ಛೂ ಮಂತರ್ (ಕನ್ನಡ)
ಕರ್ವ ನಿರ್ದೇಶಕರಾದ ನವನೀತ್ ಅವರ "ಛೂ ಮಂತರ್" ಸಿನೆಮಾದ ಮೇಲೆ ಸ್ವಲ್ಪ ನಿರೀಕ್ಷೆಗಳು ಹೆಚ್ಚಾಗಿಯೇ ಇದ್ದವು. ಏಕೆಂದರೆ ನಾವು ಯಾವುದೇ ಸಿನೆಮಾ ನೋಡುವಾಗ, ಆ ನಿರ್ದೇಶಕರ ಹಿಂದಿನ ಸಿನೆಮಾವನ್ನು ನೆನಪಿಸಿಕೊಂಡು, ತುಲನೆ ಮಾಡಿಯೇ ಮಾಡುತ್ತೇವೆ.
ಜೊತೆಗೆ ಈಗಾಗಲೇ ಬೇಕಾದಷ್ಟು ಹಾರರ್ ಮೂವಿಗಳನ್ನು ನೋಡಿರುವ ನಮಗೆ, ಈ ನಿರ್ದೇಶಕರು ತಮ್ಮ ಚಿತ್ರದಲ್ಲಿ ಎಲ್ಲಿಯೂ ನೀಡಿರದಂತಹಾ ಅನುಭವ ಕೊಡ್ತಾರೆ ಅನ್ನುವ ನಿರೀಕ್ಷೆಯೂ ಸ್ವಲ್ಪ ಜಾಸ್ತಿಯೇ ಇತ್ತು. ಇಷ್ಟೆಲ್ಲಾ ನಿರೀಕ್ಷೆಗಳನ್ನು ಇಟ್ಟುಕೊಂಡು ಸಿನೆಮಾ ನೋಡಲು ಕೂತೆ.
ಮೊದಲಿಗೆ ಇಷ್ಟವಾಗಿದ್ದು ಚಿತ್ರಕಥೆ.
ಎಲ್ಲಿಯೂ ಬೋರ್ ಆಗದ ಹಾಗೆ, ಎರಡು ಟೈಮ್ ಲೈನ್ಗಳನ್ನು ಒಂದೇ ಸಮನೆ ತೆಗೆದುಕೊಂಡು ಹೋಗಿದ್ದು ತುಂಬಾ ಚೆನ್ನಾಗಿತ್ತು. ಇದು ಎಲ್ಲಿಯೂ ಮಿಸ್ ಹೊಡೆದಿಲ್ಲ ಮತ್ತು ಇದೆರೆಡೂ ಬೇರೆ ಬೇರೆ ಅಂತ ಎಲ್ಲಿಯೂ ಅನುಮಾನ ಬರುವುದಿಲ್ಲ.
2024ರಲ್ಲಿ ಇರುವ ಟೆಕ್ನಾಲಜಿ, 2002ರಲ್ಲಿ ಇಲ್ಲದೇ ಇರುವುದನ್ನು ಕೂಡಾ ಕಥೆಯಲ್ಲಿ ಎಲ್ಲೂ ಬಿಟ್ಟು ಕೊಟ್ಟಿಲ್ಲ. ನಮಗೆ ವಿಷಯವೆಲ್ಲಾ ಗೊತ್ತಾಗಿ, ಮತ್ತೊಂದು ಬಾರಿ ಸಿನೆಮಾ ನೋಡಲು ಕುಳಿತರೂ ಸಹ, ಒಂದೇ ಒಂದು ಮಿಸ್ಟೇಕ್ ಕೂಡಾ ಕಂಡು ಬರುವುದಿಲ್ಲ. ಅಷ್ಟು ಪರ್ಫೆಕ್ಟ್ ಆಗಿ ಚಿತ್ರಕಥೆ ಹೆಣೆದಿದ್ದಾರೆ.
ಇನ್ನು ಶರಣ್ ಅಂತೂ ಡೈನಮೋ ಪಾತ್ರದಲ್ಲಿ ನಟಿಸಿಲ್ಲ, ಬದಲಿಗೆ ಜೀವಿಸಿದ್ದಾರೆ. ಇಷ್ಟು ದಿನ ಸೀರಿಯಸ್ ಚಿತ್ರದಲ್ಲಿಯೂ ಕಾಮೆಡಿ ಮಾಡುತ್ತಿದ್ದ ನಟ, ಇದರಲ್ಲಿ ಗಂಭೀರವಾಗಿಯೇ ನಟಿಸಿದ್ದಾರೆ. ಅವರು ಮಾಡುತ್ತಿದ್ದ ಕಾಮೆಡಿ ಚಿಕ್ಕಣ್ಣ ಅವರಿಗೆ ವರ್ಗಾವಣೆಯಾಗಿದೆ. ಅವರು ಅಲ್ಲಲ್ಲಿ ಆಡುವ ಒಂದೆರೆಡು ದ್ವಂದ್ವಾರ್ಥದ ಸಂಭಾಷಣೆಗಳನ್ನು ಬಿಟ್ಟಿದ್ದರೆ, ಸಿನೆಮಾಗೆ ಮತ್ತೊಂದಷ್ಟು ತೂಕ ಬರುತ್ತಿತ್ತು.
ಇನ್ನೊಬ್ಬ ಸಹನಟ ನಕುಲ್`ರದ್ದು ಆಟಕ್ಕುಂಟು ಲೆಕ್ಕಕ್ಕಿಲ್ಲ ಪರ್ಫಾರ್ಮೆನ್ಸ್. ಅವರು ಸಿನೆಮಾದಲ್ಲಿ ಯಾಕಿದ್ದಾರೆ ಅಂತ ಕಡೆಗೂ ಗೊತ್ತಾಗಲಿಲ್ಲ. ಇನ್ನುಳಿದಂತೆ ಉಳಿದೆಲ್ಲರ ನಟನೆ ತುಂಬಾನೇ ಚೆನ್ನಾಗಿದೆ.
ನನಗೆ ನಿಜಕ್ಕೂ ಇಷ್ಟವಾಗಿದ್ದು ಈ ಸಿನೆಮಾದ ನಿರೂಪಣಾ ಶೈಲಿ.
ಕಥೆ ಗೊತ್ತಿರುವವರು ಕೂಡಾ ಆಸಕ್ತಿಯಿಂದ ನೋಡುವ ಹಾಗೆ ಕಥೆಯನ್ನು ತೆಗೆದುಕೊಂಡು ಹೋಗಿದ್ದಾರೆ. ಸಾಮಾನ್ಯವಾಗಿ ದೆವ್ವದ ಕಥೆಗಳೆಂದರೆ ಫ್ಲಾಶ್ ಬ್ಯಾಕ್ ಸ್ಟೋರಿ ಇರುವುದು ಕಾಮನ್. ಆದರೆ ಆ ಕಥೆಯನ್ನು ಬೋರ್ ಆಗದ ಹಾಗೆ ನಿಭಾಯಿಸಿರುವ ರೀತಿಯೇ ಅನನ್ಯವಾದುದು.
ಮೊದಲ ಫ್ಲಾಶ್ ಬ್ಯಾಕ್ ಸ್ಟೋರಿ ನಮಗೆ ಈಗಿನ ಕಥೆಯಂತೆಯೇ ಕಂಡು, ಮುಗಿದ ನಂತರವೇ ಅದು 'ಹಳೆಯ ಕಥೆ' ಅನ್ನುವುದು ಗೊತ್ತಾಗುವುದು. ಹಾಗಾಗಿ ನಮಗೆ ಹಳೆಯ ಕಥೆಯನ್ನು ನೋಡುತ್ತಿದ್ದೇವೆ ಅಂತಲೇ ಗೊತ್ತಾಗದೇ, ಬೋರ್ ಆಗುವುದಿಲ್ಲ.
ಮತ್ತೊಂದು ಫ್ಲಾಶ್ ಬ್ಯಾಕ್ ಸ್ಟೋರಿ ಎಂದರೆ, ಆ ಮನೆಗೆ ಮಾರ್ಗನ್ ಹೌಸ್ ಎಂಬ ಹೆಸರು ಯಾಕೆ ಬಂತು ಎನ್ನುವುದು. ಇದರಲ್ಲಿ ಹಿಂದೆ ನಡೆದಿರುವ ಕಥೆಯನ್ನು, ಎಲ್ಲಿಯೂ ಎಳೆಯದೆ ಸಿಂಪಲ್ ಆಗಿ ಹೇಳಿ ಮುಗಿಸಿದ್ದಾರೆ. ಜೊತೆಗೆ ಆ ಕಥೆ ಹೇಳಲು ಕರೆಸಿರುವ ನಟನನ್ನು ಕಂಡು ನಾವು ಶಾಕ್ ಆಗಿ, ನಂತರ ಆ ಶಾಕ್ 'ಸರ್ಪ್ರೈಸ್' ಆಗಿ ಬದಲಾಗಿ ನಮಗೆ ಖುಷಿ ಕೊಡುತ್ತದೆ. ಹಾಗಾಗಿ ಆ ಕಥೆಯೂ ನಮಗೆ ಬರ್ಡನ್ ಅನ್ನಿಸುವುದಿಲ್ಲ.
ಹಿನ್ನೆಲೆ ಕಥೆಯಿಂದಲೇ ರೂಪುಗೊಳ್ಳುವ ಹಾರರ್ ಸಿನೆಮಾವನ್ನು, ಬರೀ ಹಳೆಯ ಕಥೆ ಹೇಳುತ್ತಾ ಬೇಸರ ಪಡಿಸದೇ, ಹೊಸಾ ನಿರೂಪಣೆಯಿಂದ ನಿರ್ದೇಶಕರ ನಮ್ಮ ಮನಸ್ಸು ಗೆದ್ದಿದ್ದಾರೆ. ಅಲ್ಲಲ್ಲೇ ಬರುವ ಸ್ಟಾರ್ ನಟರ ಕೇಮಿಯೋಗಳು ನಮ್ಮ ಉತ್ಸಾಹವನ್ನು ಮತ್ತಷ್ಟು ಹೆಚ್ಚು ಮಾಡುತ್ತವೆ.
ಈ ರೀತಿಯ ನಿರೂಪಣಾ ಶೈಲಿ ಕನ್ನಡಕ್ಕೆ ಹೊಸತು ಅಂತಲೇ ಹೇಳಬಹುದು. ಅಂತಹಾ ಒಂದು ಪರ್ಫೆಕ್ಟ್ ಶೈಲಿಯ ಸಿನೆಮಾ ಕನ್ನಡದಲ್ಲಿ ಬಂದಿದೆ ಎಂದರೆ, ಕನ್ನಡಿಗಳಾಗಿ ನನಗಂತೂ ಹೆಮ್ಮೆಯ ವಿಷಯ.
ದೆವ್ವ ಬಿಡಿಸುವ ಸೀನ್ ಬೇರೆಲ್ಲಾ ಸಿನೆಮಾಗಳಂತೆ, ಮತ್ತದೇ ದೃಶ್ಯಗಳ ಪುನರಾವರ್ತನೆಯಾಗಿದೆ. ಜೊತೆಗೆ ಕ್ಲೈಮ್ಯಾಕ್ಸಿನಲ್ಲಿ ನಾಯಕಿಯ ಬಗ್ಗೆ ಕೊಡುವ ಒಂದು ಟ್ವಿಸ್ಟ್ ಅನ್ನು ನಾವು ಮೊದಲೇ ಊಹಿಸಿರುವುದರಿಂದ, ನಮಗೆ ಹೆಚ್ಚೇನೂ ಶಾಕ್ ಅನ್ನಿಸುವುದಿಲ್ಲ.
ಆದರೆ ನಿರ್ದೇಶಕರು ಇದನ್ನೆಲ್ಲಾ ತುಂಬಾ ಎಳೆಯದೇ ಚುಟುಕಾಗಿ ಮುಗಿಸಿ, ಮುಂದಿನ ವಿಷಯಕ್ಕೆ ಹೋಗಿ ಬಿಡುತ್ತಾರೆ. ಆ ನಂತರ ಒಂದು ಸಕತ್ ಟ್ವಿಸ್ಟ್ ಕೊಡ್ತಾರೆ ನೋಡಿ.... ಆಗ ನಮ್ಮ ತಲೆ ಗಿರಗಿರ ಅಂತ ತಿರುಗಿ ಬಿಡುತ್ತದೆ. ಯಾಕೆಂದರೆ ಅದನ್ನು ನಮ್ಮಿಂದ ಊಹಿಸಲು ಸಾಧ್ಯವೇ ಇಲ್ಲ.
ಎಲ್ಲಾ ಸಿನೆಮಾಗಳಲ್ಲಿಯೂ ಒಂದಾದರೂ ಕಲಿಯುವ ಅಂಶಗಳಿರುತ್ತವೆ.
ಈ ಸಿನೆಮಾದಿಂದ ನಾನು ಕಲಿತಿದ್ದೇನೆಂದರೆ, ನಮ್ಮಲ್ಲಿರುವ ಪಾಸಿಟೀವ್ ಎನರ್ಜಿ ಇಂದ ಹಾಂಟೆಡ್ ಸ್ಥಳಗಳಲ್ಲಿರುವ ನೆಗೇಟಿವ್ ಎನರ್ಜಿಯನ್ನು ಡಾಮಿನೇಟ್ ಮಾಡಬಹುದು ಎನ್ನುವುದು. ಇದು ನಿರ್ದೇಶಕರ ಯೋಚನೆಯಾಗಿದ್ದರೂ, ಇದನ್ನು ನಾವು ಕೂಡಾ ಇಂಪ್ಲಿಮೆಂಟ್ ಮಾಡಿಕೊಳ್ಳಬಹುದು. ದೆವ್ವ, ಭೂತಗಳು ನಿಜಕ್ಕೂ ಇದೆಯೋ ಇಲ್ಲವೋ.. ಅಕಸ್ಮಾತ್ ಅವು ಎದುರಾಯೇ ಬಿಟ್ಟರೆ ನಾವು ಹೆದರದೇ, ನಿರ್ದೇಶಕರು ಹೇಳಿರುವ ಮಾತಿನಂತೆ ಅದನ್ನು ಎದುರಿಸಬಹುದು.
ಹಾಡುಗಳೆಲ್ಲಾವೂ ಕೇಳಬಹುದು.
ಸಿನೆಮಾ ಜೊತೆ ನೋಡುವಾಗ ಬೋರ್ ಎನಿಸುವುದಿಲ್ಲ. ಬಿಜಿಎಮ್ ಕೂಡಾ ಪರ್ಫೆಕ್ಟ್ ಆಗಿದೆ. ಚಿಕ್ಕಣ್ಣ ಅವರ ಕಾಮೆಡಿ ಸಕತ್ತಾಗಿದೆ. ಅವರಿಂದ ನನಗೆ ಒಂದು ಹೊಸಾ ಮನೋರೋಗದ ಬಗ್ಗೆ ಗೊತ್ತಾಯ್ತು. ಗೊತ್ತಾದ ನಂತರ, 'ಅದು ರೋಗವಾಗಿದ್ದರೂ ಪರವಾಗಿಲ್ಲ, ನನಗೂ ಇರಬಾರದಾ?' ಅಂತನಿಸಲು ಶುರುವಾಯ್ತು. ಅದ್ಯಾವ ರೋಗ ಅಂತ ತಿಳಿದುಕೊಳ್ಳುವುದಕ್ಕೆ ನೀವು ಸಿನೆಮಾ ನೋಡಬೇಕು.
ಒಟ್ಟಿನಲ್ಲಿ ಇದೊಂದು ಪರ್ಫೆಕ್ಟ್ ಸಿನೆಮಾ.
ಕನ್ನಡದಲ್ಲಿ ಈ ರೀತಿಯ ವಿಭಿನ್ನ ಶೈಲಿಯ ಸಿನೆಮಾ ಹಿಂದೆಂದೂ ಬಂದಿಲ್ಲ ಅಂತ ಹೇಳಬಹುದು. ಕಥೆ ಏನು ಅಂತ ಗೊತ್ತಿದ್ದರೂ, ಹೊಸತನದಿಂದ ಕೂಡಿರುವ ನಿರೂಪಣೆ ನಿಮ್ಮನ್ನು ಕಟ್ಟಿ ಹಾಕುವುದರಲ್ಲಿ ಸಂದೇಹವಿಲ್ಲ.
ಹಳೆಯ ಸ್ಟಿರಿಯೋ ಟೈಪ್ ಸಿನೆಮಾಗಳ ಹಾಗೆ ಮಾಡದೇ, ದೆವ್ವವನ್ನು ಅತಿಯಾಗಿ ವೈಭವೀಕರಿಸದೇ, ಯಾವುದನ್ನೂ ಅತಿಯಾಗಿ ಫೋಕಸ್ ಮಾಡದೇ, ಎಲ್ಲವನ್ನೂ ಚಿಕ್ಕದಾಗಿ ಮತ್ತು ಚೊಕ್ಕವಾಗಿ ತೋರಿಸಿರುವ ನಿರ್ದೇಶಕರಿಗೆ ಹ್ಯಾಟ್ಸಾಫ್.
****************
ಕೆ.ಎ.ಸೌಮ್ಯ
ಮೈಸೂರು
