Irul (ಮಲಯಾಳಂ)


ಇದ್ದ ಮೂವರಲ್ಲಿ ಕದ್ದವರು ಯಾರು ಎಂಬ ಗಾದೆಯಂತಿದೆ ಈ ಸಿನೆಮಾ. ಇರುವುದೇ ಮೂರು ಕ್ಯಾರೆಕ್ಟರುಗಳು. ಒಬ್ಬ ಹೀರೋ, ಒಬ್ಬಳು ಹೀರೋಯಿನ್, ಮತ್ತೊಬ್ಬ ವಿಲನ್. ಹೀರೋಯಿನ್ ಯಾರು ಅಂತ ನೋಡದೇ ಕೂಡಾ ಹೇಳಬಹುದು. ಆದರೆ ಹೀರೋ ಯಾರು, ವಿಲನ್ ಯಾರು ಅಂತ ಹೇಳುವುದಕ್ಕೆ ಮಾತ್ರ ಸಿನೆಮಾವನ್ನು ಕೊನೆಯವರೆಗೂ ನೋಡಬೇಕಾಗುತ್ತದೆ.


ಅಲೆಕ್ಸ್ ಎಂಬಾತ ಒಬ್ಬ ಲೇಖಕ. ತನ್ನ ಮೊದಲ ಪುಸ್ತಕ 'ಇರುಳ್' ಅನ್ನು ಆಗಷ್ಟೇ ಲೋಕಾರ್ಪಣೆ ಮಾಡಿರುತ್ತಾನೆ. ಅದೊಂದು ಡಾರ್ಕ್ ಸಬ್ಜೆಕ್ಟ್. ಅಂದರೆ ಸರಣಿ ಹತ್ಯೆಗಳ ಕುರಿತಾದ ನಿಜವಾದ ಸುದ್ದಿಯನ್ನು ಆಧರಿಸಿ, ತನ್ನದೇ ದೃಷ್ಟಿಕೋನದಿಂದ ಆ ಪುಸ್ತಕ ಬರೆದಿರುತ್ತಾನೆ. ಸದಾ ಅದನ್ನೇ ಯೋಚಿಸುತ್ತಿದ್ದರಿಂದಲೋ ಏನೋ, ರಾತ್ರಿ ಮಲಗಿದಾಗ ಅವನಿಗೆ ಕೆಟ್ಟ ಕೆಟ್ಟ ಕನಸುಗಳು ಬೀಳುತ್ತಿರುತ್ತವೆ. ಅದರಿಂದ ಅವನು ತುಂಬಾ ಡಿಸ್ಟರ್ಬ್ ಆಗಿರುತ್ತಾನೆ.


ಅವನು ಅದನ್ನು ಮರೆಯಬೇಕೆಂದು ತನ್ನ ಗೆಳತಿ ಅರ್ಚನಾ ಬಳಿ ಹೋದರೆ, ಅವಳು ತುಂಬಾ ಬ್ಯುಸಿ ಇರುತ್ತಾಳೆ. ಅವಳು ಲಾಯರ್ ಆಗಿರುವುದರಿಂದ ಸದಾಕಾಲವೂ ಕೇಸ್ ಬಗೆಗಿನ ಫೋನ್ ಬರುತ್ತಲೇ ಇರುತ್ತದೆ. ಅಲೆಕ್ಸ್ ಇದರಿಂದ ಬೇಸತ್ತು, ತಾವಿಬ್ಬರೂ ಒಂದೆರೆಡು ದಿನ ಹೊರಗೆ ಎಲ್ಲಾದರೂ ಹೋಗಿ ಬರೋಣ ಅಂತ ಕೇಳುತ್ತಾನೆ. ಅರ್ಚನಾ ಒಪ್ಪುತ್ತಾಳೆ.


ಆದರೆ ಅಲೆಕ್ಸ್ ಒಂದು ಷರತ್ತು ವಿಧಿಸುತ್ತಾನೆ.


ಏನೆಂದರೆ ಅರ್ಚನಾ ತನ್ನ ಜೊತೆಯಲ್ಲಿ ಮೊಬೈಲ್ ಫೋನ್ ತರಬಾರದು ಅಂತ. ಜೊತೆಗೆ ತಾವು ಜೊತೆಗಿದ್ದಷ್ಟು ಹೊತ್ತೂ ಪರಸ್ಪರ ಮೊಬೈಲ್ ಇಲ್ಲದೇ, ಕೇವಲ ತಾವು ಮಾತ್ರ ಸಮಯ ಕಳೆಯಬೇಕು ಅಂತ. ಅರ್ಚನಾ ಒಪ್ಪುತ್ತಾಳೆ. ಇಬ್ಬರೂ ತಮ್ಮ ಮೊಬೈಲುಗಳನ್ನು ಮನೆಯಲ್ಲೇ ಬಿಟ್ಟು, ಯಾರಿಗೂ ಹೇಳದೇ ಎತ್ತಲೋ‌ ಹೊರಡುತ್ತಾರೆ. 


'ಎಲ್ಲಿಗೆ ಹೋಗುತ್ತಿದ್ದೇವೆ?' ಎನ್ನುವುದು ಒಂದು ಸರ್ಪ್ರೈಸ್ ಅಂತ ಅಲೆಕ್ಸ್ ಹೇಳಿರುತ್ತಾನೆ. ಆದರೆ ರಾತ್ರಿಯ ಸಮಯದಲ್ಲಿ, ಕಾಡಿನ ಮಧ್ಯೆ, ಅದೂ ಜೋರಾಗಿ ಮಳೆ ಸುರಿಯುತ್ತಿರುವಾಗ ಇವರ ಕಾರ್ ಕೆಟ್ಟು ನಿಲ್ಲುತ್ತದೆ. ಅರ್ಚನಾ ಅಂತೂ 'ಇದೇನಾ ನಿನ್ ಸರ್ಪ್ರೈಸ್' ಅಂತ ಸಕತ್ತಾಗಿ ಚುಡಾಯಿಸುತ್ತಾಳೆ.


ಅಲೆಕ್ಸ್ ಆರಾಮಾಗಿ "ಈಗ ಮೆಕ್ಯಾನಿಕ್ಕಿಗೆ ಫೋನ್ ಮಾಡಿದರೆ ಆಯ್ತು. ಬಂದು ರಿಪೇರಿ ಮಾಡ್ತಾನೆ" ಅನ್ನುತ್ತಾನೆ. ನಂತರ ನೆ‌ನಪಾಗುತ್ತದೆ ತಾವಿಬ್ಬರೂ ಫೋನ್ ತಂದಿಲ್ಲ ಅಂತ. 'ಮೊಬೈಲ್ ಫೋನ್ ಜೊತೆಗೆ ಇಲ್ಲದಿದ್ದರೆ ಏನೇನು ಅನಾಹುತಗಳು ಆಗುತ್ತವಪ್ಪ' ಅಂತ ನಮಗೂ ಭಯವಾಗುತ್ತದೆ.



ಇನ್ನೇನು? ವಿಧಿಯಿಲ್ಲದೇ ಇಬ್ಬರೂ ಕಣ್ಣಿಗೆ ಕಾಣಿಸಿದ ಮನೆಯ ಬಳಿ ಹೋಗಿ ಬಾಗಿಲು ತಟ್ಟುತ್ತಾರೆ. ಬಾಗಿಲು ತೆರೆದವನೊಬ್ಬ ಧನಿಕ. ಅವನೇ ಫಹಾದ್ ಫಾಸಿಲ್. ಆದರೆ ಅವನ‌ ಬಳಿ ಮೊಬೈಲ್ ಫೋನ್‌ ಇರುವುದಿಲ್ಲ. ಜೊತೆಗೆ ಮನೆಯ ಲ್ಯಾಂಡ್ ಲೈನ್ ಕೆಟ್ಟು ಹೋಗಿರುತ್ತದೆ. ಏನು ಮಾಡುವುದು? ಜೋರಾದ ಮಳೆ ಬರುತ್ತಿರುವುದರಿಂದ ಹೊರಡಲೂ ಸಾಧ್ಯ ಆಗುವುದಿಲ್ಲ.



ಸರಿ. ಮಳೆ ನಿಲ್ಲುವವರೆಗೆ ಟೈಮ್ ಪಾಸ್ ಮಾಡಲು ಮೂವರೂ ಮಾತಾಡುತ್ತಾ ಕೂರುತ್ತಾರೆ. ಆಗ ಅಲೆಕ್ಸ್ ಬರೆದ ಪುಸ್ತಕ 'ಇರುಳ್'ನ ಬಗ್ಗೆ ಮಾತು ಹೊರಳುತ್ತದೆ. ಫಹಾದ್ 'ಸ್ವಂತ ಅನುಭವ ಇಲ್ಲದ ಯಾರೂ ಸೀರಿಯಲ್ ಕಿಲ್ಲಿಂಗ್ ಬಗ್ಗೆ ಬರೆಯಲು ಸಾಧ್ಯವಿಲ್ಲ' ಅಂತ ಅಂದುಬಿಡುತ್ತಾನೆ.‌ 'ಅಂದ್ರೆ.. ಬುಕ್ ಬರೆಯಬೇಕು ಅಂದ್ರೆ ನಾನು ಕೊಲೆ ಮಾಡಬೇಕಾ?' ಅಂತ ಅಲೆಕ್ಸ್ ಕೂಡಾ ಸಿಟ್ಟಾಗುತ್ತಾನೆ.



ಅಷ್ಟರಲ್ಲಿ ಕರೆಂಟ್ ಹೋಗುತ್ತದೆ. ಅಲೆಕ್ಸ್ ಮತ್ತು ಫಹಾದ್ ಇಬ್ಬರೂ ಮೇನ್ ಸ್ವಿಚ್ ಬೋರ್ಡ್ ಹುಡುಕಿಕೊಂಡು ಬೇಸ್ಮೆಂಟಿಗೆ ಇಳಿದಾಗ, 'ಇರುಳ್' ಕಾದಂಬರಿಯಲ್ಲಿ ಇರುವಂತೆಯೇ ಯುವತಿಯೊಬ್ಬಳ ತಲೆ ಬೋಳಿಸಿ, ನೇತು ಹಾಕಿ, ಹಿಂಸಿಸಿ ಕೊಂದಿರುವುದು ಕಾಣುತ್ತದೆ.



ಅಲೆಕ್ಸ್‌ಗೆ ಅನುಮಾನ ಬಂದು ಫಹಾದ್‌ಗೆ ಹೊಡೆದು, ಎಳೆದುಕೊಂಡು ಬಂದು ಕಟ್ಟಿ ಹಾಕುತ್ತಾನೆ. ಅರ್ಚನಾಗೆ ವಿಷಯ ತಿಳಿದು ಪೊಲೀಸರಿಗೆ ಫೋನ್ ಮಾಡಲು ಹೋದರೆ ಅಲೆಕ್ಸ್ ಬಿಡುವುದಿಲ್ಲ. ಏಕೆಂದರೆ ಅದು ಅಲೆಕ್ಸ್‌ನದ್ದೇ ಮನೆ ಆಗಿರುತ್ತದೆ. ಪೊಲೀಸರು ಬಂದರೆ ಅರೆಸ್ಟ್ ಆಗುವುದು ಅಲೆಕ್ಸೇ..! ಏಕೆಂದರೆ ಯುವತಿಯ ಶವ ಇರುವುದು ಅವನ ಮನೆಯಲ್ಲಿಯೇ ತಾನೇ?



ಹಾಗಾದರೆ ಫಹಾದ್ ಯಾರು?



ಇಬ್ಬರೂ ಅವನತ್ತ ತಿರುಗುತ್ತಾರೆ. ನೋಡಿದರೆ ಅವನೊಬ್ಬ ಕಳ್ಳ ಆಗಿರುತ್ತಾನೆ. ಆ ಮನೆಯಲ್ಲಿ ಯಾರೂ ಇಲ್ಲ ಅಂತ ತಿಳಿದು ಕಳ್ಳತನ ಮಾಡಲು ಬಂದಿರುತ್ತಾನೆ ಫಹಾದ್. ಇವರಿಬ್ಬರೂ ಬಂದು ಬಾಗಿಲು ತಟ್ಟಿದಾಗ, ತಪ್ಪಿಸಿಕೊಳ್ಳುವ ದಾರಿ ಕಾಣದೇ, ಬಾಗಿಲು ತೆರೆದು ಆ ಮನೆಯ ಮಾಲೀಕನ ಹಾಗೆ ನಟಿಸಿರುತ್ತಾನೆ.



ಆದರೆ ಬೇಸ್ಮೆಂಟಿನಲ್ಲಿ ಆ ಯುವತಿಯನ್ನು ಕೊಲೆ ಮಾಡಿರುವುದು ಅಲೆಕ್ಸ್ ಅಂತ ಫಹಾದ್ ಆರೋಪ ಮಾಡಲು ಶುರು ಮಾಡುತ್ತಾನೆ. ಆದರೆ ಅಲೆಕ್ಸ್ ಒಪ್ಪದೇ ಫಹಾದ್ ಮೇಲೆ ಆರೋಪಿಸುತ್ತಾನೆ. ಅರ್ಚನಾಗೆ ಇವರಿಬ್ಬರಲ್ಲಿ ನಿಜವಾದ ಸೀರಿಯಲ್ ಕಿಲ್ಲರ್ ಯಾರು ಅಂತ ಗೊತ್ತಾಗುವುದಿಲ್ಲ.



ಜೊತೆಗೆ ನಮಗೂ ಕನ್ಫ್ಯೂಸ್ ಆಗುತ್ತದೆ.


ಇದು ಗೊತ್ತಾಗುವಷ್ಟರಲ್ಲಿ ಸಿನೆಮಾ ಮುಗಿದಿರುತ್ತದೆ. ಒನ್ ಟೈಮ್ ವಾಚ್ ಸಿನೆಮಾ ಇದು. ಸಿನೆಮಾದಲ್ಲಿ ಇರುವುದೇ ಮೂರು ಕ್ಯಾರೆಕ್ಟರ್ ಆಗಿರುವುದರಿಂದ, ಮೂವರಲ್ಲಿ ಒಬ್ಬರು ಕೊಲೆಗಾರರು ಆಗಿರಲೇಬೇಕು ಅಂತ ನಮಗೂ ಗೊತ್ತಿರುತ್ತದೆ.‌ ಆದರೆ ನಿಜಕ್ಕೂ ನಮ್ ಗೆಸ್ ಉಲ್ಟಾ ಆಗುತ್ತದೆ.



ಫಹಾದ್ ಅಭಿನಯ ಮೈಂಡ್ ಬ್ಲೋಯಿಂಗ್.



ಆದರೆ ಅರ್ಚನಾ ನಟನೆ ತೀರಾ ಕೆಟ್ಟದಾಗಿದೆ. ಅವಳು ಕಿರಿಚಾಡುತ್ತಿರುವುದನ್ನು ನೋಡಿದರೆ ತಲೆ ಚಚ್ಚಿಕೊಳ್ಳಬೇಕೆನಿಸುತ್ತದೆ. ನಾನು ನೋಡಿದ್ದರಲ್ಲಿ ಇದೇ ಆಕೆಯ ಮೊದಲ ಸಿನೆಮಾ ಆಗಿದ್ದರೆ, ಮುಂದೆಂದೂ ಆಕೆಯ ಸಿನೆಮಾ ನೋಡುವ ಸಾಹಸ ಮಾಡುತ್ತಿರಲಿಲ್ಲ ನಾನು. ಅಷ್ಟು ಕಿರಿಚಾಡಿದ್ದಾಳೆ. ಹಾಗೆ ನೋಡಿದರೆ ಅಲೆಕ್ಸ್‌ಗೆ ತುಂಬಾ ಸಹನೆ ಅಂತಲೇ ಹೇಳಬೇಕು. ಫಹಾದ್ ಎಂದಿನಂತೆ ಕಣ್ಣಿನಲ್ಲೇ ಕೊಲ್ಲುತ್ತಾನೆ.



ಒಂದು ಸೀರಿಯಲ್ ಕಿಲ್ಲಿಂಗ್‌‌... ಅದನ್ನು ಆಧಾರವಾಗಿಟ್ಟುಕೊಂಡು ಬರೆದ ಕಾದಂಬರಿ... ಅಲೆಕ್ಸ್ ಸ್ವಂತ ಮನೆಯಲ್ಲಿಯೇ ಒಬ್ಬಳ ಕೊಲೆ.. ಅದೂ ಥೇಟ್ ಕಥೆಯಲ್ಲಿರುವಂತೆಯೇ... ಅಪರಾಧಿಗಳು ಇಬ್ಬರು.. ಈ ಎಲ್ಲಾ ವಿಷಯಗಳೂ ಒಂದೇ ವೃತ್ತದಲ್ಲಿ ಒಟ್ಟಿಗೆ ಹೇಗೆ ಸುತ್ತಲು ಸಾಧ್ಯ??



ಮಿಸ್ಟೀರಿಯಸ್ ಆಗಿ ಇರಲಿ ಅಂತ ಹೆಣೆದ ಕಥೆ ಇದ್ದ ಹಾಗಿದೆ ಇದು. ಹೆಜ್ಜೆಹೆಜ್ಜೆಗೂ ಟರ್ನಿಂಗ್ ಪಾಯಿಂಟ್ ಕೊಡುತ್ತಾ, ನಮ್ಮನ್ನು ಬೆಚ್ಚಿ ಬೀಳಿಸುವ ಬದಲು, ಕಂಗಾಲಾಗಿಸುತ್ತಾರೆ ನಿರ್ದೇಶಕರು. ಜೊತೆಗೆ ನಮ್ಮನ್ನು ಕನ್ವಿನ್ಸ್ ಮಾಡುವಲ್ಲಿಯೂ ಸೋಲುತ್ತಾರೆ.



ಕಡೆಗೆ ಸೀರಿಯಲ್ ಕಿಲ್ಲರ್ ಯಾರು ಅಂತ ಗೊತ್ತಾದಾಗ ಷಾಕ್ ಏನೂ ಆಗುವುದಿಲ್ಲ. ಬದಲಿಗೆ ನಾವೇ ಏನೇನೋ ಯೋಚಿಸಿದ್ದೆವಲ್ಲ, ಈ ಡೈರೆಕ್ಟರಿಗೆ ಆ ಯೋಚನೆಗಳು ಬರಲೇ ಇಲ್ವಾ ಅಂತ ತಲೆಯನ್ನು ಕೆರೆದುಕೊಂಡು ಸುಮ್ಮನಾಗುತ್ತೇವೆ.



ಫಹಾದ್ ಫಾಸಿಲ್ ಅಭಿಮಾನಿಗಳು ಒಂದು ಬಾರಿ ನೋಡಬಹುದು. ಅಲ್ಲದೇ ನಾನು ಇಡೀ ಸಿನೆಮಾವನ್ನು ಎಲ್ಲಿಯೂ ಓಡಿಸಿಕೊಂಡು ನೋಡಿಲ್ಲ. ಪ್ರತಿಯೊಂದು ಫ್ರೇಮ್ ಕೂಡಾ ಕುತೂಹಲ ಹುಟ್ಟಿಸುವಂತಿದೆ. ಮುಂದೇನಾಗುತ್ತದೆ ಅಂತ ಕಾತರದಿಂದ ಕಾಯುವಂತಾಗುತ್ತದೆ.



ಆದರೆ ಕಡೆಯಲ್ಲಿ ನಿರ್ದೇಶಕರು ಬಹಳಷ್ಟು ಪ್ರಶ್ನೆಗಳಿಗೆ ಉತ್ತರ ಕೊಡದೇ ಹಾಗೇ ಬಿಟ್ಟಿದ್ದಾರೆ. ಸೀರಿಯಲ್ ಕಿಲ್ಲರ್ ಹೆಣ್ಣುಮಕ್ಕಳನ್ನು ಯಾಕೆ ಸಾಯಿಸುತ್ತಿದ್ದ ಎನ್ನುವುದಕ್ಕೆ ಸರಿಯಾದ ಕಾರಣವನ್ನು ಅವರು ಕೊಟ್ಟಿಲ್ಲ. ಜೊತೆಗೆ ಆ ಮನೆ ಅಲೆಕ್ಸ್‌ದಾಗಿದ್ದರೆ, ಅಲ್ಲಿ ಅರ್ಚನಾ ಸೈಜಿ಼ನ ಬಟ್ಟೆ ಹೇಗಿತ್ತು ಅನ್ನುವುದನ್ನು ಹೇಳಲು ಸಹ ನಿರ್ದೇಶಕರು ಮರೆತಿದ್ದಾರೆ.



ಈ ಎಲ್ಲಾ ಪಾಯಿಂಟ್ಸ್ ಮರೆತು, ಕೇವಲ ಥ್ರಿಲ್ಲರ್ ಅನುಭವ ಬೇಕು ಎಂದರೆ 'ಇರುಳ್' ಬೆಸ್ಟ್ ಆಪ್ಷನ್‌. ಲಾಜಿಕ್ ಹಾಕದೇ ಫ್ರೀ ಮೈಂಡಿನಿಂದ ಫುಲ್ ಎಂಜಾಯ್ ಮಾಡಬಹುದು.



(ನಾನು ನೋಡಿದ್ದು ಹಿಂದಿ ವರ್ಷನ್- ಯೂಟ್ಯೂಬ್)
*********

ಕೆ.ಎ.ಸೌಮ್ಯ
ಮೈಸೂರು







Popular posts from this blog

Paradha Movie Review (Telugu)

ಥಪ್ಪಡ್ (ಹಿಂದಿ)

ಎಡಗೈ ಅಪಘಾತಕ್ಕೆ ಕಾರಣ (ಕನ್ನಡ)