"ಏಜೆಂಟ್ ಸಾಯಿ ಶ್ರೀನಿವಾಸ ಅತ್ರೇಯ" (ತೆಲುಗು)

 



ಹೆಸರೇ ಹೇಳುತ್ತದೆ ಸಿನೆಮಾದ ಕಥೆ ಏನೆಂದು. ಇದರಲ್ಲಿ ನಾಯಕ ಒಬ್ಬ ಡಿಟೆಕ್ಟೀವ್. ಅವನಿಗೊಬ್ಬ ಯುವತಿ ಅಸಿಸ್ಟೆಂಟ್. ಈತ ತನ್ನ ಅಸಿಸ್ಟೆಂಟ್ ಮುಂದೆ ತಾನು ಹಾಗೆ, ಹೀಗೆ ಅಂತ ಜಂಭ ಕೊಚ್ಚುತ್ತಾ ಇರುತ್ತಾನೆ. ಆದರೆ ವಾಸ್ತವವಾಗಿ ಹಾಗಿರದೇ ಜನರ ಮುಂದೆ ಅಪಹಾಸ್ಯಕ್ಕೆ ಈಡಾಗುತ್ತಾ ಇರುತ್ತಾನೆ. ಏನೇ ಆದರೂ ಆತನ ಟ್ಯಾಲೆಂಟ್‌ ಮೆಚ್ಚತಕ್ಕದ್ದು.

ಆತನ ಪ್ರತಿಭೆಯನ್ನು ನಾವೂ ಸಹ ಒಪ್ಪಿಕೊಳ್ಳುವಂತಹಾ ಎರಡು ಮೂರು ಇನ್ಸಿಡೆಂಟುಗಳೂ ಸಹ ನಡೆಯುತ್ತವೆ. ಆದರೆ ಪೊಲೀಸರು ಮಾತ್ರ ಇವನನ್ನು ಕ್ರೈಂ ಸೀನಿನಿಂದ ಒದ್ದು ಆಚೆ ಕಳಿಸುತ್ತಿರುತ್ತಾರೆ. ಇವನು ಚೂರೂ ಸಹ ಬೇಜಾರು ಮಾಡಿಕೊಳ್ಳದೇ ತನ್ನ ತನಿಖೆ ಮುಂದುವರೆಸುತ್ತಾ ಇರುತ್ತಾನೆ. ಹೀಗೆಯೇ ಜೀವನ ಮೂರಕ್ಕಿಳಿಯದೇ ಆರಕ್ಕೇರದೇ ಸಾಗುತ್ತಿರುತ್ತದೆ.

ಹೆಚ್ಚುಕಡಿಮೆ ಅರ್ಧ ಗಂಟೆಯವರೆ್ಗೂಗೂ ಹೀಗೆಯೇ ಹಾಸ್ಯಮಯವಾಗಿ ಸಾಗುತ್ತಿರುವ ಕಥೆ ನಂತರ ದಿಢೀರನೇ ಗಂಭೀರವಾದ ತಿರುವು ತೆಗೆದುಕೊಂಡುಬಿಡುತ್ತದೆ.

ಯಾರೂ ಊಹಿಸಿಯೂ ಇರದ ತಿರುವು !!!!

ಒಮ್ಮೆ ನಾಯಕನ ಸ್ನೇಹಿತನಾದ ಸಿರೀಶ್ ರೈಲ್ವೇ ಟ್ರಾಕುಗಳ ಪಕ್ಕ ಸಿಗುತ್ತಿರುವ ನಿಗೂಢ ಹೆಣಗಳ ಬಗ್ಗೆ ಹೇಳುತ್ತಾನೆ. 'ಆ ಹೆಣಗಳು ಯಾವುವು? ಎಲ್ಲಿಯವು? ಒಂದೂ ಗೊತ್ತಾಗಿಲ್ಲ. ಆದರೆ ಆಗಾಗ ಐದಾರು ಹೆಣಗಳು ಸಿಗುತ್ತಲೇ ಇರುತ್ತವೆ' ಎಂದು ಹೇಳುತ್ತಾನೆ.

ನಾಯಕನಿಗೆ ಒಂದು ನಂಬಿಕೆ ಇರುತ್ತದೆ.

ಏನೆಂದರೆ... ಇಂದಲ್ಲ ನಾಳೆ ತಾನು ದೊಡ್ಡದೊಂದು ಕೇಸ್ ಸಾಲ್ವ್ ಮಾಡಿ ಫೇಮಸ್ ಆಗುತ್ತೇನೆ ಅಂತ. ಈಗ ಈ ಹೆಣಗಳ ಕೇಸ್ ಪರಿಹರಿಸಿ ದೊಡ್ಡ ಡಿಟೆಕ್ಟಿವ್‌ ಆಗಬೇಕೆಂದುಕೊಂಡು ಹೊರಡುತ್ತಾನೆ. ಆದರೆ ಅವನು ಹೆಣದ ಬಳಿ ತಲುಪುವಷ್ಟರಲ್ಲಿ ಪೊಲೀಸರೂ ತಲುಪಿದ್ದು, ಇವನನ್ನು ಪ್ರಾಥಮಿಕ ತನಿಖೆಯಿಂದ ಸಸ್ಪೆಕ್ಟ್ ಎಂದು ಅರೆಸ್ಟ್ ಮಾಡುತ್ತಾರೆ.

ನಾಯಕ ಸಾಯಿ ತಲೆಕೆಡಿಸಿಕೊಳ್ಳುವುದೇ ಇಲ್ಲ. ತಾನು ಅರೆಸ್ಟ್ ಆಗಿದ್ದರೂ ಖುಷಿಖುಷಿಯಾಗಿಯೇ ಇರುತ್ತಾನೆ. ಜೈಲಿನೊಳಗೆ ಇದ್ದವರಿಗೆಲ್ಲ ಬೇಲ್ ತೆಗೆದುಕೊಳ್ಳುವುದು ಹೇಗೆ ಅಂತ ಬಿಟ್ಟಿ ಉಪದೇಶ ಕೊಡುತ್ತಾ ಆರಾಮಾಗಿರುತ್ತಾನೆ. ಅಷ್ಟರಲ್ಲಿ ಜೈಲಿಗೆ ಹೊಸ ವ್ಯಕ್ತಿಯ ಆಗಮನವಾಗುತ್ತದೆ. ಆತನ ಹೆಸರು ಮಾರುತಿ ರಾವ್ ಎಂದೂ, ಆತನ ಮಗಳನ್ನು ಯಾರೋ ಕೊಂದಿದ್ದಾರೆಂದೂ, ಅವಳ ಕಾಲ್ ರೆಕಾರ್ಡ್ಸ್ ನಲ್ಲಿ ಮೂವರ ನಂಬರ್ ಇದ್ದುವೆಂದೂ, ಆದರೆ ಕಂಪ್ಲೇಂಟ್ ಕೊಡಲು ಹೋದರೆ ತನ್ನನ್ನೇ ಸುಳ್ಳು ಕೇಸಿನಲ್ಲಿ ಸಿಗಿಸಿ ಒಳಹಾಕಿದ್ದಾರೆಂದೂ ತಿಳಿಸುತ್ತಾನೆ ಆ ವ್ಯಕ್ತಿ.

‌ಮಾರನೇ ದಿನ ಏಜೆಂಟ್ ಸಾಯಿಗೆ ಜಾಮೀನು ಸಿಗುತ್ತದೆ. ಆಗ ಸಾಯಿ ಮಾರುತಿ ರಾವ್ ನಿಂದ ಆ ಮೂವರ ಫೋನ್ ನಂಬರ್ ಪಡೆದು ಅದನ್ನು ಟ್ರಾಕ್ ಮಾಡಿದಾಗ ಇಬ್ಬರ ಹೆಸರು ಮತ್ತು ವಿಳಾಸ ಗೊತ್ತಾಗುತ್ತದೆ. ಮತ್ತೊಬ್ಬರ ಗುರುತು ಗೊತ್ತಾಗುವುದಿಲ್ಲ. ಸಿಕ್ಕಷ್ಟೇ ಸಾಕು ಅಂತ ವಿಳಾಸ ಸಿಕ್ಕ ಇಬ್ಬರು ವ್ಯಕ್ತಿಗಳನ್ನು ಆತನೂ, ಆತನ ಅಸಿಸ್ಟೆಂಟ್ ಇಬ್ಬರೂ ದಿನ ಪೂರ್ತಿ ಫಾಲೋ ಮಾಡುತ್ತಾರೆ.

ಆದರೆ ಮಾರನೇ ದಿನವೇ ಆ ಇಬ್ಬರೂ ವ್ಯಕ್ತಿಗಳು ಸತ್ತು ಆ ಕೊಲೆಯ ಆಪಾದನೆ ಏಜೆಂಟ್ ಸಾಯಿ ಮೇಲೆ ಬರುತ್ತದೆ.

ಸಾಯಿಗೆ ತಲೆ ಕೆಟ್ಟು ಹೋಗುತ್ತದೆ.

ತಾನೇನು ತಾನಾಗಿಯೇ ಬಂದು ಈ ಕೇಸಿನಲ್ಲಿ ಬಂದು ಸಿಕ್ಕಿಕೊಂಡಿಲ್ಲ. ತಾನು ತನಿಖೆ ಮಾಡಲು ಹೋಗಿದ್ದು ಅನಾಥ ಹೆಣಗಳ ಬಗ್ಗೆ. ಆದರೆ ಸಿಕ್ಕಿಕೊಂಡಿದ್ದು ಈ ಎರಡು ಕೊಲೆಯ ಅಪರಾಧದಲ್ಲಿ. ಇವೆರಡಕ್ಕೂ ಏನು ಸಂಬಂಧ ಇರಬಹುದು? ನೊಂದ ಒಬ್ಬ ತಂದೆಗೆ ಮಗಳ ಸಾವಿನ ನ್ಯಾಯ ಕೊಡಿಸಲು ಹೋದದ್ದೇ ತಪ್ಪಾಯಿತಾ? ಸಾಕ್ಷಿಗಳನ್ನು ಸೃಷ್ಟಿಸಿ ತನ್ನನ್ನು ಈ ಕೇಸಿನಲ್ಲಿ ಹೊರಬರದ ಹಾಗೆ ಫಿಟ್ ಮಾಡಿದವರು ಯಾರಿರಬಹುದು ಮತ್ತು ಯಾಕಿರಬಹುದು ಅಂತ ಯೋಚಿಸುತ್ತಾನೆ.

ಸ್ನೇಹಿತ ಸಿರೀಶ್ ನೆರವಿನಿಂದ ಐದು ದಿನಗಳ ಬೇಲ್ ಪಡೆದು ಆಚೆ ಬರುತ್ತಾನೆ. ಈಗವನಿಗೆ ಆ ಯುವತಿಯ ಕೊಲೆಗಾರರನ್ನು ಕಂಡುಹಿಡಿಯುವುದಲ್ಲದೇ, ತನ್ನ ತಲೆಯ ಮೇಲಿರುವ ಕೊಲೆ ಕೇಸಿನಿಂದಲೂ ಬಚಾವಾಗ ಬೇಕಿರುತ್ತದೆ. ಐದೇ ದಿನದಲ್ಲಿ ಏಜೆಂಟ್ ಸಾಯಿ ಮ್ಯಾಜಿಕ್ ಮಾಡಿಬಿಡುತ್ತಾನೆ. ಆ ಮೂಲಕ ದೊಡ್ಡದೊಂದು ಕೇಸ್ ಅನ್ನು ಬಗೆಹರಿಸುತ್ತಾನೆ.

ಆ ಮ್ಯಾಜಿಕ್ ಏನು ಅಂದ್ರಾ?

ಅದನ್ನು ಸ್ವಂತ ನೋಡಿಯೇ ಅನುಭವಿಸಬೇಕು. ಏಜೆಂಟ್ ಸಾಯಿಯ ಚಾಕಚಕ್ಯತೆ ನಮ್ಮನ್ನು ದಂಗು ಬಡಿಸಿದರೆ, ಅವನು ಕಂಡುಹಿಡಿಯುವ ಕರಾಳ ಸತ್ಯಕ್ಕೆ ಮನಸ್ಸು ಮೂಕವಾಗುತ್ತದೆ.‌ ಕಣ್ಣು ತೇವವಾಗಿ ಹೃದಯ ಆರ್ದ್ರವಾಗುತ್ತದೆ. ಈ ಸತ್ಯ ತಿಳಿಯದಿದ್ದರೆ ಚೆನ್ನಾಗಿತ್ತು ಎನಿಸುತ್ತದೆ.

ಏನದು ಅಂತಹಾ ಭಯಾನಕ ಸತ್ಯ....?


*********
ಕೆ.ಎ.ಸೌಮ್ಯ
ಮೈಸೂರು

Popular posts from this blog

Paradha Movie Review (Telugu)

ಥಪ್ಪಡ್ (ಹಿಂದಿ)

ಎಡಗೈ ಅಪಘಾತಕ್ಕೆ ಕಾರಣ (ಕನ್ನಡ)