ಲಕ್ಕಿ ಭಾಸ್ಕರ್ (ತೆಲುಗು)
ನಾವು ಚಿಕ್ಕವರಿರುವಾಗ 'ದೊಡ್ಡವರಾದ ಮೇಲೆ ಒಳ್ಳೆಯವರಾಗಬೇಕು, ಕೆಲಸದಲ್ಲಿ ಪ್ರಾಮಾಣಿಕರಾಗಿರಬೇಕು' ಅಂತಲೇ ಎಲ್ಲರೂ ಹೇಳಿಕೊಡುತ್ತಾರೆ. ಅದೇ ರೀತಿ ಇರುವ ಪ್ರಯತ್ನ ಕೂಡಾ ನಾವು ಮಾಡುತ್ತೇವೆ. ಆದರೆ ಅದರಿಂದ ನಮಗೆ ಸಿಗುವುದು ಕೇವಲ ನಿಂದನೆ ಮತ್ತು ಅಪಮಾನ ಮಾತ್ರ.
ಲಕ್ಕಿ ಭಾಸ್ಕರ್ ಕಥೆಯೂ ಅಂಥದ್ದೇ.
ತನ್ನಲ್ಲಿರುವ ದುಡ್ಡಿನಿಂದ ತೃಪ್ತನಾಗಿ ಸಂಸಾರ ಮಾಡಿಕೊಂಡಿದ್ದ ಭಾಸ್ಕರ್ಗೆ, ಹೆಚ್ಚು ದುಡ್ಡು ಮಾಡಬೇಕು ಎಂಬ ಆಸೆ ಹುಟ್ಟಿಸಿದ್ದು ಇದೇ ಸಮಾಜ ಮತ್ತು ಸಮಾಜದ ಜನರು. ಅವರು ಮಾಡುವ ಮೋಸ ಮತ್ತು ಅವಮಾನಗಳಿಂದ ಪ್ರೇರಿತನಾಗಿ ಅವನು ದುಡ್ಡು ಮಾಡಲು ಹೊರಡುತ್ತಾನೆ.
ಇಲ್ಲೊಂದು ವಿಷಯ ಹೇಳಬೇಕು.
ಇದು ಬೇರೆಲ್ಲಾ ಸಿನಿಮಾಗಳಂತೆಯೇ ಶುರುವಾದರೂ, ಇದರ ನಾಯಕಿಯ ಪರಿಚಯ ತುಂಬಾ ವಿಶೇಷವಾಗಿತ್ತು. ಆಕೆಯನ್ನು ತುಂಬಾ ಮಹತ್ವದ ಪಾತ್ರ ಎನ್ನುವಂತೆ ಪರಿಚಯ ಮಾಡಿಸಿದ್ದು ನನಗಂತೂ ತುಂಬಾ ಇಷ್ಟವಾಯಿತು.
ಇನ್ನು ಕಥೆಯ ವಿಚಾರಕ್ಕೆ ಬಂದರೆ...
ಕಥೆ ನಮಗೆ ತುಂಬಾನೇ ಕನೆಕ್ಟ್ ಆಗುತ್ತದೆ. ಏಕೆಂದರೆ ನಾವು 90% ಜನ ಭಾಸ್ಕರನಂತೆಯೇ ಇದ್ದೇವೆ. ಮೇಲೆ ಏಳಲೂ ಆಗದೇ, ಕೆಳಗೆ ಬೀಳಲೂ ಸಹ ಆಗದೇ, ತ್ರಿಶಂಕುವಿನ ಥರಾ ಮಧ್ಯದಲ್ಲಿ ಸಿಲುಕಿಕೊಂಡಿದ್ದೇವೆ. ಒಳ್ಳೆಯ ಮನಸ್ಸು, ಒಳ್ಳೆಯ ಗುಣ, ಪ್ರಾಮಾಣಿಕತೆ ಇದೆಲ್ಲಾ ಇದ್ದರೂ ಕೂಡಾ, ಯಾರೂ ಗುರುತಿಸದೇ ಇರುವುದು ನಮಗೆ ನೋವುಂಟು ಮಾಡುತ್ತದೆ. ಹಾಗಾಗಿ ಇದರ ಪ್ರತ್ಯಕ್ಷ ಅನುಭವ ಇರುವವರಿಗೆ ಭಾಸ್ಕರ್ ಮಾಡಿದ್ದು ತಪ್ಪು ಅಂತ ಯಾವತ್ತಿಗೂ ಅನಿಸುವುದಿಲ್ಲ.
ಮೊದಲಿಗೆ ಅವನು ತುಂಬಾ ಆಸೆ ಪಟ್ಟಿದ್ದ ಅಸಿಸ್ಟೆಂಟ್ ರೀಜನಲ್ ಮ್ಯಾನೇಜರ್ ಹುದ್ದೆ ಅವನ ಕೈ ತಪ್ಪಿ ಹೋಗುತ್ತದೆ. ಅವನಿಗಿಷ್ಟವಾದ ಕಾರ್ ಕೂಡ ಬೇರೆಯವರ ಪಾಲಾಗುತ್ತದೆ. ಅವನ ಬಳಿ ಇದ್ದ ಏಕೈಕ ಸ್ಕೂಟರ್ ಅನ್ನು ಸಾಲಗಾರ ಬಂದು ಹೊತ್ತೊಯ್ಯುತ್ತಾನೆ. ಕಡೆಗೆ ಈಗಿರುವ ಕೆಲಸ ಉಳಿದದ್ದೇ ಹೆಚ್ಚು ಎನ್ನುವಂತಾಗುತ್ತದೆ.
ಹೀಗೆ ಭಾಸ್ಕರನಿಗೆ ಒಂದರ ಹಿಂದೆ ಒಂದು ದುರಾದೃಷ್ಟ ಕಾಡಲು ಶುರು ಆಗುತ್ತದೆ.
ನಾವು ಅವನ ಜಾಗದಲ್ಲಿ ಇದ್ದಿದ್ದರೆ ಏನು ಮಾಡುತ್ತಿದ್ದೆವೋ ಗೊತ್ತಿಲ್ಲ... ಆದರೆ ಭಾಸ್ಕರ್ ಅದೆಲ್ಲವನ್ನೂ ಸಮರ್ಥವಾಗಿ ಎದುರಿಸುತ್ತಾನೆ. ತನ್ನ ಕಾರಣದಿಂದ ಕುಟುಂಬದ ಸದಸ್ಯರು ಕಷ್ಟಪಡಬಾರದು ಎನ್ನುವ ಕಾರಣಕ್ಕೆ, ಆತ ಅಡ್ಡದಾರಿ ಹಿಡಿಯುತ್ತಾನೆ.
ಸರಿಯಾದ ದಾರಿಯಲ್ಲಿಯೇ ಆತನಿಗೆ ಯಶಸ್ಸು ಸಿಕ್ಕಿದ್ದರೆ, ಆತ ಯಾಕೆ ಕೆಟ್ಟ ದಾರಿ ಹಿಡಿಯುತ್ತಿದ್ದ? ಕೊಟ್ಟ ಮಾತಿನಂತೆ ಕೆಲಸದಲ್ಲಿನ ಅವನ ಶ್ರದ್ಧೆ ಮತ್ತು ಬದ್ಧತೆಯನ್ನು ಗಮನಿಸಿ, ಸರಿಯಾದ ಸಮಯಕ್ಕೆ ಪ್ರಮೋಷನ್ ಕೊಟ್ಟಿದ್ದರೆ ಇಷ್ಟೆಲ್ಲಾ ಆಗುತ್ತಲೇ ಇರಲಿಲ್ಲ.
ಕೊನೆಗೆ ಅದು ಭಾಸ್ಕರನನ್ನು ಎಲ್ಲಿಯೋ ಕರೆದುಕೊಂಡು ಹೋಗಿ ನಿಲ್ಲಿಸುತ್ತದೆ. ಭಾಸ್ಕರ ಚಕ್ರವ್ಯೂಹವನ್ನು ಹೊಕ್ಕ ಅಭಿಮನ್ಯುವಿನಂತೆ, ಅದರಿಂದ ಹೊರಗೆ ಬರುವ ದಾರಿ ಕಾಣದೇ ಕಂಗಾಲಾಗುತ್ತಾನೆ. ಆಗವನಿಗೆ ದಿಢೀರ್ ಜ್ಞಾನೋದಯವಾಗಿ, ತನಗೆ ಸಿಕ್ಕಿರುವ ದುಡ್ಡನ್ನೆಲ್ಲಾ ಅವಶ್ಯಕತೆ ಇರುವವರಿಗೆ ಹಂಚಲು ಶುರು ಮಾಡುತ್ತಾನೆ. ಅದರಿಂದ ಚಕ್ರವ್ಯೂಹದಿಂದಾಚೆ ಬರುವ ದಾರಿ ಕೂಡಾ ಅವನಿಗೆ ಸುಲಭವಾಗಿ ಸಿಗುತ್ತದೆ.
ಇದರಲ್ಲಿ ಭಾಸ್ಕರ ಒಂದು ಮಾತು ಹೇಳುತ್ತಾನೆ.
'ಜೀವನ ಮಾಡಬೇಕೆಂದರೆ ದುಡ್ಡು ಬೇಕು. ಆದರೆ ಸಮಾಜದಲ್ಲಿ ಗೌರವ ಬೇಕೆಂದರೆ, ಆ ದುಡ್ಡು ನಮ್ಮ ಮೈ ಮೇಲೆ ಇರಬೇಕು' ಅಂತ.
ಇದು ಅಕ್ಷರಶಃ ಸತ್ಯ. ಮನುಷ್ಯನಿಗೆ ಬೆಲೆ ಕೊಡದ ಜನ, ಕೇವಲ ದುಡ್ಡಿಗೆ ಹೇಗೆ ಬೆಲೆ ಕೊಡುತ್ತಾರೆ ಎನ್ನುವುದನ್ನು ಈ ಸಿನೆಮಾದಲ್ಲಿ ತುಂಬಾ ಸೊಗಸಾಗಿ ತೋರಿಸಿದ್ದಾರೆ. ಇದು ಎಷ್ಟು ಪರಿಣಾಮಕಾರಿಯಾಗಿದೆ ಎಂದರೆ, ಇದನ್ನು ನೋಡಿದ ಪ್ರತಿಯೊಬ್ಬ ಮಿಡಲ್ ಕ್ಲಾಸ್ ವ್ಯಕ್ತಿಯೂ ದುಡ್ಡು ಮಾಡಲು ಹೊರಡಲು ಪ್ರೇರೇಪಣೆಯಂತಿದೆ.
ಬೇರೆಯವರು ಹೋಗಲಿ.. ನಮ್ಮ ಸ್ವಂತದವರೇ ನಮ್ಮ ಬಳಿ ದುಡ್ಡಿಲ್ಲ ಅಂತ ಅವಮಾನಿಸಿದಾಗ ಹೇಗಾಗಬೇಕು? ಆ ಅವಮಾನ ತನಗಷ್ಟೇ ಅಲ್ಲದೇ, ಅದರಿಂದ ತನ್ನ ಹೆಂಡತಿ- ಮಗನಿಗೂ ನೋವಾದಾಗ ಏನು ಮಾಡಬೇಕು? ಕನಿಷ್ಟ ಮೂರು ವಡಾಪಾವ್ ತಿನ್ನಲೂ ದುಡ್ಡಿಲ್ಲದೇ, ಆಫೀಸಿಗೆ ಹೋಗಲು ಬಸ್ಸಿಗೂ ಸಹಾ ಕಾಸಿಲ್ಲದೇ, ಓಡಿಕೊಂಡು ಹೋಗುವಂತಾದಾಗ ಆತ ಇದನ್ನೆಲ್ಲಾ ಹೇಗೆ ಸಹಿಸಿಕೊಳ್ಳಬೇಕು?
ಅದಕ್ಕಾಗಿಯೇ ಆತ ತುಂಬಾ ದೊಡ್ಡ ರಿಸ್ಕ್ ಅನ್ನು ತೆಗೆದುಕೊಂಡು ದುಡ್ಡು ಮಾಡಲು ಹೊರಡುತ್ತಾನೆ. ಅಕಸ್ಮಾತ್ ತಾನು ಸಿಕ್ಕಿಕೊಂಡರೆ ತನ್ನ ಕೆಲಸ ಹೋಗಬಹುದು, ಆದರೆ ಯಶಸ್ವಿಯಾದರೆ ಕುಟುಂಬದವರೆಲ್ಲರೂ ಖುಷಿಯಾಗಿರಬಹುದು ಅನ್ನುವುದು ಅವನ ಪ್ಲಾನ್.
ಸಿನೆಮಾ ಹೆಸರು ಲಕ್ಕಿ ಭಾಸ್ಕರ್ ಆಗಿರುವುದರಿಂದ, ಜೊತೆಗೆ ಅವನು ಮಹಾನ್ ಚಾಣಾಕ್ಷನಾಗಿದ್ದುದರಿಂದ, ವ್ಯವಸ್ಥೆಯಲ್ಲಿನ ಲೂಪ್ ಹೋಲುಗಳನ್ನು ತನಗೆ ಬೇಕಾದ ಹಾಗೆ ಬಳಸಿಕೊಂಡು, ಎಲ್ಲಿಯೂ ಸಿಕ್ಕಿ ಹಾಕಿಕೊಳ್ಳದೇ, ಒಂದೇ ಸಮನೆ ದುಡ್ಡು ಮಾಡುತ್ತಲೇ ಹೋಗುತ್ತಾನೆ. ಕಡೆಗೆ ಸಿಬಿಐನವರು ಇವನ ಬಳಿ ಬರುವವರೆಗೂ ಇವನ ಓಟಕ್ಕೆ ತಡೆಯೇ ಇರುವುದಿಲ್ಲ.
ಆದರೆ ದುಡ್ಡಿಲ್ಲದಿದ್ದಾಗ ವಿನಯದ ಪ್ರತಿರೂಪದಂತಿದ್ದ ಭಾಸ್ಕರ್, ದುಡ್ಡು ಸೇರುತ್ತಿದ್ದಂತೆಯೇ ದುರಹಂಕಾರಿಯಾಗಿ ಬದಲಾಗುತ್ತಾನೆ. ದುಡ್ಡಿನ ಮಹಿಮೆಯೇ ಅಂಥಾದ್ದು. ಬಹುಶಃ ಜೀವನವಿಡೀ ಒಂದಷ್ಟು ದುಡ್ಡು ಮಾಡಲು ಹೋರಾಡುವ ನಾವೂ ಸಹ, ಅತಿಯಾದ ದುಡ್ಡು ಸಿಕ್ಕರೆ ಹಾಗೆಯೇ ವರ್ತಿಸುತ್ತೇವೇನೋ? ನಿರ್ದೇಶಕರು ಇಲ್ಲದ ಏನನ್ನೋ ಹೇಳಿಲ್ಲ. ಬದಲಿಗೆ ನಮ್ಮದೇ ಕಥೆಯನ್ನು ನಮಗೆ ಹೇಳಿದ್ದಾರೆ.
ಹಾಗಾಗಿಯೇ ಈ ಕಥೆ ನಮಗೆ ಆಪ್ತ ಎನಿಸುತ್ತದೆ. ಭಾಸ್ಕರ್ ದುಡ್ಡು ಮಾಡಿರುವ ದಾರಿ ತಪ್ಪು ಅಂತ ಗೊತ್ತಿದ್ದರೂ, ಆತ ಹೇಗಾದರೂ ಮಾಡಿ ತಪ್ಪಿಸಿಕೊಳ್ಳಲಿ ಅಂತಲೇ ನಾವು ಬಯಸುತ್ತೇವೆ. ಆತ ನಮ್ಮ ಕಣ್ಣಿಗೆ ಒಬ್ಬ ಜನಪ್ರಿಯ ನಟನ ಹಾಗೇ ಕಾಣದೇ, ನಮ್ಮಲ್ಲೇ ಒಬ್ಬನಾಗಿ ಕಾಣತೊಡಗುತ್ತಾನೆ. ಆತ ಇದರಿಂದ ತಪ್ಪಿಸಿಕೊಂಡರೆ ಅದು ನಮ್ಮದೇ ಗೆಲುವು ಅಂತ ನಾವು ಸಂಭ್ರಮಿಸುವಂತಾಗುತ್ತದೆ.
ಕಡೆಗೆ ಆತ ಎಷ್ಟೇ ಕೋಟಿ ಸಂಪಾದಿಸಿದರೂ, ನಮ್ಮ ಮನದಲ್ಲಿ ಆತನ ಕುರಿತು ಗೌರವ ಹಾಗೆಯೇ ಉಳಿಯುತ್ತದೆ. ಏಕೆಂದರೆ ಭಾಸ್ಕರ್ ಇದನ್ನೆಲ್ಲಾ ಮಾಡಿದ್ದು ತನ್ನ ಕುಟುಂಬಕ್ಕಾಗಿ, ತನ್ನ ಮನೆಯವರ ಖುಷಿಗಾಗಿ... ಹಾಗಾಗಿ ನಾವು ಆತ ಮಾಡಿರುವ ತಪ್ಪನ್ನು ಕ್ಷಮಿಸಿ, ಅವನಿಗೆ ಒಳ್ಳೆಯದಾಗಲಿ ಅಂತಲೇ ಬೇಡಿಕೊಳ್ಳುತ್ತೇವೆ.
ಏಕೆಂದರೆ... ಭಾಸ್ಕರನಲ್ಲಿ ನಾವು ನಮ್ಮನ್ನೇ ಕಾಣುತ್ತಿರುತ್ತೇವೆ. ಆತ ಅನುಭವಿಸಿದ ಎಷ್ಟೋ ಅವಮಾನಗಳನ್ನು ನಾವು ಪ್ರತ್ಯಕ್ಷವಾಗಿ ಅನುಭವಿಸಿರುತ್ತೇವೆ. ಹಾಗಾಗಿಯೇ ಅಡ್ಡದಾರಿ ಹಿಡಿದು ಮೋಸ ಮಾಡಿದರೂ, ಆತ ವಿಲನ್ ಆಗದೇ ನಮ್ಮ ಪಾಲಿನ ಹೀರೋ ಆಗಿಯೇ ಉಳಿಯುತ್ತಾನೆ.
***********
ಕೆ.ಎ.ಸೌಮ್ಯ
ಮೈಸೂರು
