ಎಡಗೈ ಅಪಘಾತಕ್ಕೆ ಕಾರಣ (ಕನ್ನಡ)

 


ಬೇರೆ ಭಾಷೆಗಳಲ್ಲಿ ಮಾನಸಿಕ ರೋಗದ ಬಗ್ಗೆ ಮತ್ತು ಅದನ್ನು ಅನುಭವಿಸುತ್ತಿರುವ ರೋಗಿಗಳ ಬಗ್ಗೆ ಸೂಕ್ಷ್ಮ ರೀತಿಯಲ್ಲಿ ಅರ್ಥ ಮಾಡಿಸುವ ಸಿನಿಮಾ ಬಂದಾಗ, 'ನಮ್ಮ ಕನ್ನಡದಲ್ಲಿ ಅಂತಹದ್ದೇ ಸಿನಿಮಾ ಯಾಕೆ ಬರಬಾರದು?' ಅಂತ ಯಾವಾಗಲೂ ಅಂದುಕೊಳ್ಳುತ್ತಿದ್ದೆ. ಹಾಗಾಗಿ ಈ ಸಿನೆಮಾ ಬಂದಾಗ ನನ್ನ ನಿರೀಕ್ಷೆ ದುಪ್ಪಟ್ಟಾಗಿತ್ತು.


ದುರಾದೃಷ್ಟವೆಂದರೆ, ಅಂತಹ ಚಾನ್ಸ್ ಸಿಕ್ಕಿದರೂ ಕೂಡಾ, ಅದನ್ನು ಪರಿಪೂರ್ಣವಾಗಿ ತೋರಿಸುವಲ್ಲಿ ನಿರ್ದೇಶಕರು ಎಡವಿದ್ದಾರೆ. ಯಾವ ಪಾಯಿಂಟಿಗೂ ಫೋಕಸ್ ಕೊಡದೇ, ಲಂಗುಲಗಾಮಿಲ್ಲದೇ ಕಥೆ ಓಡಿಸಿದ್ದಾರೆ.


ಅವರು ಮನಸ್ಸು ಮಾಡಿದ್ದರೆ, ಎಡಗೈ ಬಳಸುವವರ ಬಗ್ಗೆ ಅತ್ಯುತ್ತಮವಾದ ಕಥೆಯನ್ನು ತೆರೆಯ ಮೇಲೆ ತರಬಹುದಾಗಿತ್ತು. ಅವರ ಸಂಕಷ್ಟಗಳನ್ನು ನವಿರಾದ ಹಾಸ್ಯದಲ್ಲಿ ಕವರ್ ಮಾಡಿ, ಜನರಿಗೆ ಈ ಅಪರೂಪದ ಕೇಸ್ ಬಗ್ಗೆ ಅರಿವು ಮೂಡಿಸಬಹುದಿತ್ತು. ಈ ಸಿನೆಮಾ ನೋಡಿದ ನಂತರ, ಎಡಗೈ ಬಳಸುವವರ ಬಗ್ಗೆ ಜನರ ಅಭಿಪ್ರಾಯ ಬದಲಾಗುವಂತೆ ಮಾಡಬಹುದಿತ್ತು.‌


ನಮ್ಮ ಜನರು ಅಂಥವರ ಬಗ್ಗೆ ಸಾಫ್ಟ್ ಕಾರ್ನರ್ ಇಟ್ಟುಕೊಳ್ಳದೇ, ಸಾರ್ವಜನಿಕವಾಗಿ ನಿಂದನೆ ಮಾಡುತ್ತಾರೆ. ಇದರಿಂದ ಎಡಗೈ ಬಳಸುವವರಿಗೆ ಎಷ್ಟು ಮಾನಸಿಕ ಹಿಂಸೆಯಾಗುತ್ತದೆ ಅಂತ ಯಾರೂ ಯೋಚಿಸಲು ಹೋಗುವುದಿಲ್ಲ. ಆದರೆ ಇದೇನು ಖಾಯಿಲೆಯಲ್ಲ.


ಅಲ್ಲದೇ.. ಪ್ರತೀ ಕೆಲಸಕ್ಕೂ ಬಲಗೈ ಅನ್ನೇ ಬಳಸಬೇಕು ಅಂತ ಯಾವುದೇ ರೂಲ್ಸ್ ಕೂಡಾ ಇಲ್ಲ. ಅಕಸ್ಮಾತ್ ಇದ್ದರೂ ಅದನ್ನು ನಾವೇ ಮಾಡಿಕೊಂಡಿರುವುದಷ್ಟೇ.. ಅದಕ್ಕಾಗಿ ಎಡಗೈ ಬಳಸುವವರನ್ನು ನಿಂದಿಸುವುದು ಸರಿಯಲ್ಲ.


ಏಕೆಂದರೆ ಪ್ರಪಂಚದ ಜನಸಂಖ್ಯೆಯ ಏಳು ಪರ್ಸೆಂಟ್ ಜನರು ಎಡಗೈಯನ್ನು ಬಳಸುತ್ತಾರಂತೆ. ಆದರೆ ಅವರ ಮನೆಯವರು ಬಲವಂತವಾಗಿ ಬಲಗೈಯನ್ನು ಬಳಸುವಂತೆ ಒತ್ತಡ ತಂದಾಗ, ಅವರ ಬ್ರೈನ್ ಮ್ಯಾಪಿಂಗ್ನಲ್ಲಿ ಬದಲಾವಣೆಯಾಗಿ, ಅದರಿಂದ ಸ್ಟ್ರೆಸ್ ಉಂಟಾಗಿ, ಏನಾದರೂ ಮಾರಣಾಂತಿಕ ಅಚಾತುರ್ಯ ಸಂಭವಿಸುತ್ತದೆ ಎನ್ನುವುದೇ ಈ ಕಥೆಯ ಸಾರಾಂಶ.


ವಿಪರ್ಯಾಸವೆಂದರೆ ಸಿನೆಮಾ ಪೂರ್ತಿ ನೋಡಿದ ನಂತರ ನಮಗೆ ಈ ವಿಷಯ ನೆನಪಿರುವುದೇ ಇಲ್ಲ. ಬದಲಿಗೆ ನಿರ್ದೇಶಕರು ಹೇಳದೇ ಉಳಿಸಿರುವ ಅನೇಕ ಸವಾಲುಗಳ ಬಗ್ಗೆ ಪ್ರಶ್ನೆ ಮೂಡುತ್ತಿರುತ್ತದೆ. ಆ ಪ್ರಶ್ನೆಗಳ ಸರಣಿ ಎಷ್ಟು ದೊಡ್ಡದಾಗಿದೆ ಎಂದರೆ, ಚಿತ್ರದ ಮೂಲ ಉದ್ದೇಶವೇ ಮರೆತು ಹೋಗುತ್ತದೆ.


ನಿಜ ಹೇಳಬೇಕೆಂದರೆ ನಿರ್ದೇಶಕರು ಒಳ್ಳೆಯ ವಸ್ತುವನ್ನು ಆರಿಸಿಕೊಂಡಿದ್ದಾರೆ. ಪಾತ್ರಧಾರಿಗಳೂ ಸಹ ಅತ್ಯುತ್ತಮವಾಗಿ ನಟಿಸಿದ್ದಾರೆ. ಆದರೆ ಚಿತ್ರ ಸೋತಿರುವುದು ಚಿತ್ರಕಥೆಯಲ್ಲಿ. ಏಕೆಂದರೆ ಈಗಾಗಲೇ ಪ್ರಪಂಚದ ಎಲ್ಲಾ ಭಾಷೆಯ ಚಿತ್ರ ನೋಡಿರುವ ನಮಗೆ, ಸಿನೆಮಾ ಶುರುವಾದ ಐದೇ ನಿಮಿಷಕ್ಕೆ ಎಲ್ಲಾ ಅರ್ಥವಾಗಿ ಹೋಗುತ್ತದೆ. ಕಡೆಯಲ್ಲಿ ಅದನ್ನೇ ದೊಡ್ಡ ರಹಸ್ಯ ಎನ್ನುವಂತೆ ತೋರಿಸಿದ್ದು ಅಷ್ಟು ಪರಿಣಾಮಕಾರಿಯಾಗಿ ಕೆಲಸ ಮಾಡುವುದಿಲ್ಲ.


ಜೊತೆಗೆ ಚಿತ್ರದ ಕೊನೆಯಲ್ಲಿ, ಒಬ್ಬ ಗಂಡನ ಅಸಹಾಯಕತೆಯನ್ನು ಹೇಳಿದ್ದಾರೆ. ಆದರೆ ಅದನ್ನೂ ಸರಿಯಾಗಿ ಚಿತ್ರಿಸುವಲ್ಲಿ ಸೋತಿದ್ದಾರೆ. ನಿಜ ಹೇಳಬೇಕೆಂದರೆ 'ರಾಘವ'ನ ಪಾತ್ರ ನಮ್ಮ ಮನಸ್ಸಿನಲ್ಲಿ ಶಾಶ್ವತವಾದ ಸ್ಥಾನ ಪಡೆಯಬೇಕಿತ್ತು. ಆದರೆ ಹಾಗಾಗುವುದೇ ಇಲ್ಲ. ಏಕೆಂದರೆ ಮೊದಲೇ ಹೇಳಿದಂತೆ, ಚಿತ್ರ ಮುಗಿದರೂ ಮುಗಿಯದ ಪ್ರಶ್ನೆಗಳ ಸರಮಾಲೆ, ನಮಗೆ ಬೇರೇನೂ ಯೋಚಿಸದ ಹಾಗೆ ಮಾಡುತ್ತದೆ. ಇದರ ಮಧ್ಯೆ ರಾಘವನ ಪ್ರೀತಿ, ಹಿಡಿಯಲ್ಲಿ ಸೋರುವ ಮರಳಿನ ಹಾಗೆ ಸತ್ವವಿಲ್ಲದೇ ಸೋರಿ ಹೋಗುತ್ತದೆ.


ಯಾರು...? ಏನು..? ಯಾಕೆ...?


ಈ ಪ್ರಶ್ನೆಗಳು ನಮ್ಮನ್ನು ಬಿಟ್ಟೂಬಿಡದೇ ಕಾಡುತ್ತದೆ. ಕೊಲೆ ಮಾಡುವುದು ಇಷ್ಟು ಸುಲಭವಾ ಅಂತ ಮೈ ನಡುಗುತ್ತದೆ. ಅದಕ್ಕಿಂತಲೂ ಹೆಚ್ಚಾಗಿ... ಅಷ್ಟೆಲ್ಲಾ ಕೊಲೆ ಮಾಡಿ ತಪ್ಪಿಸಿಕೊಳ್ಳಬಹುದು ಎನ್ನುವ ಅಂಶವೇ ಬೆನ್ನಲ್ಲಿ ನಡುಕ ಮೂಡಿಸುತ್ತದೆ. ಆ ಕೊಲೆಗಳಿಗೂ ಸೂಕ್ತ ಕಾರಣ ಕೊಡಲಾಗದೇ, ಚಿತ್ರಕಥೆ ಪೂರ್ತಿಯಾಗಿ ಸೊರಗಿದೆ.


ಇದೆಲ್ಲದರ ಮಧ್ಯೆ ದಿಗಂತ್ ಆಗಾಗ ನಮ್ಮನ್ನು ನಗಿಸುವ ಪ್ರಯತ್ನ ಮಾಡುತ್ತಾರೆ. ಅದೃಷ್ಟವಶಾತ್ ಅವರು ಅದರಲ್ಲಿ‌ ಯಶಸ್ವಿಯಾಗಿದ್ದಾರೆ. ಉಳಿದಂತೆ ರಾಧಿಕಾ ನಾರಾಯಣ್ ಯಾಕೆ ಬಂದರು ಅಂತಲೇ ಅರ್ಥವಾಗುವುದಿಲ್ಲ. ನಿಧಿ ಸುಬ್ಬಯ್ಯನವರ ಪಾತ್ರದ ಬಗ್ಗೆ ಮರುಕ ಹುಟ್ಟುತ್ತದೆ. ಮತ್ತೊಬ್ಬ ಹೊಸನಟಿಯ ರೌದ್ರರೂಪ ಮಾತ್ರ ನೆನಪಿನಲ್ಲಿ ಉಳಿಯುತ್ತದೆ. 


ಸಿನೆಮಾ ಅಮೆಜಾ಼ನ್ ಪ್ರೈಮಿನಲ್ಲಿ ಲಭ್ಯವಿದೆ. ಆಸಕ್ತರು ಒಮ್ಮೆ ವೀಕ್ಷಿಸಬಹುದು.


-ಕೆ.ಎ.ಸೌಮ್ಯ, ಮೈಸೂರು





Popular posts from this blog

Paradha Movie Review (Telugu)

ಥಪ್ಪಡ್ (ಹಿಂದಿ)