ಮಹಾನುಭಾವ (ತೆಲುಗು)

"ಮಾನಸಿಕ ಖಾಯಿಲೆ ಕುರಿತ ಸಿನೆಮಾ"


ಶರೀರದಲ್ಲಿ ಉಂಟಾಗುವ ನೂನ್ಯತೆಗಳ ಬಗ್ಗೆ ಎಲ್ಲರೂ ಸಿನೆಮಾ ಮಾಡುತ್ತಾರೆ. ನಮ್ಮ ಹೀರೋಗಳೂ ಸಹ ಕಣ್ಣಿಲ್ಲದೇ, ಕಾಲಿಲ್ಲದೇ ಇರುವ ಹಾಗೆ ನಟಿಸಿ ವೀಕ್ಷಕರ ಮೆಚ್ಚುಗೆಯನ್ನೂ ಗಳಿಸಿದ್ದಾರೆ. ಆದರೆ ಮನಸ್ಸಿನಲ್ಲಿ ಉಂಟಾಗುವ ನೂನ್ಯತೆಗಳ ಬಗ್ಗೆ ಯಾರೂ ಜಾಸ್ತಿ ಬರೆದೂ ಇಲ್ಲ, ಸಿನೆಮಾ ಕೂಡಾ ಮಾಡಿಲ್ಲ.



ಅಕಸ್ಮಾತ್ ಅಲ್ಲೊಂದು ಇಲ್ಲೊಂದು ಸಿನೆಮಾ ಮಾಡಿದ್ದರೂ, ಅದು ಮನಸ್ಸಿನ ಎಲ್ಲಾ ಖಾಯಿಲೆಗಳನ್ನು ಒಟ್ಟಿಗೆ ಸೇರಿಸಿ, ಅದಕ್ಕೆ 'ಹುಚ್ಚು' ಎಂಬ ಪಟ್ಟಿ ಕಟ್ಟಿ, ಹುಚ್ಚರೆಂದರೆ ಯಾವಾಗಲೂ ತಲೆ ಕೆದರಿಕೊಂಡು, ಬಟ್ಟೆ ಹರಿದುಕೊಂಡೇ ಇರುತ್ತಾರೆ, ತಮ್ಮನ್ನು ನೋಡಲು ಬಂದವರಿಗೆ ಕಚ್ಚುತ್ತಾರೆ ಎನ್ನುವ ತಪ್ಪು ಸಂದೇಶ ಕೊಡುವ ಚಿತ್ರಗಳೇ ಜಾಸ್ತಿ‌ ಇರುವುದು.



ನಾಲ್ಕು ಜನರಲ್ಲಿ ಒಬ್ಬರಿಗೆ ಮನಸ್ಸಿನ ಖಾಯಿಲೆ ಇರುತ್ತದೆ ಅಂತ ಹೇಳುತ್ತದೆ ಮನಃಶಾಸ್ತ್ರ. ಅಲ್ಲದೇ ಮಾನಸಿಕ ಖಾಯಿಲೆಯ ಎಲ್ಲಾ ಲಕ್ಷಣಗಳೂ ಹುಚ್ಚೇ ಆಗಬೇಕೆಂದಿಲ್ಲ. ಅದರಲ್ಲಿ‌ ಕೆಲವು ಖಾಯಿಲೆಗಳು ಯಾರಿಗೂ ಹಾನಿ ಮಾಡದ, ಮೈಲ್ಡ್ ಖಾಯಿಲೆಯ ಜಾತಿಗೆ ಸೇರಿವೆ. ಅದರಲ್ಲಿ‌ ಒಂದು ಒಸಿಡಿ.



ಅಂದರೆ "ಆಬ್ಸೆಸಿವ್ ಕಂಪಲ್ಸೀವ್ ಡಿಸಾರ್ಡರ್". 


ಇದು ಒಂದು ಮಾನಸಿಕ ರೋಗವಾದರೂ, ಅವರು ಎಲ್ಲರಂತೆ ಬಟ್ಟೆ ಹರಿದುಕೊಂಡು, ಲಾಗ ಹಾಕಿಕೊಂಡು ಇರುವುದಿಲ್ಲ. ಇನ್‌ಫ್ಯಾಕ್ಟ್ ಅವರಿಗೆ ಆ ಖಾಯಿಲೆ ಇದೆ ಎನ್ನುವುದೇ ನಮಗೆ ಗೊತ್ತಾಗುವುದಿಲ್ಲ.



ಇಂತಹಾ ಒಂದು ಮಾನಸಿಕ ರೋಗ ಲಕ್ಷಣದ ಬಗ್ಗೆ ವಿವರವಾಗಿ ಹೇಳಿರುವ ಚಿತ್ರ, ತೆಲುಗಿನ ಶರ್ವಾನಂದ ಅಭಿನಯಿಸಿರುವ "ಮಹಾನುಭಾವ".



ಈ ಖಾಯಿಲೆಯ ಲಕ್ಷಣವೇನೆಂದರೆ, ಎಲ್ಲವೂ ನೀಟ್ ಅಂಡ್ ಕ್ಲೀನ್ ಆಗಿರಬೇಕು ಅಂತ ಈ ರೋಗಿಗಳು ಭಾವಿಸುತ್ತಾರೆ. ಅವರಿಗೆ ಗಲೀಜು ಎಂದರೆ ಆಗುವುದಿಲ್ಲ. ಜೊತೆಗೆ ವಿಪರೀತ ಹೆಲ್ತ್ ಕಾನ್ಶಿಯಸ್ ಇರುತ್ತದೆ. ಬೇರೆಯವರಿಗೆ ರೇಜಿಗೆ ಹುಟ್ಟುವಷ್ಟು ಮಟ್ಟಿಗೆ ತಮ್ಮ ಸುತ್ತಲಿನ ಪರಿಸರವನ್ನು ಕ್ಲೀನಾಗಿ ಇಟ್ಟುಕೊಳ್ಳುತ್ತಾರೆ. ಆದರೆ ನಮ್ಮಲ್ಲಿ ಯಾರಿಗೂ, ಕ್ಲೀನ್ ಆಗಿ ಇರಬೇಕೆನ್ನುವುದೂ ಸಹಾ ಒಂದು ಮಾನಸಿಕ ಖಾಯಿಲೆ ಎನ್ನುವ ವಿಷಯ ಗೊತ್ತೇ ಇಲ್ಲ.



ಈ ಸಿನೆಮಾದ ಶುರುವಿನಲ್ಲಿ ನಮ್ಮ ನಾಯಕ ತನ್ನದಲ್ಲದ ಒಂದು ಬೈಕ್ ಅನ್ನು, ಅದು ತುಂಬಾ ಕೊಳೆಯಾಗಿದೆ ಎನ್ನುವ ಕಾರಣಕ್ಕೆ ತೊಳೆಯುತ್ತಾನೆ. ಅಲ್ಲಿಂದ ಅವನಲ್ಲಿರುವ ಖಾಯಿಲೆಯ ಲಕ್ಷಣಗಳು ಅನಾವರಣಗೊಳ್ಳುತ್ತಾ ಹೋಗುತ್ತದೆ. ಆಫೀಸಿನಲ್ಲಿ ಎಲ್ಲಾ ವಸ್ತುಗಳನ್ನೂ ನೀಟ್ ಆಗಿ ಜೋಡಿಸಿ ಇಡುವುದು, ಓಪನ್ ಇರುವ ಪೆನ್ನಿಗೆ ಕ್ಯಾಪ್ ಹಾಕುವುದು, ಇದೆಲ್ಲಾ ಮಾಡಿದ ನಂತರ ಆಗಾಗ ಸ್ಯಾನಿಟೈಜ಼ರ್ ಹಾಕಿ ಕೈ ವಾಶ್ ಮಾಡಿಕೊಳ್ಳುವುದು.. ಇದು ನಾಯಕನ ಗುಣಲಕ್ಷಣಗಳು.



ಇದರಲ್ಲಿ ಓಸಿಡಿ ಖಾಯಿಲೆಯಿಂದ ಬಳಲುವವರ ಎಲ್ಲಾ ಲಕ್ಷಣಗಳನ್ನೂ ನಮ್ಮ ನಾಯಕ ಹೊತ್ತುಕೊಂಡಿರುವುದನ್ನು ನೋಡುತ್ತೇವೆ. ಆದರೆ ಎಲ್ಲಾ ಗೊತ್ತಿದ್ದೂ ಜನ ಅವನನ್ನು ಮತ್ತಷ್ಟು ಆಡಿಕೊಂಡು ನಗುತ್ತಾರೆ ಹೊರತೂ, ಯಾರೂ ಆತನಿಗೆ ಸಪೋರ್ಟ್ ಮಾಡುವುದಿಲ್ಲ. ಮತ್ತಷ್ಟು ಗಲೀಜು ಮಾಡಿ, ಅವನಿಗೆ ರೇಜಿಗೆ ಹುಟ್ಟಿಸಿ ಮಜಾ ನೋಡುತ್ತಾರೆ ಹೊರತೂ, ಅವನಿಗೆ ಅಂತ ಒಂದು ಕಂಫರ್ಟಬಲ್ ಜೋ಼ನ್ ಅನ್ನು ಕ್ರಿಯೇಟ್ ಮಾಡಿ ಕೊಡುವುದಿಲ್ಲ. ನಾಯಕ ಇದಕ್ಕೆ ಹೊಂದಿಕೊಳ್ಳಲೂ ಆಗದೇ, ಸುಮ್ಮನಿರಲೂ ಆಗದೇ ಯಾತನೆ ಅನುಭವಿಸುತ್ತಾನೆ.



ಯಾರೋ ಯಾಕೆ? 


ಆತನ ತಾಯಿಗೇ ತನ್ನ ಮಗನಿಗಿರುವ ಖಾಯಿಲೆಯ ಲಕ್ಷಣಗಳ ಬಗ್ಗೆ ಗೊತ್ತಿರುವುದಿಲ್ಲ. 'ಮದುವೆಯಾದ ಮೇಲೆ ಮಕ್ಕಳನ್ನು ಹೆರಲೇಬೇಕು' ಎಂಬ ಲೋಕ ನಿಯಮದಷ್ಟೇ ಸುಲಭವಾಗಿ, ಎಲ್ಲರೂ ಆತನ ಖಾಯಿಲೆಯನ್ನು ಹಗುರವಾಗಿ ಪರಿಗಣಿಸುತ್ತಾರೆ‌. 


'ನೀನು ಇದೇ ಥರ ಮಾಡುತ್ತಿದ್ದರೆ, ನಿನ್ನನ್ನು ಯಾರೂ ಮದುವೆ ಆಗುವುದಿಲ್ಲ,  ಯಾರಾದರೂ ಪ್ರೀತಿಸಲು‌ ಮುಂದೆ ಬಂದರೂ, ಹೆದರಿಕೊಂಡು ಓಡಿ ಹೋಗುತ್ತಾಳೆ' ಅಂತ ಹೆದರಿಸುತ್ತಾರೆ ಹೊರತೂ, ಇದಕ್ಕೆ ಪರಿಹಾರವೇನು ಅಂತ ಯಾರೂ ಚಿಂತಿಸುವುದಿಲ್ಲ. ನಾಯಕನ ಅಮ್ಮ, ಸ್ನೇಹಿತ, ನಾಯಕಿ ಯಾರಿಗೂ ಇದು ಬೇಕಿಲ್ಲ. 


ಎಲ್ಲರಿಗೂ ಇದೊಂದು ಜೋಕಿನಂತೆ ಅಷ್ಟೇ.



ಆದರೆ ನಿಜವಾದ ಓಸಿಡಿಗಳಿಗೆ ನಾಯಕ ಮಾಡುವ, ಮಾಡುತ್ತಿರುವ ಪ್ರತಿಯೊಂದು ನಡೆಯೂ ಪರ್ಸನಲ್ ಆಗಿ ಕಾಡುತ್ತದೆ. ಏಕೆಂದರೆ ನಿರ್ದೇಶಕರು ಅದನ್ನು ಅಷ್ಟು ಭಾವನಾತ್ಮಕವಾಗಿ ಕಟ್ಟಿ ಕೊಟ್ಟಿದ್ದಾರೆ. ಜ್ವರ ಬಂದರೆ ತಾಯಿಯನ್ನೇ ಹತ್ತಿರ ಸೇರಿಸದಿರುವುದು, ಆಕೆಯ ಕೈತುತ್ತನ್ನು ನಿರಾಕರಿಸುವುದು.. ಇದೆಲ್ಲವೂ ಆ ಖಾಯಿಲೆಯ ಕಾರಣದಿಂದ ಹೊರತೂ, ಅವರು ಬೇಕು ಬೇಕೂಂತ ಹಾಗೆ ಮಾಡುವುದಿಲ್ಲ. ಅದನ್ನು ನಾಯಕನ ಪಾತ್ರದ ಮೂಲಕ ನಿರ್ದೇಶಕರು ನಮಗೆ ಅರ್ಥ ಮಾಡಿಸುತ್ತಾರೆ. ಆದರೆ ಸಿನೆಮಾದ ಇತರೇ ಪಾತ್ರಗಳಿಗೆ ಇದು ಗೊತ್ತಾಗುವುದಿಲ್ಲ. ಅವರು ಕಡೆಯವರೆಗೂ ಅವನ ಖಾಯಿಲೆಯನ್ನು ತಮಾಷೆಯ ವಸ್ತುವಿನಂತೆಯೇ ನೋಡುತ್ತಾರೆ.




ನನಗಂತೂ ಈ ಸಿನೆಮಾ ನೋಡಿ, 'ಪ್ರಪಂಚದಲ್ಲಿ ನಮ್ಮಂಥವರೂ ಇರ್ತಾರೆ' ಅಂತನ್ನಿಸಿ ತುಂಬಾ ಖುಷಿ ಆಯ್ತು. ಈ ಸಿನೆಮಾ ನಮ್ಮಂಥವರಿಗೆ ಒಂದು ಭಾವನಾತ್ಮಕ ಬೆಂಬಲ ಕೊಟ್ಟಿತು ಎಂದರೂ ತಪ್ಪಲ್ಲ. 


ಹಿಂದೆ ತ್ರಿವೇಣಿಯವರು ಮಾತ್ರವೇ ಮಾನಸಿಕ ರೋಗ ಲಕ್ಷಣಗಳ ಬಗ್ಗೆ, ಅದು ಉಂಟಾಗುವ ಹಿನ್ನೆಲೆಯ ಬಗ್ಗೆ ಕಾದಂಬರಿ ಬರೆಯುತ್ತಿದ್ದರು. ಅವರ ನಂತರ ಒಂದು ಮಾನಸಿಕ ಸಮಸ್ಯೆಯನ್ನು ಇಷ್ಟು ಅರ್ಥಪೂರ್ಣವಾಗಿ ನಮಗೆ ಹೇಳಿದ್ದು ಈ ನಿರ್ದೇಶಕರೇ ಅಂತ ನನಗೆ ಅನ್ನಿಸುತ್ತದೆ.



ನಮಗೆ ನಿಜಕ್ಕೂ ಇಂತಹಾ ಸಿನೆಮಾಗಳು ಹೆಚ್ಚು ಬೇಕು. ಏಕೆಂದರೆ ಯಾರ ಮನಸ್ಸಿನಲ್ಲಿ ಏನಿರುತ್ತದೆ ಅಂತ ಯಾರಿಗೂ ಗೊತ್ತಾಗುವುದಿಲ್ಲ. ಮೇಲೆ ಕಂಡದ್ದೇ ನಿಜ ಎಂದುಕೊಳ್ಳುತ್ತೇವೆ. ಈ ರೀತಿಯ ಸಿನೆಮಾಗಳಿಂದ ಜನರಲ್ಲಿ ಅರಿವು ಮೂಡಿಸಿದರೆ, ಅದರಿಂದ ಆ ರೋಗದಿಂದ ಬಳಲುವವರಿಗೆ ಒಂದು ಕಂಫರ್ಟ್ ಸಿಕ್ಕರೂ ಸಿಗಬಹುದು.

************


-ಕೆ.ಎ.ಸೌಮ್ಯ
ಮೈಸೂರು











Popular posts from this blog

Paradha Movie Review (Telugu)

ಥಪ್ಪಡ್ (ಹಿಂದಿ)

ಎಡಗೈ ಅಪಘಾತಕ್ಕೆ ಕಾರಣ (ಕನ್ನಡ)