Vellai Pookkal (Tamil) ಸಿನೆಮಾ ವಿಮರ್ಶೆ
ಎರಡು ರೇಖೆಗಳು ಸಮಾನಾಂತರವಾಗಿ ಚಲಿಸುತ್ತಿರುತ್ತವೆ. ಆದರೆ ಅವರೆಡೂ ರೇಖೆಗಳು ಒಂದನ್ನೊಂದು ಸಂಧಿಸುವುದಿಲ್ಲ. ಅಕಸ್ಮಾತ್ ಸಂಧಿಸಿದರೆ ಏನಾಗುತ್ತದೆ....?? ಈ ಸಿನೆಮಾ ಆಗುತ್ತದೆ. ಹೇಗೆ? ನೀವೇ ನೋಡಿ.. ರೇಖೆ-1 ಚೆನ್ನೈ ಪೊಲೀಸ್ ಅಧಿಕಾರಿ 'ರುದ್ರನ್' ಕೊಲೆ ಕೇಸುಗಳನ್ನು ಲೀಲಾಜಾಲವಾಗಿ ಬಿಡಿಸುವುದರಲ್ಲಿ ಪ್ರವೀಣ. ಸಿನೆಮಾದ ಶುರುವಿನಲ್ಲಿ ಆತ ಬಗೆಹರಿಸುವ ಕೊಲೆ ಕೇಸಿನಿಂದ ಆತ ಎಷ್ಟು ಚಾಣಾಕ್ಷ ಅಂತ ನಮಗೆ ಗೊತ್ತಾಗುತ್ತದೆ. ಆದರೆ ಎಷ್ಟೇ ಚಾಣಾಕ್ಷನಾಗಿರಲಿ ಸೇವೆಯ ಅವಧಿ ಮುಗಿದ ಮೇಲೆ ರಿಟೈರ್ ಆಗಲೇಬೇಕು. ಹಾಗೆಯೇ ರುದ್ರನ್ ಸಹ ತನ್ನ ಸೇವೆಯಿಂದ ನಿವೃತ್ತನಾಗುತ್ತಾನೆ. ನಂತರ ಆತ ತನ್ನ ಮಗ ನೆಲೆಸಿರುವ ದೇಶವಾದ ಅಮೆರಿಕಾಗೆ ಹೋಗುತ್ತಾನೆ. ಮಗ ಅಲ್ಲಿಯ ಬಿಳಿ ಹೆಂಡತಿಯನ್ನು ಮದುವೆ ಆಗಿದ್ದಾನೆಂದು ರುದ್ರನ್ ಕೋಪ ಮಾಡಿಕೊಂಡು ಬಹಳ ವರ್ಷಗಳಿಂದ ಮಗನನ್ನು ಮಾತು ಸಹ ಆಡಿಸಿರುವುದಿಲ್ಲ. ಈಗ ಆ ಮನಸ್ತಾಪ ಮರೆತು ಮಗನ ಜೊತೆ ಕಾಲ ಕಳೆಯಲು ಅಮೆರಿಕಾಗೆ ಹೋಗುತ್ತಾನೆ ರುದ್ರನ್. ಮಗ-ಸೊಸೆ ಇಬ್ಬರೂ ಆತನನ್ನು ತುಂಬು ಹೃದಯದಿಂದ ಸ್ವಾಗತಿಸುತ್ತಾರೆ. ಆತನ ಸೊಸೆ ಮಾವನಿಗಾಗಿ ತಮಿಳು ಮಾತನಾಡುವುದನ್ನು, ದಕ್ಷಿಣ ಭಾರತದ ತಿಂಡಿ ಮಾಡುವುದು ಕಲಿಯುತ್ತಿರುತ್ತಾಳೆ. ಆದರೂ ಯಾಕೋ ರುದ್ರನ್ ತನ್ನ ಮಗನನ್ನು ಒಪ್ಪಿಕೊಂಡಷ್ಟು ಮುಕ್ತವಾಗಿ ಸೊಸೆಯನ್ನು ಒಪ್ಪಿಕೊಳ್ಳುವುದಿಲ್ಲ. ಸೊಸೆ ಸೋಲೊಪ್ಪಿಕೊಳ್ಳದೇ ದಿನನಿತ್ಯವೂ ಮಾವನನ್ನು ಒಲಿಸಿಕೊಳ್ಳುವ ಪ್ರಯತ್ನದಲ್ಲ...