Ekkadiki Pothavu Chinnavada (2016)

 


ತೆಲುಗು ಸಿನೆಮಾ (ಜಾನರ್: ಹಾರರ್ ಕಾಮೆಡಿ)

ನಾಯಕನ ಮುಂದೆ ಅವಳು ನಿಂತಿದ್ದಾಳೆ..

ಅವಳ್ಯಾರು ಅಂತ ನಾಯಕನಿಗೆ ಗೊತ್ತಿಲ್ಲ. ಆದರೆ ಅವಳೊಳಗಿರುವ 'ಆತ್ಮ' ಅವನಿಗೆ ಪರಿಚಯವಿದೆ. ಅವಳ ಒಳಗಿರುವ ಆತ್ಮದ ಜೊತೆ ಅವನಿಗೆ ಪ್ರೀತಿ ಇದೆ. ಆದರೆ ಆ ದೇಹ ಅವನಿಗೆ ಪರಿಚಿತವಲ್ಲ. ಅವಳೋ ಅವನನ್ನು ಬಿಡಲಾಗದೇ ಸತ್ತ ಮೇಲೂ ಬೇರೊಂದು ದೇಹ ಹುಡುಕಿ, ಅದರೊಳಗೆ ಸೇರಿಕೊಂಡು ನಾಯಕನಿಗೋಸ್ಕರ ಬಂದು ನಿಂತಿದ್ದಾಳೆ.

ಈಗ ನಾಯಕ ಅವಳನ್ನ ಒಪ್ಪಬೇಕೋ ಬೇಡವೋ?

ಅವನ ಪ್ರೀತಿ ಆತ್ಮದ ಜೊತೆಗೋ ಅಥವಾ ದೇಹದ ಜೊತೆಗೋ?

ಅವನು ಅವಳ ನಡವಳಿಕೆ, ಗುಣವನ್ನು ಪ್ರೀತಿಸಿದ ಮೇಲೆ ಅದೇ ನಡವಳಿಕೆ, ಗುಣ ಹೊಂದಿರುವ, ಆದರೆ ಬೇರೆ ದೇಹವಿರುವ ಅವಳನ್ನು ಒಪ್ಪುವುದು ಸರಿಯಾಗುತ್ತೋ ಅಥವಾ ತಪ್ಪಾಗುತ್ತೋ?

ಸಿನೆಮಾ ನೋಡುವಾಗ ನಮ್ಮ ತಲೆಯೊಳಗೆ ಇಂಥಾ ಎಷ್ಟೋ ಪ್ರಶ್ನೆಗಳು ಹುಟ್ಟಿಕೊಳ್ಳುತ್ತದೆ. ಇದೊಂಥರಾ ವಿಕ್ರಮ್ ಬೇತಾಳ್ ಕಥೆ ಇದ್ದ ಹಾಗೆ.. ಉತ್ತರ ಗೊತ್ತಿದ್ದರೂ ಹೇಗೆಂದು ಹೇಳಲಾಗೋಲ್ಲ!!

ಸಿನೆಮಾದ ಒಂದು ಹಂತದಲ್ಲಿ ನಾಯಕಿ "ಒಬ್ಬರನ್ನ ಪ್ರೀತಿಸಬೇಕು ಅಂದ್ರೆ ಅವರಲ್ಲಿ ಯಾವ ಗುಣ ಇರಬೇಕಾಗತ್ತೆ?" ಅಂತ ನಾಯಕನನ್ನ ಕೇಳ್ತಾಳೆ.

ಅದ್ಕೆ ನಾಯಕ "character, Behavior and Attitude" ಅಂತ ಉತ್ತರ ಕೊಡ್ತಾನೆ.

ಆದರೆ ಈಗ ನಾಯಕನಿಗೇ ಫುಲ್ ಕನ್ಫ್ಯೂಷನ್!!

ಯಾಕಂದ್ರೆ ಅವನೇ ಹೇಳಿದ ಹಾಗೆ 'character, Behavior and Attitude' ಆತ್ಮಕ್ಕೆ ಸಂಬಂಧಿಸಿರೋದು ದೇಹಕ್ಕಲ್ಲ.

ಹಾಗಾದರೆ ದೇಹವನ್ನ ಪ್ರೀತಿಸಬೇಕೋ ಅಥವಾ ಆತ್ಮವನ್ನೋ?

ನಮಗೆ ಮೊದಲ ಪ್ರೀತಿ ಉಂಟಾಗುವುದೇ ನೋಟದಿಂದ. ನಂತರ ಮಾತು, ಸಲಿಗೆ, ಸ್ನೇಹ ಅಂತ ಅವರ ಜೊತೆ ಓಡಾಡಿ ಅವರನ್ನ ಪ್ರೀತಿಸಲು ಶುರು ಮಾಡುತ್ತೇವೆ. ಅವರ ನಡವಳಿಕೆ ನೇರವಾಗಿ ಅವರ ಆತ್ಮಕ್ಕೇ ಸಂಬಂಧಿಸಿದ್ದರೂ, ನಮ್ಮ‌ ಮನಸ್ಸು ಗುರುತಿಸುವುದು ಅವರ ಬಾಡಿ ಲ್ಯಾಂಗ್ವೇಜ್ನ. ಅವರು ಕೂರುವ, ನಿಲ್ಲುವ ಭಂಗಿ, ಅವರ ಡ್ರೆಸ್ಸಿಂಗ್ ಸೆನ್ಸ್, ಹೇರ್ ಸ್ಟೈಲ್ ಎಲ್ಲವೂ ನಮ್ಮನ್ನ ಇಂಪ್ರೆಸ್ ಮಾಡಿರುತ್ತದೆ.

ಹಾಗಾಗಿ ನಮ್ಮ ಮನಸ್ಸಿನಲ್ಲಿ ಪ್ರೇಮಿಯ ಹೆಸರು ಬಂದಾಗ ನೆನಪಾಗುವುದು ಅವರ ಚಿತ್ರವೇ ಹೊರತೂ, ಅವರ ಆತ್ಮವಲ್ಲ!!!

ಹೀಗಿರುವಾಗ ಆ ಪ್ರೇಮಿಯ ಆತ್ಮ ಮತ್ತೊಂದು ದೇಹದಲ್ಲಿ ಸೇರ್ಕೊಂಡು ಬಂದಾಗ ಅವಳನ್ನ ಪ್ರೀತಿಸಬೇಕೋ ಬೇಡವೋ..??

ಇರುವ ಮೂವರು ಮುದ್ದಾದ ಹೀರೋಯಿನ್ಗಳಲ್ಲಿ ಹೀರೋಗೆ ಸೂಟ್ ಆಗುವವರು ಯಾರು ಅಂತ ನಾವೂ ರಪರಪ ಅಂತ ತಲೆ ಕೆರ್ಕೋತೀವಿ..

ಇಡೀ ಸಿನೆಮಾದಲ್ಲಿ ಕಾಮೆಡಿ ಫ್ಲೋ ಇದೆ. ಹೆಸರಿಗೆ ದೆವ್ವದ ಸಿನೆಮಾವಾದರೂ ಒಂದಂಶ ಕೂಡ ಹೆದರಿಸೋಲ್ಲ. ಬದಲಿಗೆ ಡೈಲಾಗ್ಸ್ ಬಿಟ್ಟೂ ಬಿಡದೇ ನಗಿಸುತ್ತದೆ. ಸಿನೆಮಾ ನಾನು ವಿವರಿಸಿರುವಷ್ಟು ಕಠಿಣವಾಗಿಲ್ಲ. ಆದರೆ ಮೂರ್ನಾಲ್ಕು ಬಾರಿ ಸಕತ್ತಾಗಿ ಷಾಕ್ ಕೊಡುತ್ತದೆ!

ಸಿನೆಮಾ ಯೂ ಟ್ಯೂಬಿನಲ್ಲಿ ಸಿಗುತ್ತದೆ.

-
ಕೆ.ಎ.ಸೌಮ್ಯ
ಮೈಸೂರು




Popular posts from this blog

Paradha Movie Review (Telugu)

ಥಪ್ಪಡ್ (ಹಿಂದಿ)

ಎಡಗೈ ಅಪಘಾತಕ್ಕೆ ಕಾರಣ (ಕನ್ನಡ)