ಬೀರಬಲ್ Trilogy (ಕನ್ನಡ)
ಸಿನೆಮಾ : ಬೀರಬಲ್
Trilogy Case 1
ನಿರ್ದೇಶಕರು : ಎಂ.ಜಿ.ಶ್ರೀನಿವಾಸ್
ಪಾತ್ರವರ್ಗ : ಎಂ.ಜಿ. ಶ್ರೀನಿವಾಸ್,
ರುಕ್ಮಿಣಿ ವಸಂತ್,
ಸುರೇಶ ಹೆಬ್ಳೀಕರ್
ಇಸವಿ : 2019
ಈ ಸಿನೆಮಾದ ಕಡೆಯ ಸಾಲುಗಳು ಈ ರೀತಿ ಇವೆ.
"ಒಬ್ಬ ಶಕ್ತಿವಂತ ಶಕ್ತಿ ಇರುವ ತನಕ ಮಾತ್ರ ಗೆಲ್ತಾನೆ, ಆದರೆ ಅದೇ ಒಬ್ಬ ಬುದ್ಧಿವಂತ ಯಾವಾಗ್ಲೂ ಗೆಲ್ತಾನೆ"
ಯಾಕಂದ್ರೆ ಗೆಲ್ಲೋಕ್ಕೆ ಬಂದಿರುವುದು ಬೇರೆ ಯಾರೂ ಅಲ್ಲ.. ಬೀರಬಲ್!
ಅಂದ್ರೆ ಮಹೇಶ್ ದಾಸ್. ನಮ್ಮ ಹೀರೋ ಹೆಸರು ಕೂಡಾ ಅದೇ.. ಮಹೇಶ್ ದಾಸ್. ಮೊದಲ ನೋಟಕ್ಕೇ ನಮ್ಮನ್ನು ಬೋಲ್ಡ್ ಮಾಡುವ ಟ್ಯಾಲೆಂಟೆಡ್ ಹೀರೋ ಇವರು. ಹೇಗಂತೀರಾ?
ಸಾಮಾನ್ಯವಾಗಿ ಸಿನೆಮಾಗಳಲ್ಲಿ ಹೀರೋ ಎಂಟ್ರಿ ಹೇಗಿರುತ್ತದೆ? ಭರ್ಜರಿ ಸಾಂಗ್ ಮೂಲಕ ಅಥವಾ ಆಕ್ಷನ್ ಸೀನ್ ಮೂಲಕ ಅಲ್ವಾ? ಅದರಿಂದ ಅವರ ಅಭಿಮಾನಿಗಳಿಗೆ ಖುಷಿ ಸಿಗುತ್ತದೆ. ನಾಯಕ ನಟರಿಗೆ ಚಪ್ಪಾಳೆ, ಸಿಳ್ಳೆ ಸಿಗುತ್ತದೆ.
ಆದರೆ ನಮ್ಮ ಮಹೇಶ್ ದಾಸ್ ಎಂಟ್ರಿಯಾಗುವುದು ತನ್ನ ಬುದ್ಧಿವಂತಿಕೆಯನ್ನು ಅನಾವರಣ ಮಾಡುವ ಮೂಲಕ. ಕಂಪನಿಯ ಬಾಸ್ ಇಂಟರ್ ವ್ಯೂಗೆ ಬಂದವರಿಗೆ ಒಂದು ಕಿತ್ತಳೆ ಹಣ್ಣನ್ನು ಕೊಟ್ಟು, ಪಕ್ಕದವರಿಗೆ ಅದನ್ನು ಹೇಗೆ ವರ್ಗಾಯಿಸುತ್ತೀರಿ ಎನ್ನುವ ಪ್ರಶ್ನೆ ಕೇಳಿದಾಗ, ಅತ್ಯುತ್ತಮವಾಗಿ ಉತ್ತರ ಕೊಡುವುದೇ ನಮ್ ಹೀರೋ.
ಆ ಉತ್ತರದ ಮೂಲಕ ನಮ್ಮ ಮೆದುಳಿಗೆ ಲಗ್ಗೆ ಇಡುತ್ತಾರೆ. ಇಷ್ಟ ಆಗಿ ಹೋಗಿಬಿಡ್ತಾರೆ ಕಣ್ರೀ.. ಇಂಟಲಿಜೆಂಟ್ ಹುಡುಗನನ್ನ ಕಂಡರೆ ಯಾರಿಗೆ ತಾನೇ ಇಷ್ಟವಾಗೋಲ್ಲ? ಒಂದುಪಕ್ಷ ಸುಂದರವಾಗಿ ಇರುವವರನ್ನು ಕಂಡರೆ ಹೊಟ್ಟೆಕಿಚ್ಚು ಪಟ್ಟುಕೊಳ್ಳಬಹುದೇ ಹೊರತೂ, ಬುದ್ಧಿವಂತರನ್ನು ಕಂಡರೆ ಎಲ್ಲರಿಗೂ ಇಷ್ಟವೇ..
ಈ ರೀತಿ ನಮ್ ಹೀರೋ ತನ್ನ ಜಾಣತನದಿಂದ ನಮ್ಮ ಮೆದುಳಿನಲ್ಲಿ ಒಂದು ಸ್ಥಾನ ಸಂಪಾದಿಸಿ, ಕೇಸ್ ಅನ್ನು ಕೈಗೆತ್ತಿಕೊಳ್ಳುತ್ತಾನೆ. ಯಾಕೆ ಅಂದ್ರಾ? ಅವನ ಕೆಲಸವೇ ಅದು ಕಣ್ರೀ.. ಯಾಕಂದ್ರೆ ಅವನು ಲಾಯರ್!
ಎಂಟು ವರ್ಷದ ಹಿಂದೆ ಮಾರುತಿ ಸರ್ಕಲ್ ಎಂಬ ಸ್ಥಳದಲ್ಲಿ ಒಬ್ಬ ಕ್ಯಾಬ್ ಡ್ರೈವರ್‌ನ ಹತ್ಯೆಯಾಗಿರುತ್ತದೆ. ಆ ಕೊಲೆ ಆಪಾದನೆಯಲ್ಲಿ ಒಬ್ಬ ಅಮಾಯಕ ಅರೆಸ್ಟ್ ಆಗಿ ಶಿಕ್ಷೆಯನ್ನೂ ಅನುಭವಿಸುತ್ತಿರುತ್ತಾನೆ. ಎಂಟು ವರ್ಷದ ನಂತರ ಅವನು ಪೆರೋಲ್ ಮೇಲೆ ಆಚೆ ಬಂದಿರುವ ಸಂದರ್ಭದಲ್ಲಿ, ನಮ್ಮ ಹೀರೋ ಅವನಿಗೆ ನ್ಯಾಯ ಕೊಡಿಸಬೇಕು ಅಂತ, ತನ್ನ ಕಂಪನಿಯ ವತಿಯಿಂದ ಕೇಸ್ ಅನ್ನು ರೀ-ಓಪನ್ ಮಾಡಿಸುತ್ತಾನೆ.
ಅಲ್ಲಿಂದ ಮುಚ್ಚಿಟ್ಟಿದ್ದ ಒಂದೊಂದೇ ಸತ್ಯಗಳು ಹೊರಬರಲು ಶುರುವಾಗುತ್ತದೆ. ಸತ್ಯ ಎನ್ನುವುದು ಪದರ ಪದರವಾಗಿ ಬಿಚ್ಚಿಕೊಳ್ಳಲು ಶುರು ಮಾಡಿದಾಗ ನಮ್ಮ ಕುತೂಹಲವೂ ಗರಿಗೆದರುತ್ತದೆ.
ಈ ಸಿನೆಮಾದ ಕಥೆ 'ರಾಶೋಮನ್ ಎಫೆಕ್ಟ್'ನಲ್ಲಿ ಚಿತ್ರಿತವಾಗಿದೆ.
Rashoman Effect : ಒಂದೇ ಘಟನೆಯನ್ನು ಬೇರೆ ಬೇರೆಯವರ ದೃಷ್ಟಿಕೋನದಿಂದ ನಿರೂಪಿಸುವುದು. ಆಗ ನಡೆದಿರುವ ಒಂದೇ ಘಟನೆಗೆ ಹತ್ತಾರು ಆಯಾಮ ಸಿಗುತ್ತದೆ. ಎಲ್ಲರೂ ಹೇಳಿದ್ದನ್ನೇ ಹೇಳುತ್ತಾರೆ. ಆದರೂ ಪ್ರತೀಬಾರಿಯೂ ಒಂದು ಹೊಸಾ ಸುಳಿವು ಸಿಗುತ್ತಾ ಹೋಗುತ್ತದೆ.
ಈ ಪದವು 1950ರ ಜಪಾನೀಸ್ ಸಿನೆಮಾ ರಾಶೋಮನ್ ಇಂದ ಪ್ರೇರಿತವಾಗಿದೆ. ಖ್ಯಾತ ಸಿನೆಮಾ ನಿರ್ದೇಶಕ ಅಕಿರಾ ಕುರಸೋವಾ ಈ ರೀತಿಯ ನಿರೂಪಣಾ ಶೈಲಿಯನ್ನು ಮೊಟ್ಟಮೊದಲ ಬಾರಿಗೆ ತಮ್ಮ ಸಿನೆಮಾ ರಾಶೋಮನ್‌ನಲ್ಲಿ ತಂದರು. ಹಾಗಾಗಿ ಈ ಟೆಕ್ನಿಕ್‌ಗೆ ಅದೇ ಹೆಸರು ಉಳಿಯಿತು.
ಅಲ್ಲದೇ ಈ ಬೀರಬಲ್ ಸಿನೆಮಾ 2017ರ ಕೊರಿಯನ್ ಸಿನೆಮಾ "New Trail" ಅನ್ನು ಆಧರಿಸಿದೆ.
ಬೀರಬಲ್ ಸಿನೆಮಾಗೆ ನಾಲ್ಕು ಆಂಗಲ್‌ಗಳಿವೆ.
ಒಂದು : ಆರೋಪಿ ಹೇಳಿದಂತೆ
ಎರಡು : ಪೊಲೀಸರ ಹೇಳಿಕೆಯಂತೆ
ಮೂರು : ನಾಯಕ ಯೋಚಿಸಿದಂತೆ
ನಾಲ್ಕು : ಇದೇ ಮುಚ್ಚಿಟ್ಟ ದೃಷ್ಟಿಕೋನ. ಈ ಆಂಗಲ್ಲಿನಲ್ಲಿ ಯೋಚಿಸಿದಾಗಲೇ ನಿಜವಾದ ಕೊಲೆಗಾರ ಯಾರು ಅಂತ ನಾಯಕನಿಗೆ ಗೊತ್ತಾಗುವುದು.
ಈಗೇನು? ಯಾರದ್ದೋ ಕೊಲೆ ನಡೆದಿದೆ. ಈವರೆಗೂ ಶಿಕ್ಷೆ ಅನುಭವಿಸಿದವನು ಅಪರಾಧಿಯಲ್ಲ. ಈಗ ನಮ್ಮ ಹೀರೋ ನಿಜವಾದ ಅಪರಾಧಿ ಯಾರು ಅಂತ ಕಂಡುಹಿಡಿದು ಶಿಕ್ಷೆ ಕೊಡಿಸುತ್ತಾನೆ. ಅಷ್ಟೇ ತಾನೇ?
ಊಹೂಂ ಅಷ್ಟೇ ಅಲ್ಲ...
ನಿಜವಾದ ಅಪರಾಧಿ ಯಾರು ಅಂತ ಕಂಡುಹಿಡಿಯುವ ಕ್ಲೈಮ್ಯಾಕ್ಸ್ ಅತ್ಯಂತ ರೋಚಕವಾಗಿದೆ. ಆ ದೃಶ್ಯಗಳಿಗೆ ಸಾಥ್ ಕೊಡುವುದು ಬ್ಯಾಕ್ ಗ್ರೌಂಡ್ ಮ್ಯೂಸಿಕ್! ಈ ಎರಡರ ಜುಗಲ್‌ಬಂದಿ ಎಷ್ಟು ಚೆನ್ನಾಗಿದೆ ಎಂದರೆ, ನಮ್ಮನ್ನು ಸೀಟಿನ ತುದಿಗೆ ಕೂರುವಂತೆಯೂ, ಉಗುರುಗಳನ್ನು ಕಚ್ಚಿ ಕಾಯುವಂತೆಯೂ ಮಾಡುತ್ತದೆ.
ಕಡೆಗೆ ಅಪರಾಧಿ ಯಾರು ಅಂತ ಗೊತ್ತಾಗುವ ಜೊತೆಗೆ ಮತ್ತೂ ಒಂದು ವಿಷಯ ಅನಾವರಣಗೊಳ್ಳುತ್ತದೆ. ಅದು ನಮ್ಮನ್ನು 'ಇಷ್ಟೇನಾ?' ಎನ್ನಿಸುವ ಬದಲು, ನಮ್ಮ ಕೂದಲು ನಿಮಿರಿಸಿ 'ಓ ಮೈ ಗಾಡ್!' ಎನ್ನುವಂತೆ ಮಾಡುತ್ತದೆ.
ಆಗ ಸಿನೆಮಾ ಮತ್ತೊಮ್ಮೆ ಮೊದಲಿನಿಂದ ಪ್ಲೇ ಆಗುತ್ತದೆ. ನೋಡುವ ನಮಗೆ ಬೇರೆಯದೇ ದೃಷ್ಟಿಕೋನ ಸಿಗುತ್ತದೆ. 'ತಥ್.. ಇದು ನಮಗೆ ಹೊಳೆಯಲೇ ಇಲ್ವಲ್ಲ' ಎಂದುಕೊಳ್ಳುತ್ತೇವೆ.
ಹಾಗಂತ ಬೇಸರವೇನೂ ಆಗುವುದಿಲ್ಲ.
ಏಕೆಂದರೆ ಇತ್ತೀಚಿನ ವರ್ಷಗಳಲ್ಲಿ ಕನ್ನಡದಲ್ಲಿ ಬಂದಿರುವ ಅಪರೂಪದ ಕ್ರೈಮ್ ಥ್ರಿಲ್ಲರ್ ಇದು. ಈ ಸಿನೆಮಾ ಕೊಟ್ಟಿದ್ದಕ್ಕಾಗಿ ನಿರ್ದೇಶಕ ಕಂ ನಟ ಶ್ರೀನಿವಾಸ್ ಅವರಿಗೆ ನಾವು ಥ್ಯಾಂಕ್ಸ್ ಹೇಳಲೇಬೇಕು.
ಜಿಯೋ ಸಿನೆಮಾದಲ್ಲಿ ಲಭ್ಯವಿದೆ. ಆಸಕ್ತರು ವೀಕ್ಷಿಸಬಹುದು.
********
ಕೆ.ಎ.ಸೌಮ್ಯ
ಮೈಸೂರು
