Source code (ಇಂಗ್ಲೀಷ್)

 


ನಾವು ಸತ್ತ ನಂತರ ಈ ಪ್ರಪಂಚ ಹೇಗಿರುತ್ತದೆ ಅಂತ ನಮಗೆ ಗೊತ್ತಾಗುವುದಿಲ್ಲ. ಏಕೆಂದರೆ ನಾವು ಸಾಯುತ್ತಿದ್ದಂತೆ, ಈ ಜಗತ್ತಿನ ಜೊತೆಗಿನ ನಮ್ಮ ಕೊಂಡಿ ಶಾಶ್ವತವಾಗಿ ಕಳಚಿಕೊಳ್ಳುತ್ತದೆ. ಆದರೆ ಒಂದು ವೇಳೆ ನಾವು ಸತ್ತ ನಂತರವೂ, ಮತ್ತೊಮ್ಮೆ ಬದುಕುವ ಅವಕಾಶ ಸಿಕ್ಕರೆ ಹೇಗಿರುತ್ತದೆ?


ನಾನು ಈ ಸಿನೆಮಾವನ್ನು ನೋಡಿದ್ದು ಕೇವಲ ಕುತೂಹಲಕ್ಕಾಗಿ. ಆದರೆ ನಂತರ ತಲೆಗೆ ಎಂತಹಾ ಹುಳ ಬಿಟ್ಟ ಹಾಗಾಯ್ತು ಎಂದರೆ, ಈ ಸಿನೆಮಾ ಬಗೆಗಿನ ಎಲ್ಲಾ ಮಾಹಿತಿಯನ್ನೂ ರಾತ್ರಿಯಿಡೀ ಜಾಲಾಡುವಂತಾಯ್ತು. ಹಿಂದಿಯಲ್ಲಿ ಈ ಸಿನೆಮಾ ವಿವರಣೆಯನ್ನು ಹುಡುಕಿ ಹುಡುಕಿ ನೋಡಿದ್ದಾಯ್ತು. ನಂತರ ಸಿನೆಮಾವನ್ನೇ ಮತ್ತೆ ಮತ್ತೆ ಹಿಂದೆ, ಮುಂದೆ ಓಡಿಸಿದ್ದಾಯ್ತು.


ಇಷ್ಟು ಮಾಡಿದ ನಂತರವೇ ನನಗೆ ಸಿನೆಮಾ ಅರ್ಥವಾಗಿರಬೇಕಾದರೆ, ಈ ಸಿನೆಮಾ ನೋಡದವರಿಗೆ ಅರ್ಥವಾಗುವ ಹಾಗೆ ಬರೆಯುವುದು ಹೇಗೆ? ನೋಡದವರು ಇರಲಿ, ನೋಡಿದವರಿಗೇ ಅರ್ಥ ಆಗಿರುವುದು ಅನುಮಾನ. ಇಂದಿಗೂ ಈ ಸಿನೆಮಾವನ್ನು ಹೇಗೆ ಅರ್ಥ ಮಾಡಿಕೊಳ್ಳುವುದು ಅಂತ ಜಗತ್ತಿನಾದ್ಯಂತ ಚರ್ಚೆಯಾಗುತ್ತಲೇ ಇದೆಯಂತೆ.


ಮೊದಲಿಗೆ;


ಸ್ಟೀವನ್ಸ್ ಎನ್ನುವ ಸೈನಿಕನಿಗೆ ಅಚಾನಕ್ಕಾಗಿ ಎಚ್ಚರವಾಗುತ್ತದೆ. ಆಗವನು ಒಂದು ಚಲಿಸುವ ಟ್ರೈನಿನೊಳಗೆ ಇರುತ್ತಾನೆ. ಅವನೆದುರು ಒಬ್ಬ ಅಪರಿಚಿತ ಯುವತಿ ಕುಳಿತಿರುತ್ತಾಳೆ. ಆದರೆ ಅವಳು ಸೈನಿಕನ ಪರಿಚಯ ಇರುವ ಹಾಗೆ ಮಾತನಾಡುತ್ತಾಳೆ. ಸೈನಿಕನಿಗೆ ಇಲ್ಲಿ ಏನು ನಡೆಯುತ್ತಿದೆ ಅಂತ ಅರ್ಥವಾಗುವುದಿಲ್ಲ.


ಏಕೆಂದರೆ ಅವನಿಗೆ ನೆನಪಿರುವ ಹಾಗೆ ಅವನು ಆಫ್ಘಾನಿಸ್ತಾನದಲ್ಲಿ ಯುದ್ಧ ಮಾಡುತ್ತಿರುತ್ತಾನೆ. ಅಲ್ಲಿಂದ ಈ ಚಲಿಸುವ ಟ್ರೈನಿನೊಳಗೆ ಹೇಗೆ ಬಂದೆ ಅಂತ ಆತ ಕನ್ಫ್ಯೂಸ್ ಆಗುತ್ತಾನೆ. ಆದರೆ ಅವನ ಎದುರಿಗೆ ಇರುವ ಯುವತಿ ಇದ್ಯಾವುದನ್ನೂ ಗಮನಿಸದೇ ತನ್ನ ಪಾಡಿಗೆ ಮಾತನಾಡುತ್ತಲೇ‌ ಇರುತ್ತಾಳೆ.


ಅಷ್ಟರಲ್ಲಿ ಕಿಟಕಿಯ ಗಾಜಿನ ಪ್ರತಿಬಿಂಬದಲ್ಲಿ ಸೈನಿಕನಿಗೆ ತನ್ನದಲ್ಲದ ಯಾವುದೋ ಮುಖ ಕಾಣುತ್ತದೆ. 'ಇದು ತಾನೇ ಹೌದು.. ಆದರೆ ಈ ದೇಹ ತನ್ನದಲ್ಲ' ಅಂತ ಅವನು ಕಂಗಾಲಾಗುತ್ತಾನೆ. ಅವನ ಜೊತೆ ನಾವೂ ಸಹ ಇದೊಂದು ಹಾರರ್ ಸಿನೆಮಾ ಇರಬೇಕು‌ ಅಂತ ಬೆಚ್ಚಿ ಬೀಳುತ್ತೇವೆ. ಆದರೆ ಅವನಿಗೆ ಅಲ್ಲೇನು ನಡೆಯುತ್ತಿದೆ ಅಂತ ಅರ್ಥವಾಗುವಷ್ಟರಲ್ಲಿ ಸಡನ್ನಾಗಿ ಟ್ರೈನ್ ಬ್ಲಾಸ್ಟ್ ಆಗಿಬಿಡುತ್ತದೆ.


ಸೈನಿಕ ನಿಧಾನವಾಗಿ ಕಣ್ಣು ಬಿಡುತ್ತಾನೆ. ನೋಡಿದರೆ ಅವನೊಂದು ಪುಟ್ಟ ಜಾಗದೊಳಗೆ ಬಂಧಿಯಾಗಿರುವುದು ಗೊತ್ತಾಗುತ್ತದೆ. ಅವನೆದುರಿಗೆ ಒಂದು ಟಿವಿ ಪರದೆ ಇರುತ್ತದೆ. ಅದರಲ್ಲಿ ಒಬ್ಬ ಲೇಡಿ ಮಿಲಿಟರಿ ಆಫೀಸರ್ ಅವನ ಜೊತೆ ಮಾತನಾಡುತ್ತಿರುತ್ತಾಳೆ. ಅವಳ ಪ್ರಕಾರ ಈಗ ನಡೆದಿದ್ದು ಸೋರ್ಸ್ ಕೋಡ್ ಪ್ರೋಗ್ರಾಮ್.


'ಸೋರ್ಸ್ ಕೋಡ್' ಎಂದರೆ ಒಂದು ಪ್ರೋಗ್ರಾಮ್ ಅಷ್ಟೇ. ಇದು ಟೈಮ್ ಟ್ರಾವೆಲ್ ಅಲ್ಲ. ಒಬ್ಬ ವ್ಯಕ್ತಿ ಸತ್ತಾಗ, ಅವನು ಸಾಯುವ ಎಂಟು ನಿಮಿಷಗಳ ಮುಂಚಿನ ನೆನಪಿನೊಳಗೆ ಮತ್ತೊಬ್ಬರನ್ನು ಕಳಿಸುವ ಏರ್ಪಾಟು ಇದು. ಪ್ರೋಗ್ರಾಮರ್ ಯಾರನ್ನು ಕಳಿಸುತ್ತಾರೆಯೋ ಅವರು, ಸತ್ತ ವ್ಯಕ್ತಿಯ ನೆನಪಿನೊಳಗೆ ಹೋಗಿ, ಎಂಟು ನಿಮಿಷದೊಳಗೆ ತಮಗೆ ಬೇಕಾದ ಮಾಹಿತಿಯನ್ನು ಹುಡುಕಿ ತರಬೇಕು.


ಇದೇ ಸೋರ್ಸ್ ಕೋಡ್ ಪ್ರೋಗ್ರಾಮ್.


ಅದೇ ರೀತಿ ಒಂದು ಟ್ರೈನ್ ವಿಸ್ಫೋಟದಲ್ಲಿ ಸತ್ತಿರುವ ಶಾನ್ ಎನ್ನುವ ಟೀಚರ್‌ನ ನೆನಪಿನೊಳಗೆ, ಸ್ಟೀವನ್ಸ್ ಎಂಬ ಈ ಸೈನಿಕನನ್ನು ಕಳುಹಿಸಲಾಗಿರುತ್ತದೆ. ಈ ರೀತಿ ಕಳಿಸುವುದು, ಸೈನಿಕ ಆ ವಿಸ್ಫೋಟವನ್ನು ತಡೆಯಲಿ ಅಂತ ಅಲ್ಲ. ಬದಲಿಗೆ ಆ ಬಾಂಬ್ ಬ್ಲಾಸ್ಟ್ ಮಾಡಿದವನು ಯಾರು ಅಂತ ಕಂಡುಹಿಡಿಯುವುದಕ್ಕೆ..!


ಈಗ ಆ ಸೈನಿಕನ ಮುಂದೆ ಇರುವ ಟಾಸ್ಕ್ ಏನೆಂದರೆ;


ಅವನಿಗೆ ಇರುವುದು ಕೇವಲ ಎಂಟು ನಿಮಿಷಗಳ ಅವಧಿ. ಅಷ್ಟರೊಳಗೆ ನಮ್ಮ ನಾಯಕ ಶಾನ್‌ನ ನೆನಪಿನೊಳಗೆ ಹೋಗಿ, ಆ ಟ್ರೈನಿನೊಳಗೆ ಬಾಂಬ್ ಇಟ್ಟವರು ಯಾರು ಅಂತ ಕಂಡು ಹಿಡಿಯಬೇಕು. ಜೊತೆಗೆ ಆ ಬಾಂಬರ್‌ನ ಮುಂದಿನ ಪ್ಲಾನ್ ಅನ್ನು ಕೂಡಾ ತಡೆದು, ದೇಶವನ್ನು ರಕ್ಷಿಸಬೇಕು.


'ಕೇವಲ ಎಂಟು ನಿಮಿಷದೊಳಗೆ ಇದೆಲ್ಲಾ ಮಾಡಲು ಸಾಧ್ಯವೇ ಇಲ್ಲ' ಅಂತ ನೀವು ಅಂದುಕೊಳ್ತಾ ಇದ್ದೀರಲ್ವಾ?


ಯೆಸ್.. ಸೋರ್ಸ್ ಕೋಡ್ ಪ್ರೋಗ್ರಾಮ್ ಮಾಡಿದವರಿಗೂ ಇದು ಗೊತ್ತಿದೆ. ಹಾಗಾಗಿ ಅವರು ಪದೇ ಪದೇ ಲೆಕ್ಕವಿಲ್ಲದಷ್ಟು ಬಾರಿ ನಮ್ಮ ಹೀರೋ ಸ್ಟೀವನ್ಸ್‌ನನ್ನು ಸೋರ್ಸ್ ಕೋಡ್ ಮುಖಾಂತರ ಶಾನ್ ನೆನಪಿನೊಳಗೆ ಕಳಿಸುತ್ತಾರೆ.‌


ಆಗ ನಡೆದದ್ದೇ ಮತ್ತೆ ಮತ್ತೆ ನಡೆಯುತ್ತದೆ. ನೋಡಿದ್ದ ದೃಶ್ಯಗಳೇ ಪದೇ ಪದೇ ರಿಪೀಟ್ ಆಗುತ್ತವೆ. ಸ್ಟೀವನ್ಸ್ ಟ್ರೈನಿನೊಳಗೆ ಹುಡುಕಾಡಿ ಬಾಂಬ್ ಅನ್ನು ಹೇಗೋ ಕಂಡುಹಿಡಿಯುತ್ತಾನೆ‌. ಆದರೆ ಬಾಂಬ್ ಇಟ್ಟವನನ್ನು ಕಂಡು ಹಿಡಿಯುವಲ್ಲಿ ಪದೇ ಪದೇ ಸೋಲುತ್ತಾನೆ. ಹಾಗಾಗಿ ಪ್ರತೀಬಾರಿಯೂ ಟ್ರೈನ್ ಸಿಡಿಯುವುದರ ಜೊತೆ ಅವನ ಸೋರ್ಸ್ ಕೋಡ್ ಪಯಣ ಕೂಡ ಮುಗಿಯುತ್ತಿರುತ್ತದೆ.


ಆದರೆ ಸೈನಿಕ ಆ ನೆನಪಿನಿಂದ ವಾಪಸ್ ಬಂದಾಗಲೆಲ್ಲಾ ತಾನು ಆ ಕತ್ತಲ ಕೋಣೆಯೊಳಗೆ ಬಂಧಿಯಾಗಿರುವುದರ ಅರಿವಾಗುತ್ತಿರುತ್ತದೆ. ಆಗವನು ಈ ಪ್ರೋಗ್ರಾಮ್ ಮಾಡುತ್ತಿರುವವರ ಬಳಿ 'ತಾನೆಲ್ಲಿದ್ದೇನೆ? ನೀವೆಲ್ಲರೂ ಯಾರು? ನಾನು ಯುದ್ಧ ಮಾಡುತ್ತಾ ಆಫ್ಘಾನಿಸ್ತಾನದಲ್ಲಿದ್ದೆ, ಇಲ್ಲಿಗೆ ಹೇಗೆ ಬಂದೆ? ತನ್ನ ಟೀಮ್ ಎಲ್ಲಿ, ಅಪ್ಪನಿಗೆ ಫೋನ್ ಮಾಡಬೇಕು' ಅಂತ ಕೇಳುತ್ತಾನೆ.


ಆಗ ಅವರು ಸರಿಯಾದ ಉತ್ತರ ಕೊಡುತ್ತಿರುವುದಿಲ್ಲ.


ಅವರು ಕೇವಲ ದೇಶಭಕ್ತಿಯ ಪಾಠ ಮಾಡಿ, ಬಾಂಬರ್ ಅನ್ನು ಕಂಡುಹಿಡಿದು, ದೇಶವನ್ನು ಕಾಪಾಡಲು ಕೇಳಿಕೊಳ್ಳುತ್ತಾರೆ. ಶಾನ್ ಒಬ್ಬ ಟೀಚರ್ ಆದರೂ ಕೂಡಾ, ಅವನ ನೆನಪಿನೊಳಗೆ ಜೀವಿಸುತ್ತಿರುವ ನಾಯಕ ಒಬ್ಬ ಸೈನಿಕ. ಹಾಗಾಗಿ ಅವರ ಮನವಿಗೆ ಸ್ಪಂದಿಸಿ ಮತ್ತೆ ಮತ್ತೆ ಮೆಮೊರಿಯೊಳಗೆ ಹೋಗುತ್ತಿರುತ್ತಾನೆ.


ಆಗವನಿಗೆ ಒಂದು ವಿ
ಷಯ ಸ್ಪಷ್ಟವಾಗುತ್ತದೆ.


ಏನೆಂದರೆ ಸೈನಿಕ ಪ್ರತೀಬಾರಿಯೂ ಅದೇ ನೆನಪಿನೊಳಗೆ ಹೋಗುತ್ತಿದ್ದರೂ, ಅಲ್ಲಿ ಪ್ರತೀಸಲವೂ ಒಂದೇ ರೀತಿಯ ಘಟನೆ ಸಂಭವಿಸುತ್ತಿರುವುದಿಲ್ಲ. ಪ್ರತಿಯೊಂದು ಸಲವೂ ಘಟಿಸುವ ಘಟನೆಗಳು ಬೇರೆ ಬೇರೆಯಾಗಿರುತ್ತದೆ. ಇದರಿಂದ ತಾನು ಅಲ್ಲಿ ನಡೆಯುವ ಘಟನೆಯನ್ನು ಬದಲಾಯಿಸಬಹುದು, ಆ ಬಾಂಬ್ ಅನ್ನು ಡಿಫ್ಯೂಸ್ ಮಾಡಿ, ಆ ಟ್ರೈನಿನಲ್ಲಿರುವ ಅಮಾಯಕ ಜನರ ಪ್ರಾಣವನ್ನು ಬಚಾಯಿಸಬಹುದು ಅಂತ ನಾಯಕ ಅಂದುಕೊಳ್ಳುತ್ತಾನೆ.‌


ಆದರೆ ಮಿಲಿಟರಿ ಆಫೀಸರ್ ನಾಯಕನ ಆಸೆಗೆ ತಣ್ಣೀರು ಎರೆಚುತ್ತಾರೆ. ಏಕೆಂದರೆ... ನಾಯಕ ಹೋಗುತ್ತಿರುವುದು ಈಗಾಗಲೇ ನಡೆದಿರುವ ಒಬ್ಬ ಸತ್ತ ವ್ಯಕ್ತಿಯ ನೆನಪಿನೊಳಗೆ. ಅಲ್ಲಿ ಅವನು ಏನೇ ಬದಲಾವಣೆ ಮಾಡಿದರೂ, ಅದು ಅಲ್ಲಿಗೆ ಮಾತ್ರವೇ ಸೀಮಿತ ಹೊರತೂ, ನಿಜವಾದ ಪ್ರಪಂಚದಲ್ಲಿ ಯಾವುದೇ ವ್ಯತ್ಯಾಸ ತರುವುದಿಲ್ಲ ಅಂತ ಖಡಕ್ಕಾಗಿ ಹೇಳುತ್ತಾರೆ.


ಇದರಿಂದ ನಾಯಕನಿಗೆ ತುಂಬಾ ನಿರಾಸೆಯಾಗುತ್ತದೆ. ಆದರೆ ಅಟ್ಲೀಸ್ಟ್ ಬಾಂಬ್ ಇಟ್ಟವನು ಯಾರು ಅಂತ ಕಂಡುಹಿಡಿದರೆ, ಅವನನ್ನು ನಿಜ ಪ್ರಪಂಚದಲ್ಲಿ ಸೆರೆ ಹಿಡಿದು, ಮುಂದಿನ ವಿಸ್ಫೋಟದಿಂದ ಜನರನ್ನು ರಕ್ಷಿಸಬಹುದು ಅಂತ ಸ್ಟೀವನ್ಸ್ ಅಂದುಕೊಳ್ಳುತ್ತಾನೆ.


ಹೀಗೆಯೇ ನೆನಪಿನೊಳಗೆ ಹೋಗಿ ಬರುತ್ತಿರುವಾಗ, ಸ್ಟೀವನ್ಸ್‌ಗೆ ಸೈನಿಕನಾಗಿದ್ದ ತಾನು ಎರಡು ತಿಂಗಳ ಹಿಂದೆಯೇ ಯುದ್ಧದಲ್ಲಿ ಸತ್ತು ಹೋಗಿದ್ದೇನೆ ಅಂತ ಗೊತ್ತಾಗಿ ಆಘಾತವಾಗುತ್ತದೆ. ಆದರೆ ಈಗಾಗಲೇ ಸತ್ತಿರುವ ತಾನು, ಸೋರ್ಸ್ ಕೋಡ್ ಪ್ರೋಗ್ರಾಮರ್ ಜೊತೆ ಹೇಗೆ ಮಾತನಾಡುತ್ತಿದ್ದೇನೆ ಅಂತ ಆಶ್ಚರ್ಯವಾಗುತ್ತದೆ.


ಆಗವರು ಅವನ ಶರೀರವನ್ನು ರಕ್ಷಿಸಿರುವುದಾಗಿಯೂ, ಆದರೆ ಅವನು ಕೈಕಾಲು ಅಲ್ಲಾಡಿಸದ ಸ್ಥಿತಿಯಲ್ಲಿ ಇರುವುದಾಗಿಯೂ ಹೇಳುತ್ತಾರೆ. ಕೇವಲ ಅವನ ಮೈಂಡ್ ಅನ್ನು ಮಾತ್ರ ಕಂಟ್ರೋಲ್ ಮಾಡಲಾಗುತ್ತಿರುತ್ತದೆ. ಆ ಮೈಂಡ್‌ ತಾನೊಂದು ಕತ್ತಲ ಕೋಣೆಯಲ್ಲಿದ್ದೇನೆ, ಜೊತೆಗೆ ಆರೋಗ್ಯವಾಗಿದ್ದೇನೆ ಎಂಬ ಭ್ರಮೆಯಲ್ಲಿರುತ್ತದೆ.


ಅಂದರೆ ಈ ಪ್ರೋಗ್ರಾಮಿಗೋಸ್ಕರ ತನ್ನ ಮೈಂಡ್ ಅನ್ನು ಇವರು ಬಳಸಿಕೊಳ್ಳುತ್ತಿದ್ದಾರೆ, ಈ ಪ್ರೋಗ್ರಾಮ್ ಯಶಸ್ವಿಯಾದ ಕೂಡಲೇ ನಿಜ ಜೀವನದಲ್ಲಿ ತಾನು ಸಾಯಬಹುದು ಅಂತ ಸೈನಿಕನಿಗೆ ಅನ್ನಿಸುತ್ತದೆ. ಆಗವನು ಕಡೆಯ ಬಾರಿ ತನ್ನ ತಂದೆಯ ಜೊತೆ ಮಾತನಾಡಬೇಕು ಅಂತ ಬಯಸುತ್ತಾನೆ. ಆದರೆ ಪ್ರೋಗ್ರಾಮರುಗಳಿಗೆ ಅವನು ಆದಷ್ಟು ಬೇಗ ಬಾಂಬರ್ ಅನ್ನು ಪತ್ತೆ ಹಚ್ಚುವ ಕಾರ್ಯವಷ್ಟೇ ಮುಖ್ಯವಾಗಿರುತ್ತದೆ. ಹಾಗಾಗಿ ಅವರು ಅವನ ಸೆಂಟಿಮೆಂಟ್ಸ್‌ಗಳಿಗೆ ಬೆಲೆ ಕೊಡುವುದಿಲ್ಲ.


ಕಡೆಗೂ ಪಟ್ಟುಬಿಡದ ಸ್ಟೀವನ್ಸ್ ಎಂಟು ನಿಮಿಷಗಳ ನೆನಪಿನೊಳಗೆ ಪದೇ ಪದೇ ನುಸುಳಿ ಆ ಬಾಂಬರ್ ಯಾರು ಅಂತ ಕಂಡುಹಿಡಿಯುತ್ತಾನೆ. ಟ್ರೈನಿನೊಳಗೆ ಬಾಂಬ್ ಇಟ್ಟವನ ಹೆಸರು, ಕಾರ್ ನಂಬರ್ ಎಲ್ಲವನ್ನೂ ನೋಟ್ ಮಾಡಿಕೊಳ್ತಾನೆ. ಆದರೆ ಟ್ರೈನ್ ಅನ್ನು ವಿಸ್ಫೋಟದಿಂದ ಬಚಾವು ಮಾಡಲು ಅವನಿಗೆ ಆಗುವುದಿಲ್ಲ. ಈ ಬಾರಿಯೂ ಟ್ರೈನ್ ಸ್ಫೋಟಿಸುವುದರೊಂದಿಗೆ ಅವನ ಸೋರ್ಸ್ ಕೋಡ್ ಪಯಣ ಮುಗಿಯುತ್ತದೆ‌.


ಆದರೆ ಅವನ ಪಯಣ ನಿರರ್ಥಕವಾಗುವುದಿಲ್ಲ.


ನೆನಪಿನಿಂದ ಆಚೆ ಬಂದ ಕೂಡಲೇ ಸ್ಟೀವನ್ಸ್ ಕೊಲೆಗಾರನ ಹೆಸರು ಮತ್ತು ಆತನ ಗಾಡಿಯ ವಿವರವನ್ನು ಮಿಲಿಟರಿ ಆಫೀಸರುಗಳಿಗೆ ಕೊಡುತ್ತಾನೆ. ತಕ್ಷಣ ಪೊಲೀಸರು ಕಾರ್ಯಪ್ರವೃತ್ತರಾಗಿ ಆ ಬಾಂಬರ್‌ನನ್ನು ಹಿಡಿದು ಹಾಕುತ್ತಾರೆ. ಇದರಿಂದ ಮುಂದಿನ ಬಹುದೊಡ್ಡ ವಿಸ್ಫೋಟ ನಡೆಯದೇ ಆ ದೇಶದ ಜನತೆ ಪಾರಾಗುತ್ತಾರೆ. ಜನರೆಲ್ಲಾ ಬಹಳ ಖುಷಿಯಲ್ಲಿರುತ್ತಾರೆ. ಮೀಡಿಯಾಗಳಲ್ಲೆಲ್ಲಾ ಇದೇ ಸುದ್ದಿ ರಾರಾಜಿಸುತ್ತದೆ.


ಆದರೆ ಸ್ವತಃ ಸ್ಟೀವನ್ಸ್‌ಗೆ ಆ ಖುಷಿ ಇರುವುದಿಲ್ಲ.


ಏಕೆಂದರೆ ಆ ಟ್ರೈನಿನ ಜನರನ್ನು ವಿಸ್ಫೋಟದಿಂದ ಬಚಾವು ಮಾಡಬೇಕು ಅನ್ನುವುದು ಅವನ ಆಸೆಯಾಗಿರುತ್ತದೆ. ಆದರೆ ಇದಕ್ಕೆ ಯಾರೂ ಮಾನ್ಯತೆ ಕೊಡುವುದಿಲ್ಲ. ಏಕೆಂದರೆ ಅದು ಈಗಾಗಲೇ ನಡೆದು ಹೋಗಿರುವ ಘಟನೆ! ಸ್ವೀವನ್ಸ್ ಈಗ ಆ ಹೋಗಿ ಆ ಬಾಂಬ್ ಅನ್ನು ಡಿಫ್ಯೂಸ್ ಮಾಡಿದರೂ, ಸತ್ತಿರುವ ಜನ ಮತ್ತೆ ಬದುಕುವುದಿಲ್ಲ. ಆ ರೀತಿಯ ಪವಾಡ ನಿಜ ಜೀವನದಲ್ಲಿ ನಡೆಯಲು ಸಾಧ್ಯ ಇರುವುದಿಲ್ಲ ಅಂತ ಅವರ ಅನಿಸಿಕೆಯಾಗಿರುತ್ತದೆ.


ಆದರೆ ಸ್ಟೀವನ್ಸ್ ಬಹಳ ರಿಕ್ವೆಸ್ಟ್ ಮಾಡಿ ಕೊನೆಯ ಬಾರಿ ತನ್ನನ್ನು ಆ ನೆನಪಿನೊಳಗೆ ಕಳಿಸುವಂತೆ ಮಿಲಿಟರಿ ಆಫೀಸರ್ ಬಳಿ ಕೇಳಿಕೊಳ್ಳುತ್ತಾನೆ. ಅದರ ನಂತರ ತನ್ನ ದೇಹಕ್ಕಿರುವ ಜೀವರಕ್ಷಕ ಸಾಧನವನ್ನು ಅನ್ ಪ್ಲಗ್ ಮಾಡಿ, ತನ್ನ ದೇಹಕ್ಕೆ ಮುಕ್ತಿ ಕೊಡುವಂತೆ ಬೇಡಿಕೊಳ್ಳುತ್ತಾನೆ. ನಿಜ ಪ್ರಪಂಚದಲ್ಲಿ ತಾನು ಅಂದುಕೊಂಡಿದ್ದನ್ನು ಮಾಡುವುದು ಅಸಾಧ್ಯವಾದರೂ, ಅಟ್ಲೀಸ್ಟ್ ತನ್ನ ನೆನಪಿನೊಳಗಾದರೂ ಆ ಟ್ರೈನಿನ ಜನರು ಬಚಾವಾಗಲಿ, ಅದರಿಂದ ತನ್ನಾತ್ಮಕ್ಕೆ ಶಾಂತಿ ಸಿಗುತ್ತದೆ ಅಂತ ಎಮೋಷನಲ್ ಬ್ಲಾಕ್ಮೇಲ್ ಮಾಡಿ ಕಡೆಯ ಬಾರಿ ಆ ಕನಸಿನೊಳಗೆ ಹೋಗುತ್ತಾನೆ.


ಈಗವನಿಗೆ ಆ ಎಂಟು ನಿಮಿಷಗಳ ಅವಧಿ ಕರತಲಾಮಲಕವಾಗಿರುತ್ತದೆ. ಅವನು‌ ತನ್ನೆದುರಿಗೆ ಕುಳಿತಿದ್ದ ಶಾನ್‌ನ ಪ್ರೇಯಸಿಗೆ ಪ್ರೇಮ ನಿವೇದನೆ ಮಾಡಲು ಕಾಫಿಗೆ ಆಹ್ವಾನಿಸುತ್ತಾನೆ. ಜೊತೆಗೆ ಬಾಂಬ್ ಅನ್ನು ಡಿಫ್ಯೂಸ್ ಮಾಡಿ, ಬಾಂಬರ್ ಅನ್ನು ಟ್ರೈನಿನಲ್ಲಿಯೇ ಕಟ್ಟಿ ಹಾಕಿ, ಅವನ ಫೋನಿನಿಂದಲೇ ಪೊಲೀಸರಿಗೆ ಫೋನ್ ಮಾಡಿ, ವಿಷಯ ತಿಳಿಸುತ್ತಾನೆ.


ನಂತರ ತನ್ನ ಬಹುದಿನಗಳ ಆಸೆಯನ್ನು ಪೂರೈಸಿಕೊಳ್ಳಲು ತನ್ನ ತಂದೆಗೆ ಫೋನ್ ಮಾಡುತ್ತಾನೆ. ನೋಡಿದರೆ ಅವನ ತಂದೆ ಫೋನ್ ತೆಗೆಯುತ್ತಾರೆ. ಸ್ಟೀವನ್ಸ್‌ಗೆ ಕಣ್ತುಂಬಿ ಬರುತ್ತದೆ. ತಾನು ಸ್ಟೀವನ್ಸ್‌ನ ಸ್ನೇಹಿತ ಅಂತ ಪರಿಚಯಿಸಿಕೊಂಡು, ತನ್ನ ತಂದೆಯ ಆರೋಗ್ಯದ ಬಗ್ಗೆ ವಿಚಾರಿಸಿ ಫೋನ್ ಇಡುತ್ತಾನೆ.


ನಂತರ ಇದೆಲ್ಲಾ ವಿವರಗಳನ್ನೂ ಆ ಲೇಡಿ ಮಿಲಿಟರಿ ಆಫೀಸರ್‌ಗೆ ಮೆಸೇಜ್ ಮಾಡಿ ಶಾನ್‌ನ ಪ್ರಿಯತಮೆಯ ಬಳಿ ಬರುತ್ತಾನೆ. ಅವನು ಭೂತಕಾಲದ ನೆನಪಿನಲ್ಲಿ ಇರುವುದರಿಂದ ಅವನು ಮಾಡಿದ ಮೆಸೇಜ್ ಆಫೀಸರ್‌ಗೆ ತಲುಪುವುದಿಲ್ಲ ಅಂತ ನಾವು ಅಂದುಕೊಳ್ಳುತ್ತೇವೆ.


ನಂತರ ಆ ಟ್ರೈನಿನಲ್ಲಿಯೇ ಇದ್ದ ಒಬ್ಬ ಕಾಮೆಡಿಯನ್ನಿಗೆ ದುಡ್ಡು ಕೊಟ್ಟು ಅಲ್ಲಿರುವ ಜನರನ್ನೆಲ್ಲಾ ನಗಿಸುವಂತೆ ಕೋರಿಕೊಳ್ಳುತ್ತಾನೆ. ನಿಜ ಜೀವನದಲ್ಲಿ ಆ ಜನರು ವಿಸ್ಫೋಟಕ್ಕೆ ಸಿಲುಕಿ ಸತ್ತು ಹೋಗಿದ್ದರೂ, ತನ್ನ ನೆನಪಿನಲ್ಲಿ ಅವರ ನಗುಮುಖ ಶಾಶ್ವತವಾಗಿರಲಿ ಅಂತ ಅವನು ಬಯಸುತ್ತಾನೆ.


ಅಷ್ಟರಲ್ಲಿ ಅವನ ಕಡೆಯ ಕ್ಷಣ ಬಂದೇ ಬಿಡುತ್ತದೆ...!!


ಇತ್ತ ನಿಜ ಜೀವನದಲ್ಲಿ ಸ್ಟೀವನ್ಸ್‌ಗೆ ಮಾತು ಕೊಟ್ಟ ಹಾಗೆ ಲೇಡಿ ಆಫೀಸರ್ ಎಂಟು ನಿಮಿಷ ಪೂರ್ತಿಯಾದ ಕೂಡಲೇ, ಅವನಿಗೆ ಅಳವಡಿಸಿದ್ದ ಜೀವರಕ್ಷಕ ಸಾಧನಗಳನ್ನು ತೆಗೆದುಬಿಡುತ್ತಾಳೆ. ಇದರಿಂದ ಸ್ಟೀವನ್ಸ್ ತನ್ನ ಕಡೆಯುಸಿರು ಎಳೆಯುತ್ತಾನೆ.


ಉಪಸಂಹಾರ:


ಬೆಳಿಗ್ಗೆ ರೇಡಿಯೋದಲ್ಲಿ ಆ ನಗರದಲ್ಲಿ ನಡೆಯಬೇಕಿದ್ದ ಟ್ರೈನ್ ವಿಸ್ಫೋಟವನ್ನು ತಡೆದಿರುವುದರ ಬಗ್ಗೆ ಸುದ್ದಿ ಪ್ರಸಾರವಾಗುತ್ತದೆ‌. ಪೊಲೀಸರು ಬಾಂಬರ್‌ನನ್ನು ಅವನು ಟ್ರೈನ್ ಸ್ಫೋಟಿಸುವ ಮೊದಲೇ ಹಿಡಿದು ಹಾಕಿರುತ್ತಾರೆ. ಲೇಡಿ ಮಿಲಿಟರಿ ಆಫೀಸರ್ ಅಂದು ಬೆಳಿಗ್ಗೆ ಆಫೀಸಿಗೆ ಬಂದಾಗ ಅವಳಿಗೊಂದು ಮೆಸೇಜ್ ಇರುತ್ತದೆ.


ಅದು ಸ್ಟೀವನ್ಸ್ ಎಂಬ ಸೈನಿಕ ಮಾಡಿರುವುದು. ಅವನು ಬಾಂಬರ್‌ನ ಹೆಸರು, ಅವನ ಉದ್ದೇಶ, ತನ್ನ ಮೇಲೆ ನಡೆಸಿದ ಸೋರ್ಸ್ ಕೋಡ್ ಪ್ರೋಗ್ರಾಮ್ ಎಲ್ಲದರ ಬಗ್ಗೆ ಟೈಪ್ ಮಾಡಿ ಕಳಿಸಿರುತ್ತಾನೆ. ಆದರೆ ಆ ಲೇಡಿ ಆಫೀಸರಿಗೆ ಇದು ಯಾವುದೂ ಗೊತ್ತಿರುವುದಿಲ್ಲ.


ಏಕೆಂದರೆ ಟ್ರೈನ್ ಸ್ಫೋಟವಾಗುವುದಕ್ಕೂ ಮೊದಲೇ ಅಪರಾಧಿಯನ್ನು ಹಿಡಿದಿರುವುದರಿಂದ, ಸೋರ್ಸ್ ಕೋಡ್ ಪ್ರೋಗ್ರಾಮ್ ಮೂಲಕ ಸೈನಿಕನನ್ನು ಶಾನ್‌ನ ಮೆಮೊರಿಯೊಳಗೆ ಕಳಿಸುವ ಸಂದರ್ಭವೇ ಎದುರಾಗಿರುವುದಿಲ್ಲ. ಆದರೆ ಇದೆಲ್ಲವೂ ನಡೆದಿರುವ ಹಾಗೆ ಸೈನಿಕ ಮೆಸೇಜ್ ಕಳಿಸಲು ಹೇಗೆ ಸಾಧ್ಯ ಅಂತ ಮಿಲಿಟರಿ ಆಫೀಸರಿಗೆ ತಲೆಕೆಡುತ್ತದೆ.


ಏಕೆಂದರೆ ಈ ಮೆಸೇಜ್ ಕಳಿಸಿರುವ ಸ್ಟೀವನ್ಸ್ ಎಂಬ ಸೈನಿಕ ಅವರ ಆಫೀಸಿನ ಒಂದು ಚೇಂಬರಿನಲ್ಲಿ ತನ್ನ ಅಳುದುಳಿದ ಅಂಗಾಗಳೊಡನೆ, ಜೀವರಕ್ಷಕ ಸಾಧನಗಳ ಸಹಾಯದಿಂದ ಉಸಿರಾಡುತ್ತಿರುತ್ತಾನೆ. ಅವನು ಹೊರಗೆ ಹೋಗಿ ಇದನ್ನೆಲ್ಲಾ ಮಾಡುವುದಿರಲಿ, ಒಂದು ಇಂಚು ಅಲುಗಾಡಲು ಸಹ ಅವನಿಂದ ಸಾಧ್ಯವಿರುವುದಿಲ್ಲ.

 
ಹಾಗಿದ್ದರೆ ಇದರ ರಹಸ್ಯವೇನು?


ಕ್ಲೈಮ್ಯಾಕ್ಸ್ :


ಎಂಟು ನಿಮಿಷದ ನಂತರ ಎಲ್ಲರ ಮಧುರ ನೆನಪಿನೊಂದಿಗೆ ತನ್ನ ಜೀವನ ಮುಕ್ತಾಯವಾಗುತ್ತದೆ ಅಂತ ಸ್ಟೀವನ್ಸ್ ಅಂದುಕೊಂಡಿರುತ್ತಾನೆ. ಆದರೆ ಹಾಗಾಗುವುದಿಲ್ಲ. ಅವನ ಜೀವನ ಎಂಟು ನಿಮಿಷದ ನಂತರವೂ ಮುಂದುವರೆಯುತ್ತದೆ‌. ಬದಲಾದ ಜೀವನಕ್ಕೆ ಅವನೂ ಹೊಂದಿಕೊಂಡು, ತಾನು ಶಾನ್ ಆಗಿಯೇ ಮುಂದುವರೆಯಬೇಕೆಂದು ನಿರ್ಧರಿಸುತ್ತಾನೆ.


ಏಕೆಂದರೆ ಸೋರ್ಸ್ ಕೋಡ್ ಮಾಡಿದವರಿಗೆ ಒಂದು ವಿಷಯ ಗೊತ್ತಿರುವುದಿಲ್ಲ‌. ಅವರು ಪ್ರತೀಬಾರಿಯೂ ಸ್ಟೀವನ್ಸ್‌ನನ್ನು ಶಾನ್‌ನ ನೆನಪಿನೊಳಗೆ ಕಳಿಸುತ್ತಿದ್ದೇವೆ ಅಂತ ಅಂದುಕೊಳ್ಳುತ್ತಿರುತ್ತಾರೆ‌. ಆದರೆ ನಿಜವಾಗಿ ಸ್ಟೀವನ್ಸ್ ಪ್ರತೀಬಾರಿಯೂ ಒಂದೊಂದು ಪರ್ಯಾಯ ಜಗತ್ತಿನೊಳಗೆ ಹೋಗಿ ಬರುತ್ತಿರುತ್ತಾನೆ. ಅಂದರೆ ಅಲ್ಲಿ ನಡೆಯುತ್ತಿದ್ದ ಅಷ್ಟೂ ಘಟನೆಗಳು ಆಯಾ ಜಗತ್ತಿಗೆ ನಿಜವೇ ಆಗಿತ್ತು..!!!


ಸ್ವೀವನ್ಸ್ ಅಂತಹುದೇ ಒಂದು ಪರ್ಯಾಯ ಜಗತ್ತಿನಲ್ಲಿ ತನ್ನ ಪ್ರಪಂಚದೊಂದಿಗಿನ ಸಂಬಂಧ ಕಡಿದುಕೊಂಡು ನೆಲೆಸುತ್ತಾನೆ. ಅವನು ಆ ಜಗತ್ತಿನ ತನ್ನ ತಂದೆಯೊಂದಿಗೆ ಫೋನಿನಲ್ಲಿ ಮಾತನಾಡಿರುತ್ತಾನೆ. ಆ ಜಗತ್ತಿನ ಮಿಲಿಟರಿ ಆಫೀಸರಿಗೆ ಮೆಸೇಜ್ ಮಾಡಿರುತ್ತಾನೆ. ಹಾಗಾಗಿ ಆಫೀಸರಿಗೆ ಇವನು ಮಾಡಿದ್ದ ಮೆಸೇಜ್ ಸರಿಯಾಗಿ ಅರ್ಥವಾಗಿರುವುದಿಲ್ಲ. ಏಕೆಂದರೆ ಆ ಜಗತ್ತಿನಲ್ಲಿ ಸೋರ್ಸ್ ಕೋಡ್ ಮಾಡಿಯೇ ಇರುವುದಿಲ್ಲ.


ಇದರ ಕಥೆ ಬಹಳ ವಿಸ್ತಾರವಾಗಿದೆ. ಒಂದು ರೀತಿ ಹೇಳಬೇಕೆಂದರೆ ಉಪೇಂದ್ರ ಹೇಳುವ ಹಾಗೆ ಇದಕ್ಕೆ ಹಲವಾರು ದೃಷ್ಟಿಕೋನಗಳಿವೆ. ನನಗೆ ಅರ್ಥವಾದ ಹಾಗೆ ನಾನು ಬರೆದಿದ್ದೇನೆ. ನೋಡುವವರಿಗೆ ಬೇರೆಯದೇ ಅರ್ಥವಾಗಬಹುದು. ಇಂದಿಗೂ ಅತ್ಯುತ್ತಮ ರೇಟಿಂಗ್ ಇರುವ ಈ ಸಿನೆಮಾವನ್ನು ಖಂಡಿತ ನೋಡಿ. ಮಿಸ್ ಮಾಡಬೇಡಿ.


***********

ಕೆ.ಎ.ಸೌಮ್ಯ
ಮೈಸೂರು

Popular posts from this blog

Paradha Movie Review (Telugu)

ಥಪ್ಪಡ್ (ಹಿಂದಿ)

ಎಡಗೈ ಅಪಘಾತಕ್ಕೆ ಕಾರಣ (ಕನ್ನಡ)