Paradha Movie Review (Telugu)
ಸಿನೆಮಾ ಕುರಿತ ಮಾತು:
ಅದೊಂದು ಹಳ್ಳಿ... ಅಲ್ಲಿ ವಿಚಿತ್ರವಾದ ಒಂದು ಪದ್ಧತಿ ಇದೆ. ಆ ಪದ್ಧತಿ 'ಹೆಣ್ಣುಮಕ್ಕಳಿಗೆ ಮಾತ್ರ' ಅಂತ ಬಿಡಿಸಿ ಹೇಳಬೇಕಾಗಿಲ್ಲ ಅಲ್ವಾ? ಅದೇನೆಂದರೆ ಆ ಊರಿನ ಹೆಣ್ಣುಮಕ್ಕಳು, ಒಂದು ವಯಸ್ಸಿಗೆ ಬಂದ ನಂತರ, ಮನೆಯಿಂದಾಚೆ ಬರುವಾಗ ಪರದೆಯಿಂದ ತಮ್ಮ ಮುಖ ಮುಚ್ಚಿಕೊಂಡೇ ಬರಬೇಕು.
ಅವರು ತಮ್ಮ ಕುಟುಂಬದವರಿಗಲ್ಲದೇ, ಬೇರೆ ಯಾರಿಗೂ ತಮ್ಮ ಮುಖವನ್ನು ತೋರಿಸಬಾರದು. ಊರಿನಲ್ಲಿ ಓಡಾಡುವಾಗಲೂ ಆ ಪರದೆ, ಅವರ ಮುಖದ ಮೇಲೆ ಕಡ್ಡಾಯವಾಗಿ ಇರಲೇಬೇಕು. ಅಕಸ್ಮಾತ್ ಒಂದು ಕ್ಷಣಕ್ಕಾದರೂ ಅವರು ಆ ಪರದೆ ತೆಗೆದಿದ್ದು ಗೊತ್ತಾದರೆ, ಅದಕ್ಕೆ ಸಿಗುವ ಶಿಕ್ಷೆ ಏನು ಗೊತ್ತಾ?
ಆತ್ಮಾಹುತಿ ಅರ್ಥಾತ್ ಮರಣದಂಡನೆ!!
'ಓ.. ಏನು? ಪರದೆ ತೆಗೆದುಬಿಟ್ಟರೆ ಸಾಯಿಸಿ ಬಿಡುತ್ತಾರಾ? ಈಗಿನ ಕಾಲದಲ್ಲೂ ಈ ರೀತಿ ನಡೆಯುತ್ತಾ?' ಅಂತ ಕೆಲವರು ಉಡಾಫೆಯಾಗಿ ಮಾತನಾಡಬಹುದು. ಆದರೆ ಒಂದು ಪದ ಇದೆ.. 'ಸಮೂಹ ಸನ್ನಿ' ಅಂತ. ಆ ಹುಚ್ಚು ಹಿಡಿದ ಜನರು ಏನು ಬೇಕಾದರೂ ಮಾಡಬಹುದು.
ಈ ಹಳ್ಳಿಯಲ್ಲಿ ಆಗಿರುವುದೂ ಅದೇ!
ಇಲ್ಲಿನ ಜನರ ಪ್ರಕಾರ ಆ ಹಳ್ಳಿಯ ಭವಿಷ್ಯವೇ ಈ ಹೆಣ್ಣುಮಕ್ಕಳ ಕೈಲಿದೆ. ಇವರು ತಮ್ಮ ಮುಖ ಕಾಣದಂತೆ ಕವರ್ ಮಾಡಿಕೊಂಡು ಓಡಾಡಿದರೆ ಮಾತ್ರವೇ, ಹಳ್ಳಿಯ ಜನ ನೆಮ್ಮದಿಯಿಂದ ಇರಲು ಸಾಧ್ಯವಂತೆ..! ಅಕಸ್ಮಾತ್ ಯಾರಾದರೂ ಅಸಡ್ಡೆಯಿಂದ ತಮ್ಮ ಮುಖಪರದೆಯನ್ನು ತೆಗೆದುಬಿಟ್ಟರೆ ಅಥವಾ ತಮ್ಮ ಮುಖವನ್ನು ಬೇರೆ ಯಾರಿಗಾದರೂ ತೋರಿಸಿಬಿಟ್ಟರೆ ದೊಡ್ಡ ಅನಾಹುತವಾಗುತ್ತದೆಯಂತೆ...!
ಅದರಿಂದ ಆ ಹಳ್ಳಿಯ ಗರ್ಭಿಣಿಯರ, ಇನ್ನೂ ಹುಟ್ಟದ ಮಕ್ಕಳು ಹೊಟ್ಟೆಯಲ್ಲಿಯೇ ಸತ್ತು ಹೋಗುತ್ತವಂತೆ. ಅದಕ್ಕಾಗಿ ಪರದೆ ತೆಗೆದ ಹುಡುಗಿಯನ್ನು ಊರಿನ ದೇವಿಗೆ ಬಲಿಕೊಟ್ಟು, ಎಳೆಯ ಜೀವವನ್ನು ಉಳಿಸಿಕೊಳ್ಳಲಾಗುತ್ತದೆ. ಇದೇ ರೀತಿಯಾಗಿ ಆ ಹಳ್ಳಿಯಲ್ಲಿ ಎಷ್ಟೋ ಜನ ಹೆಣ್ಣುಮಕ್ಕಳು ಪ್ರಾಣ ತೆರುತ್ತಾ ಬಂದಿದ್ದಾರೆ. ಅವರಲ್ಲಿ ನಮ್ಮ ನಾಯಕಿಯ ತಾಯಿ ಕೂಡಾ ಒಬ್ಬರು.
ಒಟ್ಟಿನಲ್ಲಿ 'ಹಳ್ಳಿಯ ಹೆಣ್ಣು ಮಕ್ಕಳು ತಮ್ಮ ಮುಖ ಪರದೆ ತೆರೆದರೆ, ಹಳ್ಳಿಗೆ ಏನೋ ಕೆಡಕಾಗುವುದು' ಎಂಬ ಅಂಶ, ಹಳ್ಳಿಯವರ ಮನಸ್ಸಿನಲ್ಲಿ ಎಷ್ಟು ಗಟ್ಟಿಯಾಗಿ ಬೇರೂರಿರುತ್ತದೆ ಎಂದರೆ, ಅವರೆಲ್ಲಾ ಸೇರಿಕೊಂಡು ಆ ಹಳ್ಳಿಯ ಗ್ರಾಮದೇವತೆಯಾದ ಜ್ವಾಲಮ್ಮಳ ಮುಖಕ್ಕೂ ಪರದೆ ಹಾಕಿಬಿಟ್ಟಿರುತ್ತಾರೆ.
'ಇದು ಕೇವಲ ಮೌಢ್ಯ, ಈ ಆಚರಣೆಗೆ ಯಾವುದೇ ಅರ್ಥವಿಲ್ಲ, ಹೆಣ್ಣುಮಕ್ಕಳು ಹಾಕುವ ಪರದೆಗೂ, ಮಕ್ಕಳ ಸಾವಿಗೂ ಸಂಬಂಧವಿಲ್ಲ' ಅಂತ ಹೇಳುವವರು, ಅಲ್ಲಿ ಯಾರೂ ಇರುವುದಲ್ಲ. ಅಕಸ್ಮಾತ್ ಯಾರಾದರೂ ಹೇಳಿದರೂ, ಆ ಹಳ್ಳಿಯ ಜನ ಕೇಳುವ ಪರಿಸ್ಥಿತಿಯಲ್ಲಿ ಇರಲಿಲ್ಲ.
ಹೀಗಿರುವಾಗ ಒಮ್ಮೆ ಕಥಾನಾಯಕಿ ಹಾಕಿದ್ದ ಮುಖಪರದೆಯು, ಗಾಳಿಗೆ ತೆರೆದುಕೊಂಡು ಹಾರಿ ಹೋಗುತ್ತದೆ. ನಾಯಕಿ ಅದನ್ನು ಕೂಡಲೇ ಹಿಡಿದುಕೊಂಡು ಬಂದು, ಧರಿಸಿ ಮನೆಗೆ ಬರುತ್ತಾಳೆ. ಆದರೆ ಈ ಗ್ಯಾಪಿನಲ್ಲಿ ಯಾರೋ ಆಕೆಯ ಫೋಟೋ ತೆಗೆದು, ಅದು ನ್ಯಾಷನಲ್ ಮ್ಯಾಗಜೀ಼ನ್ ಮುಖಪುಟದಲ್ಲಿ ಬಂದು ಬಿಡುತ್ತದೆ.
ಇದನ್ನು ನೋಡಿದ ಹಳ್ಳಿಯ ಜನರು ಕೆರಳಿ ಕೆಂಡವಾಗಿ ಆಕೆಯನ್ನು ಬಲಿಕೊಡಲು ಹೊರಟು ಬಿಡುತ್ತಾರೆ. ಕಡೆಗೆ ಆಕೆಗೊಂದು ಅವಕಾಶ ಕೊಟ್ಟು 'ಆ ಫೋಟೋ ತನಗರಿವಿಲ್ಲದೇ ತೆಗೆದಿದ್ದು ಅಂತ ಪ್ರೂವ್ ಮಾಡು' ಅಂತ ಹೇಳುತ್ತಾರೆ. ಅದಕ್ಕಾಗಿ ನಾಯಕಿ ಫೋಟೋಗ್ರಾಫರ್ ಅನ್ನು ಹುಡುಕಿಕೊಂಡು ಹಿಮಾಲಯಕ್ಕೆ ಹೊರಡುತ್ತಾಳೆ.
ಈ ಯಾತ್ರೆಯಲ್ಲಿ ಅವಳ ಜೊತೆ ಇಬ್ಬರು ಹೆಣ್ಣುಮಕ್ಕಳು ಜೊತೆಗೂಡುತ್ತಾರೆ. ಅವರಿಬ್ಬರೂ ಸೇರಿಕೊಂಡು, ಆಕೆಯನ್ನು ಮತ್ತು ಆಕೆಯ ನಂಬಿಕೆಯನ್ನು ಎಷ್ಟು ಬದಲಿಸಲು ಪ್ರಯತ್ನಿಸಿದರೂ ಕೂಡಾ, ಆಕೆ ತನ್ನ ಮುಖದ ಮೇಲಿನಿಂದ ಪರದೆ ತೆಗೆಯಲು ಒಪ್ಪುವುದಿಲ್ಲ.
ಏಕೆಂದರೆ ಆಕೆ ಹಿಮಾಲಯಕ್ಕೆ ಬಂದಿರುವುದು, 'ಅಂದು ಮುಖ ಪರದೆಯನ್ನು ತಾನಾಗಿಯೇ ತೆರೆದಿರಲಿಲ್ಲ' ಮತ್ತು 'ಆ ಫೋಟೋ ತೆಗೆದಿದ್ದರೆ ಹಿಂದೆ ತನ್ನ ಪಾತ್ರವಿಲ್ಲ' ಎನ್ನುವುದನ್ನು ಸಾಬೀತು ಮಾಡಲು ಹೊರತೂ, 'ಪರದೆ ತೆಗೆಯುವುದರಿಂದ ಯಾರಿಗೂ ಯಾವುದೇ ಕೆಡಕಾಗುವುದಿಲ್ಲ' ಅಂತ ಪ್ರೂವ್ ಮಾಡುವುದು ಆಕೆಯ ಉದ್ದೇಶ ಆಗಿರುವುದಿಲ್ಲ.
ಹಾಗಾಗಿ ಅವಳು ಯಾತ್ರೆಯ ಉದ್ದಕ್ಕೂ ಪರದೆ ಹಾಕಿಕೊಂಡೇ ಇರುತ್ತಾಳೆ ಮತ್ತು ತನ್ನ ಗಮನವನ್ನೆಲ್ಲಾ ಆ ಫೋಟೋಗ್ರಾಫರ್ ಅನ್ನು ಹುಡುಕುವತ್ತ ಮಾತ್ರ ಕೇಂದ್ರೀಕರಿಸುತ್ತಾಳೆ. ಕಡೆಗೆ ಅವಳ ಜೊತೆ ಎಂತಹಾ ಕಹಿ ಘಟನೆ ನಡೆಯುತ್ತದೆ ಎಂದರೆ, ಕೂಡಲೇ ನಾಯಕಿ ತನ್ನ ಪರದೆಯನ್ನು ಶಾಶ್ವತವಾಗಿ ತೆಗೆದು ಎಸೆಯುತ್ತಾಳೆ.
ನಂತರ ತಾನು ಮುಖಪರದೆ ಕಿತ್ತೆಸೆದರೂ ತನ್ನ ಗ್ರಾಮಕ್ಕೆ ಮತ್ತು ಗ್ರಾಮದವರಿಗೆ ಯಾವುದೇ ಕೆಡುಕಾಗದೇ ಇರುವುದನ್ನು ಕಂಡು ಆಕೆಗೆ ಆಶ್ಚರ್ಯವಾಗುತ್ತದೆ. ಕೂಡಲೇ ಆಕೆ ಗ್ರಾಮ ದೇವತೆಯ ಮುಖಕ್ಕೆ ಹಾಕಿದ್ದ ಪರದೆಯನ್ನು ಸುಟ್ಟು ಹಾಕುತ್ತಾಳೆ. ಆಗ ಎಲ್ಲರಿಗೂ ದೇವಿ ಜ್ವಾಲಮ್ಮಳ ಮುಖ ಸ್ಪಷ್ಟವಾಗಿ ಕಾಣಲು ಶುರು ಆಗುತ್ತದೆ.
ಮುಖದ ಜೊತೆಯಲ್ಲಿ ದೇವಿ ಹಿಡಿದಿರುವ ಆಯುಧ ಕೂಡಾ ಎಲ್ಲರಿಗೂ ಕಾಣುತ್ತದೆ. ಇದರರ್ಥ.... ಹೆಣ್ಣು ತನ್ನನ್ನು ತಾನು ರಕ್ಷಣೆ ಮಾಡಿಕೊಳ್ಳಬೇಕು ಎಂದರೆ, ಕೇವಲ ಪರದೆಯೊಳಗೆ ಬಂಧಿಯಾಗಿದ್ದರೆ ಮಾತ್ರ ಸಾಲದು, ಬದಲಿಗೆ ಆತ್ಮರಕ್ಷಣಾ ವಿದ್ಯೆಯನ್ನು ಸಹಾ ಕಲಿತಿರಬೇಕು ಅಂತ..
ಇದನ್ನು ದೇವಿ ಮೊದಲಿನಿಂದಲೂ ಸಾರುತ್ತಿದ್ದಳು. ಆದರೆ ಯಾರೂ ಅರ್ಥಮಾಡಿಕೊಂಡಿರಲಿಲ್ಲ ಅಷ್ಟೇ! ಈಗ ಅದು ಎಲ್ಲರಿಗೂ ಅರ್ಥವಾಗಿ, ಹಳ್ಳಿಯ ಹೆಣ್ಣುಮಕ್ಕಳೆಲ್ಲಾ ತಮ್ಮ ತಮ್ಮ ಮುಖ ಪರದೆಗಳನ್ನು ಕಿತ್ತೆಸೆಯುವುದರ ಜೊತೆ ಸಿನೆಮಾ ಮುಗಿಯುತ್ತದೆ.
ಸಿನೆಮಾ ನಿರೂಪಣೆ ಬಹಳ ಸಾಧಾರಣವಾಗಿದೆ. ಅನಗತ್ಯವಾಗಿ ಉದ್ದಕ್ಕೆ ಎಳೆಯಲಾಗಿದೆ ಅಂತ ಕೂಡಾ ಅಲ್ಲಲ್ಲಿ ಅನಿಸುತ್ತದೆ. ಕ್ಲೈಮ್ಯಾಕ್ಸ್ ಅನ್ನು ನಾವು ಮೊದಲೇ ಊಹೆ ಮಾಡಬಹುದಾದ್ದರಿಂದ, ಅಂತ್ಯದಲ್ಲಿ ಯಾವ ಅಚ್ಚರಿಯೂ ಆಗುವುದಿಲ್ಲ. ಸಿನೆಮಾ ಕೂಡಾ ಅಂತಹಾ ಹಿಟ್ ಆಗಿಲ್ಲ. ಆದರೆ ಈ ಸಿನೆಮಾ ನನ್ನಲ್ಲಿ ಕೆಲವು ಪ್ರಶ್ನೆಗಳನ್ನು ಹುಟ್ಟು ಹಾಕಿದೆ.
ಅದನ್ನು ಇಲ್ಲಿ ಹಂಚಿಕೊಳ್ಳುತ್ತೇನೆ.
ಮನಸ್ಸಿನ ಮಾತು:
ಒಂದಿಡೀ ಜನಾಂಗದ 'ಸಂಸ್ಕೃತಿ'ಯನ್ನು ಕಾಪಾಡುವ ಭಾರ, ನಮ್ಮ ಹೆಣ್ಣುಮಕ್ಕಳ ಹೆಗಲ ಮೇಲಿದೆ ಅಂತ ಸಮಾಜ ನಂಬಿಕೊಂಡಿದೆ. ಅದರಲ್ಲೂ ಆಕೆ ತೊಡುವ ಬಟ್ಟೆಯ ಆಧಾರದ ಮೇಲೆಯೇ, 'ಸಂಸ್ಕೃತಿ'ಯ ಅಳಿವು- ಉಳಿವು ನಿಂತಿದೆ! ಆಕೆ ಎಂದಿಗೂ ಮೈತುಂಬಾ ಬಟ್ಟೆ ಧರಿಸಿ, ಹಿರಿಯರ ಮಾತಿಗೆ ತಗ್ಗಿ-ಬಗ್ಗಿ ನಡೆದು, ಯಾರೇನೇ ನಿಂದಿಸಿದರೂ ಮನಸ್ಸಿಗೆ ಹಚ್ಚಿಕೊಳ್ಳದೇ, ನಗುನಗುತ್ತಾ ಪುರುಷ ವರ್ಗದ ಸೇವೆ ಮಾಡಬೇಕು.
'ಸಂಸ್ಕಾರ' ಇರುವ ಹೆಣ್ಣು ಎಂದರೆ ಇವಳೇ...
ಇಂತಹಾ ಹೆಣ್ಣನ್ನು ಸಮಾಜ ಗೌರವಿಸುತ್ತದೆ(!) ಮುಂದಿನ ಪೀಳಿಗೆಯ ಹೆಣ್ಣುಮಕ್ಕಳಿಗೆ ಇವಳನ್ನು ಉದಾಹರಣೆಯಾಗಿ ತೋರಿಸಿ, 'ನೀವೂ ಅದೇ ರೀತಿ ಇರಬೇಕು, ಆಗಲೇ ನಿಮಗೆ ಗೌರವ, ಅದೇ ನಿಮಗೆ ರಕ್ಷೆ' ಅಂತ ಪಾಠ ಮಾಡುತ್ತದೆ.
ಆದರೆ ಇಷ್ಟನ್ನು ಮಾಡಿದ ಮಾತ್ರಕ್ಕೆ ಆಕೆ ಸುರಕ್ಷಿತಳೇ? ಸಮಾಜ ತನ್ನ ಮೇಲೆ ಹೇರಿರುವ ಕಟ್ಟುಪಾಡುಗಳನ್ನು ಆಕೆ ಮರು ಮಾತಿಲ್ಲದೇ ನಿಭಾಯಿಸಿದರೂ, ಅದೇ ಸಮಾಜ ಆಕೆಯನ್ನು ನೆಮ್ಮದಿಯಿಂದ ಜೀವಿಸಲು ಬಿಡುವುದೇ? ಆಕೆಗೆ ತೊಂದರೆ ಎದುರಾದಾಗ 'ಆಕೆ ತಾವು ಹೇಳಿದಂತೆಯೇ ನಡೆಯುತ್ತಿದ್ದಾಳೆ' ಎನ್ನುವ ಕಾರಣಕ್ಕೆ, ಸಮಾಜ ಅವಳ ಸಹಾಯಕ್ಕೆ ಮುಂದಾಗುವುದೇ?
ಖಂಡಿತಾ ಇಲ್ಲ...!!
ಏಕೆಂದರೆ ಕಥಾನಾಯಕಿಯಂತೆ ಎಲ್ಲಾ ಹೆಣ್ಣುಮಕ್ಕಳೂ, ಮೈ ತುಂಬಾ ಬಟ್ಟೆ ಧರಿಸಿ, ಸಮಾಜ ಮಾಡಿರುವ ಕಟ್ಟುಪಾಡಿನಂತೆ ನಡೆದುಕೊಂಡರೂ, ಅನಾದಿ ಕಾಲದಿಂದಲೂ ಅಕೆಯ ಮೇಲೆ ನಿರಂತರವಾಗಿ ದೌರ್ಜನ್ಯ ನಡೆಯುತ್ತಲೇ ಬರುತ್ತಿದೆ. ಮೈ ತುಂಬಾ ಬಟ್ಟೆ ಹಾಕಿ, ಮುಖ ಕಾಣದಂತೆ ಪರದೆ ಹಾಕಿದ್ದಾಳೆಂಬ ಕಾರಣಕ್ಕೆ ಆಕೆಯ ಮೇಲಿನ ಅತ್ಯಾಚಾರ ನಿಲ್ಲುವುದಿಲ್ಲ, ಆಕೆಯ ಮೇಲೆ ನಡೆಯುವ ದೌರ್ಜನ್ಯ ಕಡಿಮೆಯಾಗುವುದಿಲ್ಲ ಅಥವಾ ಬೀದಿಯಲ್ಲಿ ನಡೆಯುವಾಗ ಪೋಲಿಗಳು ಆಕೆಯನ್ನು ರೇಗಿಸದೇ ಬಿಡುವುದಿಲ್ಲ.
ಮೈ ತುಂಬಾ ಸೀರೆಯುಟ್ಟು ಆಕೆ ಒಂಟಿಯಾಗಿ ಬರುತ್ತಿದ್ದರೆ, 'ಅವಳು ನಮ್ಮ ಸಂಸ್ಕೃತಿ ರಕ್ಷಿಸುತ್ತಿದ್ದಾಳೆ ಬಿಡು' ಅಂತ ಯಾರೂ ಆಕೆಯನ್ನು ಸುಮ್ಮನೆ ಹೋಗಲು ಬಿಡುವುದಿಲ್ಲ. ಬದಲಿಗೆ ಅವಳನ್ನು ತಡೆದು, ಹುರಿದು ಮುಕ್ಕುತ್ತಾರೆ. ನಂತರ ಅದಕ್ಕೂ ಆಕೆಯನ್ನೇ ದೂರುತ್ತಾರೆ.
ಈ ಇಪ್ಪತ್ತೊಂದನೇ ಶತಮಾನದಲ್ಲಿಯೂ, ಒಂದು ಹೆಣ್ಣಿನ ಮೇಲೆ ಅತ್ಯಾಚಾರ ನಡೆದಾಗ, ಜನರು ಮೊದಲ ಪ್ರತಿಕ್ರಿಯೆ ಕೊಡುವುದು 'ಆಕೆ ಯಾವ ಬಟ್ಟೆ ಧರಿಸಿದ್ದಳು?' ಅಂತಲೇ... ಮೊದಲೇ ಹೇಳಿದಂತೆ ಆಕೆ ಧರಿಸಿರುವ ಬಟ್ಟೆಯಿಂದಲೇ ಆಕೆಯ ಚಾರಿತ್ರ್ಯ ಅಳೆಯಲಾಗುತ್ತದೆ.
ಜೊತೆಗೆ ಅಷ್ಟು ಹೊತ್ತಿನಲ್ಲಿ ಆಕೆ, ಆ ಸ್ಥಳಕ್ಕೆ ಒಂಟಿಯಾಗಿ ಯಾಕೆ ಹೋದಳು ಅಂತ ಹೇಳುತ್ತಾ, ಎಲ್ಲಾ ಅಪರಾಧವನ್ನೂ ಆಕೆಯ ತಲೆಗೆ ಕಟ್ಟುತ್ತಾರೆ ಹೊರತೂ, ಅದೇ ಸಮಯದಲ್ಲಿ 'ಅತ್ಯಾಚಾರಿಗಳು ಆ ಸ್ಥಳದಲ್ಲಿ ಏನು ಮಾಡುತ್ತಿದ್ದರು?' ಅಂತ ಯಾರೊಬ್ಬರೂ ಇದುವರೆಗೂ ಕೇಳಿಲ್ಲ.
ಹಾಗಾದರೆ ನಾವು ತಪ್ಪಿರುವುದೆಲ್ಲಿ?
ಇದೇ ಪ್ರಶ್ನೆಯನ್ನು ಒಮ್ಮೆ ನಾಯಕಿ ತನ್ನ ಜೊತೆಗಾರರೊಂದಿಗೆ ಕೇಳುತ್ತಾಳೆ. ನಿಜ ಹೇಳಬೇಕೆಂದರೆ ಅದು ನಮ್ಮೆಲ್ಲರ ಪ್ರಶ್ನೆಯೂ ಆಗಿದೆ. ನಾವು ಈ ಸಮಾಜ ಹೇಳಿದಂತೆಯೇ ಕೇಳಿದರೂ, ಅವರು ಮಾಡಿರುವ ಕಾನೂನಿನಂತೆಯೇ ನಡೆದುಕೊಂಡರೂ, ನಾವೇಕೆ ಸುರಕ್ಷಿತವಾಗಿಲ್ಲ? ನಮ್ಮನ್ನು ರಕ್ಷಿಸಬೇಕಾದವರೇ ನಮ್ಮ ಭಕ್ಷಣೆಗೆ ಏಕೆ ತೊಡಗುತ್ತಾರೆ? ಹಾಗಾದರೆ ನಮ್ಮ ರಕ್ಷಣೆಗೆ ನಾವು ಮಾಡಬೇಕಾದುದಾದರೂ ಏನು?
ಇದಕ್ಕೆ ಉತ್ತರ ಜ್ವಾಲಮ್ಮಳ ಹತ್ತಿರವಿದೆ. ಆಕೆಯ ಕೈಯ್ಯಲ್ಲಿರುವ ಆಯುಧವೇ ಇದಕ್ಕೆ ತಕ್ಕ ಉತ್ತರ. ಹೆಣ್ಣಾದವಳು ತನ್ನ ಮಾನ ಮತ್ತು ಪ್ರಾಣವನ್ನು ತನಗೆ ತಾನೇ ರಕ್ಷಿಸಿಕೊಳ್ಳಬೇಕು. ಅದಕ್ಕಾಗಿ ಆಕೆ ಆತ್ಮರಕ್ಷಣಾ ವಿದ್ಯೆಯನ್ನು ಕಲಿಯಬೇಕು.
ಅದು ಬಿಟ್ಟು ಕೇವಲ ಮುಖ ಮುಚ್ಚಿಕೊಂಡೋ ಅಥವಾ ಹೊರ ಜಗತ್ತಿನ ಸಂಪರ್ಕ ಕಡಿದುಕೊಂಡೋ, ಬದುಕಿರುವ ತನಕವೂ ನಾಲ್ಕು ಗೋಡೆಯ ಮಧ್ಯೆ ಉಳಿದು ಬಿಡುವುದು ಪರಿಹಾರವಲ್ಲ. ಬದಲಿಗೆ ಹೊರ ಬಂದು ಅಕ್ಷರ ಕಲಿತು, ಸ್ವಾವಲಂಬಿಯಾಗಿ, ಆತ್ಮವಿಶ್ವಾಸದಿಂದ ಮತ್ತು ಧೈರ್ಯದಿಂದ ಬದುಕಬೇಕು. ಜೊತೆಗೆ ಎಂತಹಾ ಪರಿಸ್ಥಿತಿಯಲ್ಲಿಯೂ ತನ್ನನ್ನು ತಾನು ರಕ್ಷಿಸಿಕೊಳ್ಳುವುದನ್ನು ಸಹಾ ಆಕೆ ಕಲಿತಿರಬೇಕು.
ಇಷ್ಟೆಲ್ಲಾ ಚಿಂತನ- ಮಂಥನ ಮಾಡಿದ ನಂತರ, ಇಲ್ಲಿ ನನಗೆ ಕಾಡುತ್ತಿರುವ ಕಟ್ಟಕಡೆಯ ಪ್ರಶ್ನೆ ಎಂದರೆ... ಸಂಸ್ಕೃತಿಯನ್ನು ಕಾಪಾಡುವ ಹೊಣೆ ಕೇವಲ ಮಹಿಳೆಗೆ ಮಾತ್ರ ಇರುವುದೇ? ಪುರುಷರಿಗೆ ಆ ಹೊಣೆ ಇಲ್ಲವೇ ಎನ್ನುವುದು....!!
ಧನ್ಯವಾದಗಳು.
************
ಕೆ.ಎ.ಸೌಮ್ಯ
ಮೈಸೂರು
