಳು ಎಂಬ ಸುಳ್ಳು ಆರೋಪ ಹೊರೆಸಿದುದೂ ಅಲ್ಲದೇ, ಪಾರ್ಟಿಯ ರಾತ್ರಿ ಆಕೆ ಕುಡಿದಿದ್ದಳು / ಮಾನಸಿಕ ಅಸ್ವಸ್ಥಳಾಗಿದ್ದಳು ಎಂದೆಲ್ಲಾ ಆರೋಪಿಸಿ, ಕಡೆಗೆ ತಾನು ಆಕೆಗೆ ಹೊಡೆದೇ ಇಲ್ಲ, ಹೊಡೆದಿರುವುದನ್ನು ಯಾರೂ ನೋಡಿಯೇ ಇಲ್ಲ ಅಂತ ಸಾಕ್ಷಿ ತಯಾರು ಮಾಡಲು ಹೊರಡುತ್ತಾನೆ. 


ಒಂದು ಕಡೆ ಇಷ್ಟೆಲ್ಲಾ ಮಾಡಿ ಆಕೆಯನ್ನು ಹಣಿಯಲು ನೋಡಿದರೂ, ಆಕೆ ಎದುರಿಗೆ ಸಿಕ್ಕಾಗ ಮಾತ್ರ 'ಎಲ್ಲವನ್ನೂ ಮರೆತು ಕೇಸ್ ವಾಪಸ್ ತೆಗೆದುಕೊಂಡು, ಮೊದಲಿನಂತೆ ಜೀವಿಸೋಣ' ಅನ್ನುವ ಆಫರ್(!) ಮುಂದಿಡುತ್ತಾನೆ. ಆಕೆ ಒಪ್ಪದಿದ್ದಾಗ 'ಇಷ್ಟಕ್ಕೆಲ್ಲಾ ಅವಳ ಹಠವೇ ಕಾರಣ' ಎಂಬ ಗಿಲ್ಟ್ ಫೀಲಿಂಗ್ ಅನ್ನು ಅವಳಲ್ಲಿ ಮೂಡಿಸಲು ಪ್ರಯತ್ನಿಸುತ್ತಾನೆ. ಆಕೆ ಪ್ರೆಗ್ನೆಂಟ್ ಅಂತ ಗೊತ್ತಾದಾಗ, ಮಗುವಿನ ಸುಪರ್ದಿ ನಿನಗೆ ಸಿಗದ ಹಾಗೆ ಮಾಡುತ್ತೇನೆ ಅಂತ ಧಮಕಿ ಹಾಕಲೂ ಹಿಂಜರಿಯುವುದಿಲ್ಲ ಆತ. 


ಒಟ್ಟಿನಲ್ಲಿ ಅವಳನ್ನು ದೂಷಿಸಲು ಹೋಗಿ, ತನ್ನ ನಿಜವಾದ ಮುಖವನ್ನು‌ ಅನಾವರಣ ಮಾಡಿಕೊಂಡು ಬಿಡುತ್ತಾನೆ. ಒಂದು ಪುರುಷ ಅಹಂಕಾರವು ತಾನು ಗೆಲ್ಲಬೇಕೆಂದರೆ, ಒಬ್ಬ ಮಹಿಳೆಯೊಂದಿಗೆ ಎಷ್ಟು ಕೀಳುಮಟ್ಟಕ್ಕೆ ಇಳಿಯಬಹುದು ಅಂತ ನಿರ್ದೇಶಕರು ಬಹಳ ಸೂಕ್ಷ್ಮವಾಗಿ ತೋರಿಸಿದ್ದಾರೆ. 


ನಿಜ ಹೇಳಬೇಕೆಂದರೆ... ನಾಯಕಿ ಡಿವೋರ್ಸ್ ತೆಗೆದುಕೊಳ್ಳಲು ಆ ಹೊಡೆತ ಕಾರಣ ಅಲ್ಲವೇ ಅಲ್ಲ. ಬದಲಿಗೆ ಆ ಹೊಡೆತದ ನಂತರದ ಗಂಡನ ಮತ್ತು ಆತನ ಮನೆಯವರ ವರ್ತನೆ ಅವಳನ್ನು ಡಿವೋರ್ಸ್ ತೆಗೆದುಕೊಳ್ಳಲು ಪ್ರೇರೇಪಿಸಿರುತ್ತದೆ. 


ತನ್ನ ಅತ್ತೆ ಒಂದು ಸಲವಾದರೂ 'ನನ್ನ ಮಗ ಮಾಡಿದ್ದು ತಪ್ಪು' ಎನ್ನಬಹುದು ಅಥವಾ ತನ್ನೆದುರು ಮಗನನ್ನು ಕರೆದು 'ಅವಳಿಗೆ ಯಾಕೆ ಹೊಡೆದೆ?' ಎಂದು ಗದರಬಹುದು ಅಂತ ಆಕೆ ಕಾದು ಕಾದು ಸುಸ್ತಾಗುತ್ತಾಳೆ. ಮತ್ತೊಂದು ಕಡೆ ಗಂಡ ಕೂಡಾ ಒಂದು ಸಿಂಪಲ್ 'ಸಾರಿ' ಕೇಳದೇ, 'ಏನ್ ಮಹಾ ತಪ್ಪು ಮಾಡಿದ್ದೀನಿ' ಅಂತ ಆರಾಮಾಗಿ ತಿರುಗಾಡಿಕೊಂಡಿರುತ್ತಾನೆ‌. 


ತಪ್ಪು ಮಾಡಿದ್ದು ನಾಯಕನ ಮೇಲಧಿಕಾರಿ. ಅನ್ಯಾಯವಾಗಿದ್ದು ನಾಯಕನಿಗೆ. ಏನೂ ತಪ್ಪು ಮಾಡದೇ ಹೊಡೆಸಿಕೊಂಡಿದ್ದು ನಾಯಕಿ. ಆದರೆ ಅದಕ್ಕಾಗಿ ಆಕೆ ಕುಡುಕಿ/ ಮಾನಸಿಕ ಅಸ್ವಸ್ಥೆ/ ಗೋಲ್ಡ್ ಡಿಗ್ಗರ್/ ಆಸ್ತಿಗಾಗಿ ಮದುವೆಯಾಗಿದ್ದಳು ಎಂಬೆಲ್ಲಾ ಅಪವಾದ ಹೊರಬೇಕಾಯ್ತು. 


ಹೆಣ್ಣುಮಕ್ಕಳಿಗಾಗಿ ಏನೆಲ್ಲಾ ಕಾನೂನು ಬಂದರೂ, ಅದೇ ಕಾನೂನು ಬಳಸಿ ಆಕೆಯನ್ನು ಮತ್ತೆ ಮೇಲೇಳಲಾಗದಂತೆ ಹೊಸಕಿ ಹಾಕುವುದು ಪುರುಷವರ್ಗಕ್ಕೆ ನೀರು ಕುಡಿದಷ್ಟು ಸುಲಭ.‌ ಇಂದಿಗೂ ಕಾನೂನುಗಳು‌ ಪುರುಷರ ಪರವಾಗಿಯೇ ಇದೆ. ನಾಯಕಿಯ ಸ್ಥಿತಿಯೇ ಹೀಗಾದರೆ, ಇನ್ನು ಮಧ್ಯಮ ವರ್ಗದ, ಹೆಚ್ಚು ಶಿಕ್ಷಣ ಪಡೆಯದ ಹೆಣ್ಣುಮಕ್ಕಳ ಗತಿಯೇನು ಅಂತ ನೆನೆಸಿಕೊಂಡರೆ ಆತಂಕವಾಗುತ್ತದೆ. 


ಎಲ್ಲೋ ಯಾರೋ ಒಂದಿಬ್ಬರು, ಹೆಣ್ಣುಮಕ್ಕಳಿಗಾಗಿ ಮಾಡಿರುವ ಕಾನೂನನ್ನು ದುರುಪಯೋಗ ಪಡಿಸಿಕೊಂಡರು ಎನ್ನುವ ಉದಾಹರಣೆ ತೋರಿಸಿ, ಇಡೀ ಹೆಣ್ಣುಕುಲದ ಧ್ವನಿಯನ್ನು ಹತ್ತಿಕ್ಕಲಾಗುತ್ತಿದೆ. ಈ ಚಿತ್ರದ ನಾಯಕಿಯಂತೆಯೇ ನಮಗೆ ಆಸ್ತಿ-ದುಡ್ಡು ಏನೂ ಬೇಡ, ಬದಲಿಗೆ ಮರ್ಯಾದೆ- ಗೌರವ ಬೇಕು. 


ಅದರಂತೆಯೇ ಈ ದೇಶದಲ್ಲಿ ಗಂಡನಿಂದ ಒಂದು ಲೈಸೆ ಅಲಿಮನಿಯನ್ನೂ ಪಡೆಯದೇ, ಮಕ್ಕಳನ್ನೂ ಸಾಕಿಕೊಂಡಿರುವ ಕೋಟ್ಯಾಂತರ ತಾಯಂದಿರಿದ್ದಾರೆ. ಅವರು ಯಾಕೆ ಗಂಡನ ಮೇಲೆ ಕೇಸ್ ಹಾಕಿಲ್ಲ ಅಂತ ಇದೂವರೆಗೂ ಯೋಚಿಸುತ್ತಿದ್ದೆ. ಈ ಸಿನೆಮಾ ನೋಡಿದ ಮೇಲೆ ಗೊತ್ತಾಯ್ತು.. ಗೊತ್ತಿದ್ದೂ ಕೊಚ್ಚೆಯ ಮೇಲೆ ಯಾಕೆ ಕಲ್ಲು ಎಸೆಯುತ್ತಾರೆ ಅಲ್ಲವೇ? 


ಹೆಣ್ಣಿನ ಸೂಕ್ಷ್ಮ ಪರಿಸ್ಥಿತಿಯನ್ನು ಅಷ್ಟೇ ನಾಜೂಕಾಗಿ ಹೇಳಿರುವ ನಿರ್ದೇಶಕರಿಗೆ ಒಂದು ಸಲಾಮ್! ಜೊತೆಗೆ ಬೇರೆ ಟಿಪಿಕಲ್ ಕಥೆಗಳ ಹಾಗೆ, ಕಡೆಯಲ್ಲಿ ನಾಯಕ- ನಾಯಕಿಯನ್ನು ಒಂದು ಮಾಡದೇ, ನಾಯಕಿಯ ಅಭಿಪ್ರಾಯಕ್ಕೆ ಮನ್ನಣೆ ಕೊಟ್ಟಿರುವುದು ನೋಡಿ ತುಂಬಾ ಖುಷಿಯಾಯ್ತು. 


Worth Watching. 


**************** 


ಕೆ.ಎ.ಸೌಮ್ಯ

ಮೈಸೂರ









Popular posts from this blog

Paradha Movie Review (Telugu)

ಎಡಗೈ ಅಪಘಾತಕ್ಕೆ ಕಾರಣ (ಕನ್ನಡ)