Interstellar (English Movie)
[Direction: Christopher Nolan] (ಇಂಗ್ಲೀಷ್ ಸಿನೆಮಾ ನಾ ಕಂಡಂತೆ) ಮನೆಯಲ್ಲಿ ಒಂಟಿಯಾಗಿರುತ್ತೀರಿ. ಒಂದು ಸಣ್ಣ ಪುಸ್ತಕದ ಪುಟ ತೆರೆಯುವ ಶಬ್ದವೂ ರೋಡ್ ರೋಲರಿನಂತೆ ಕೇಳಿಸುವಷ್ಟು ನಿಶ್ಯಬ್ದ ಆವರಿಸಿರುತ್ತದೆ. ಆಗ ದಿಢೀರನೆ ಮೇಜಿನ ಮೇಲಿಂದ ಯಾವುದೋ ವಸ್ತು ಅಥವಾ ಪುಸ್ತಕದ ರ‌್ಯಾಕಿನಿಂದ ಒಂದು ಪುಸ್ತಕ ದಭಾಲನೆ ಬಿದ್ದರೆ ಹೇಗಾಗಬಹುದು?? ಆಗೋದೇನು? ಹೃದಯ ಒಡೆದು ಹೋಗುವುದೊಂದು ಬಾಕಿ. ಕಣ್ಣಿಗೆ ಕಾಣದ ಯಾವುದೇ ಶಕ್ತಿಯನ್ನು ನಾವು ಭೂತ ಎಂದೇ ತಿಳಿಯುತ್ತೇವೆ. ಉದಾಹರಣೆಗೆ ಬಾಹ್ಯ ಒತ್ತಡ ಇಲ್ಲದೇ ಯಾವ ವಸ್ತುವೂ ಚಲಿಸೋಲ್ಲ ಎನ್ನುವುದು ಸೈನ್ಸ್. ಅದೇ ರೀತಿ ಯಾವ ಒತ್ತಡವೂ ಇಲ್ಲದೇ ಪುಸ್ತಕಗಳು ತಾನೇ ತಾನಾಗಿ ಬೀಳತೊಡಗಿದಾಗ ಇದು ಭೂತದ ಚೇಷ್ಟೆಯೇ ಎಂಬ ತೀರ್ಮಾನಕ್ಕೆ ಬರುತ್ತೇವೆ. ನಾಯಕ ಕೂಪರ್‌ನ ಮುದ್ದು ಮಗಳಾದ ಮರ್ಫ್ ಸಹ ಇದನ್ನು ಮಾಡುತ್ತಿರುವುದು ಭೂತ ಅಂತಲೇ ತಿಳಿದಿರುತ್ತಾಳೆ. ಆದರೆ ಅವಳು ತನ್ನ ಕೊಠಡಿಯಲ್ಲಿ ಭೂತವಿದೆ, ಅದು ಪುಸ್ತಕ ಬೀಳಿಸುತ್ತಿದೆ ಅಂತ ಹೇಳಿದಾಗ ಯಾರೂ ಸಹ ನಂಬದೇ ಆಕೆಯ ಮಾತುಗಳನ್ನು ನಿರ್ಲಕ್ಷ್ಯ ಮಾಡುತ್ತಾರೆ. ಆದರೆ ಮುರ್ಫ್ ಹೆದರದೇ ಇದನ್ನು ಪ್ರತಿನಿತ್ಯವೂ ಗಮನಿಸುತ್ತಿರುತ್ತಾಳೆ. ಅದರ ಪ್ರಕಾರ ರ‌್ಯಾಕಿನ ಪುಸ್ತಕಗಳು ಪ್ರತಿದಿನ ಒಂದು ವ್ಯವಸ್ಥಿತ ರೂಪದಲ್ಲಿ ಬೀಳುತ್ತಿರುತ್ತದೆ. ಅಂದರೆ ಪುಸ್ತಕಗಳು ಯಾವುದೋ ಸಂಕೇತ ಕೊಡುತ್ತಿರುವ ಹಾಗೆ. ಇದರರ್ಥ ಭೂತ ಮಾತನಾಡಲು ಪ್ರಯತ್ನ ಪಡುತ್ತಿದೆ. ಏನೋ ಹೇಳ...