Interstellar (English Movie)
[Direction: Christopher Nolan]
ಮನೆಯಲ್ಲಿ ಒಂಟಿಯಾಗಿರುತ್ತೀರಿ. ಒಂದು ಸಣ್ಣ ಪುಸ್ತಕದ ಪುಟ ತೆರೆಯುವ ಶಬ್ದವೂ ರೋಡ್ ರೋಲರಿನಂತೆ ಕೇಳಿಸುವಷ್ಟು ನಿಶ್ಯಬ್ದ ಆವರಿಸಿರುತ್ತದೆ. ಆಗ ದಿಢೀರನೆ ಮೇಜಿನ ಮೇಲಿಂದ ಯಾವುದೋ ವಸ್ತು ಅಥವಾ ಪುಸ್ತಕದ ರ‌್ಯಾಕಿನಿಂದ ಒಂದು ಪುಸ್ತಕ ದಭಾಲನೆ ಬಿದ್ದರೆ ಹೇಗಾಗಬಹುದು??
ಆಗೋದೇನು?
ಹೃದಯ ಒಡೆದು ಹೋಗುವುದೊಂದು ಬಾಕಿ. ಕಣ್ಣಿಗೆ ಕಾಣದ ಯಾವುದೇ ಶಕ್ತಿಯನ್ನು ನಾವು ಭೂತ ಎಂದೇ ತಿಳಿಯುತ್ತೇವೆ. ಉದಾಹರಣೆಗೆ ಬಾಹ್ಯ ಒತ್ತಡ ಇಲ್ಲದೇ ಯಾವ ವಸ್ತುವೂ ಚಲಿಸೋಲ್ಲ ಎನ್ನುವುದು ಸೈನ್ಸ್. ಅದೇ ರೀತಿ ಯಾವ ಒತ್ತಡವೂ ಇಲ್ಲದೇ ಪುಸ್ತಕಗಳು ತಾನೇ ತಾನಾಗಿ ಬೀಳತೊಡಗಿದಾಗ ಇದು ಭೂತದ ಚೇಷ್ಟೆಯೇ ಎಂಬ ತೀರ್ಮಾನಕ್ಕೆ ಬರುತ್ತೇವೆ.
ನಾಯಕ ಕೂಪರ್‌ನ ಮುದ್ದು ಮಗಳಾದ ಮರ್ಫ್ ಸಹ ಇದನ್ನು ಮಾಡುತ್ತಿರುವುದು ಭೂತ ಅಂತಲೇ ತಿಳಿದಿರುತ್ತಾಳೆ. ಆದರೆ ಅವಳು ತನ್ನ ಕೊಠಡಿಯಲ್ಲಿ ಭೂತವಿದೆ, ಅದು ಪುಸ್ತಕ ಬೀಳಿಸುತ್ತಿದೆ ಅಂತ ಹೇಳಿದಾಗ ಯಾರೂ ಸಹ ನಂಬದೇ ಆಕೆಯ ಮಾತುಗಳನ್ನು ನಿರ್ಲಕ್ಷ್ಯ ಮಾಡುತ್ತಾರೆ.
ಆದರೆ ಮುರ್ಫ್ ಹೆದರದೇ ಇದನ್ನು ಪ್ರತಿನಿತ್ಯವೂ ಗಮನಿಸುತ್ತಿರುತ್ತಾಳೆ. ಅದರ ಪ್ರಕಾರ ರ‌್ಯಾಕಿನ ಪುಸ್ತಕಗಳು ಪ್ರತಿದಿನ ಒಂದು ವ್ಯವಸ್ಥಿತ ರೂಪದಲ್ಲಿ ಬೀಳುತ್ತಿರುತ್ತದೆ. ಅಂದರೆ ಪುಸ್ತಕಗಳು ಯಾವುದೋ ಸಂಕೇತ ಕೊಡುತ್ತಿರುವ ಹಾಗೆ. ಇದರರ್ಥ ಭೂತ ಮಾತನಾಡಲು ಪ್ರಯತ್ನ ಪಡುತ್ತಿದೆ. ಏನೋ ಹೇಳಲು ಯತ್ನಿಸುತ್ತದೆ. ಅದೇನಿರಬಹುದು? ಭೂತದ ಭಾಷೆ ಯಾವುದು?
ಕೊನೆಗೆ ಅದು morse code ನಲ್ಲಿ ಸಂವಹನ ನಡೆಸುತ್ತಿದೆ ಅಂತ ಮುರ್ಫಿಗೆ ಗೊತ್ತಾಗುತ್ತದೆ. ಎಲ್ಲಿಯ ಭೂತ...? ಎಲ್ಲಿಯ ಮಾರ್ಸ್ ಕೋಡ್...? ಅಂತ ನಮಗೆ ಕನ್ಫ್ಯೂಸ್ ಆಗುತ್ತದೆ. ಬಹುಶಃ ಇದು ಹೈಲಿ ಎಜ್ಯುಕೇಟೆಡ್ ಭೂತ ಇರಬೇಕು ಇದು ಅಂದ್ಕೊಳ್ತೀವಿ ನಾವು (Morse code ಎಂದರೆ dots and dashes). ಕೂಡಲೇ ಮುರ್ಫ್ ಆ ಕೋಡ್ ಅನ್ನು ಡಿಕೋಡ್ ಮಾಡಲು ಶುರು ಮಾಡುತ್ತಾಳೆ.
ಇದಾಗಿ ಸ್ವಲ್ಪ ದಿನಕ್ಕೆ ಒಮ್ಮೆ ಕೂಪರ್ ಇಬ್ಬರು ಮಕ್ಕಳ ಜೊತೆ ಬೇಸ್ ಬಾಲ್ ನೋಡಲು ಹೋಗಿದ್ದಾಗ ಧೂಳಿನ ತ್ಸುನಾಮಿ ಏರ್ಪಟ್ಟು ಎಲ್ಲರೂ ಪಂದ್ಯವನ್ನು ಬಿಟ್ಟು ಮನೆಗೆ ಓಡಿ ಬಂದುಬಿಡುತ್ತಾರೆ. ಮನೆಯ ಎಲ್ಲಾ ಕಿಟಕಿ-ಬಾಗಿಲು ಹಾಕುತ್ತಿದ್ದವರಿಗೆ ಮುರ್ಫಳ ಪುಸ್ತಕಗಳಿದ್ದ ಕೋಣೆಯ ಕಿಟಕಿ ಹಾಕದೇ ಇದ್ದದ್ದು ನೆನಪಾಗಿ ಅಲ್ಲಿಗೆ ಓಡುತ್ತಾರೆ. ಆ ತೆರೆದಿದ್ದ ಕಿಟಕಿಯ ಮೂಲಕ ಧೂಳು ಆಗಲೇ ಒಳನುಗ್ಗಿರುತ್ತದೆ. ಆದರೆ ನೆಲದ ಮೇಲೆ ಮುಚ್ಚಿಕೊಂಡಿದ್ದ ಆ ಧೂಳಿನಲ್ಲಿ ಒಂದು ಚಿತ್ತಾರ ಅಡಗಿರುತ್ತದೆ. ಕೂಪರನಿಗೆ ಅದು ಬೈನರಿ ಭಾಷೆಯಲ್ಲಿ ಏನನ್ನೋ ಹೇಳಲಾಗಿದೆ ಅಂತ ಗೊತ್ತಾಗುತ್ತದೆ. ಅಂದರೆ ಈ ಕೋಣೆಯಿಂದ ಯಾರೋ ತಮಗೆ ಏನೋ ಸಂದೇಶ ಕೊಡಲು ಪ್ರಯತ್ನಿಸುತ್ತಿದ್ದಾರೆ ಅಂತ ಅವನಿಗೂ ನಂಬಿಕೆ ಬರುತ್ತದೆ. ಆ ಸಂದೇಶವನ್ನು ಗುರುತ್ವದ ಮೂಲಕ ಈ ಕೋಣೆಗೆ ಕಳಿಸಲಾಗಿರುತ್ತದೆ.
ಗುರುತ್ವದ ಮೂಲಕ... ಹಾಗೆಂದರೆ ಏನೆಂದು ಅರ್ಥವಾಯ್ತಾ?
ಉಹುಂ ಆಗೋಲ್ಲ. ಏಕೆಂದರೆ ನಾವು ಈಗ ಇರುವುದು ಮೂರನೇ ಆಯಾಮದಲ್ಲಿ. ಇದೇ ರೀತಿ ನಾಲ್ಕನೇ, ಐದನೇ, ಆರನೇ ಆಯಾಮಗಳೂ ಸಹ ಇವೆ. ಒಂದೊಂದು ಆಯಾಮಗಳಲ್ಲಿಯೂ ಒಂದೊಂದು ಹೊಸ ವಿಷಯ ಸೇರುತ್ತದೆ. ಆದರೆ ಎಲ್ಲಾ ಆಯಾಮಗಳಲ್ಲಿಯೂ ಕಾಮನ್ ಆಗಿ ಇರುವುದು ಎಂದರೆ "ಗುರುತ್ವ". ಹಾಗಾಗಿ ಯಾರೋ ಬೇರೆ ಆಯಾಮದವರು ಈ ಆಯಾಮದವರಿಗೆ ಗುರುತ್ವದ ಮೂಲಕ ಏನೋ ಕಳಿಸುತ್ತಿದ್ದಾರೆ ಅಂತ ನಮಗೆ ಗೊತ್ತಾಗುತ್ತದೆ.
ಕೂಪರ್ ಅದನ್ನು ಡಿಕೋಡ್ ಮಾಡುತ್ತಾನೆ. ಅದು ಅಕ್ಷಾಂಶ ಮತ್ತು ರೇಖಾಂಶವಾಗಿರುತ್ತದೆ. ಅದನ್ನು ಹುಡುಕಿಕೊಂಡು ಹೊರಟ ತಂದೆ-ಮಗಳಿಗೆ ನಾಸಾದ ಸೀಕ್ರೆಟ್ ಪ್ರಾಜೆಕ್ಟ್ ನಡೆಯುತ್ತಿದ್ದ ಸ್ಥಳ ಸಿಗುತ್ತದೆ. ಕೂಪರ್ ಹಿಂದೊಮ್ಮೆ ನಾಸಾದ ಪೈಲಟ್ ಮತ್ತು ಇಂಜನಿಯರ್ ಆಗಿದ್ದವನೇ. ಆದರೀಗ ಎಲ್ಲ ಬಿಟ್ಟು ತನ್ನ ಪಾಡಿಗೆ ವ್ಯವಸಾಯ ಮಾಡಿಕೊಂಡಿರುತ್ತಾನೆ. ಆದರೆ ಅರಿಯದ ಯಾವುದೋ ಶಕ್ತಿ ಅವನನ್ನು ಅಲ್ಲಿಗೇ ಪುನಃ ಕರೆಸಿಕೊಂಡಿರುತ್ತದೆ. ಆ ಅದೃಶ್ಯ ಶಕ್ತಿ ಯಾವುದಿರಬಹುದು? ಅದು ಕೂಪರನಿಂದ ಏನು ಮಾಡಿಸಿಕೊಳ್ಳಲು ಬಯಸಿರಬಹುದು? ಭೂಮಿಯ ಮೇಲಿನ ಜನರನ್ನು ಮುಂದೆ ಎದುರಾಗಲಿರುವ ಆಪತ್ತಿನಿಂದ ಕಾಪಾಡಲು ಕೂಪರನೇ ಸೂಕ್ತ ವ್ಯಕ್ತಿ ಅಂತ ಆ ಅದೃಶ್ಯ ಶಕ್ತಿಗಳು ತಿಳಿದಿರಬಹುದೇ?
ಅರೆ.....!!! ಭೂಮಿಗೇನಾಯ್ತು?? ಯಾವ ವಿಪತ್ತು?? ಅಂತ ಕಂಗಾಲಾದಿರಾ?
ಇರಿ. ಈಗ ಭೂಮಿಯ ವಾತಾವರಣವನ್ನು ಸ್ವಲ್ಪ ಗಮನಿಸೋಣ. ಇದು ಈಗ ನಾವಿರುವ ಕಾಲಮಾನದಿಂದ ಒಂದೈವತ್ತು ವರ್ಷಗಳ ನಂತರ ನಡೆಯುವ ಕಥೆ. ಅಂದಿಗೆ ಭೂಮಿಯ ಮೇಲಿನ ಪರಿಸ್ಥಿತಿ ಬಹಳ ದಾರುಣ ಮತ್ತು ಕಲುಷಿತವಾಗಿತ್ತು. ಆಗಾಗ ಪರ್ವತದಷ್ಟು ಎತ್ತರದ ಧೂಳಿನ ಸಮುದ್ರ ಉಕ್ಕಿ ಬಂದು ಇಡೀ ಊರನ್ನು ಮುಚ್ಚಿ ಹಾಕುತ್ತಿತ್ತು. ಬೆಳೆದಿರುವ ಬೆಳೆಯನ್ನೆಲ್ಲಾ ನಾಶ ಮಾಡುತ್ತಿತ್ತು. ಇದರ ಧಾಳಿ ಎಷ್ಟಿತ್ತೆಂದರೆ ಜನರು ಪಾತ್ರೆ-ಲೋಟಗಳನ್ನು ಮಗುಚಿ ಇಡುತ್ತಿದ್ದರು. ಉಪಯೋಗಿಸಲು ತೆಗೆದಾಗ ಆ ಜಾಗ ಬಿಟ್ಟು ಬೇರೆಲ್ಲಾ ಧೂಳಿನಿಂದಾವೃತವಾಗಿರುತ್ತಿತ್ತು. ವಾತಾವರಣ ಇನ್ನು ಬದುಕಲು ಸಾಧ್ಯವೇ ಇಲ್ಲ ಎನ್ನುವಷ್ಟು ಕುಲಗೆಟ್ಟು ಹೋಗಿತ್ತು. ಇನ್ನು ಕೆಲವೇ ವರ್ಷಗಳಲ್ಲಿ ಭೂಮಿಯ ಗಾಳಿಯಲ್ಲಿ 80% ನೈಟ್ರೋಜನ್ ತುಂಬಿಕೊಂಡು ಉಸಿರಾಡಲೂ ಕಷ್ಟವಾಗುವ ವಾತಾವರಣ ನಿರ್ಮಾಣವಾಗುವ ಅಪಾಯ ಇತ್ತು.
ಅದಕ್ಕಾಗಿ ನಾಸಾದ ಪ್ರೊಫೆಸರ್ ಮಿ. ಬ್ರಾಂಡ್ ಒಂದು ಯೋಜನೆ ತಯಾರಿಸಿರುತ್ತಾರೆ. ಆದರೆ ಅದನ್ನು ಕಾರ್ಯಗತಗೊಳಿಸುವವರು ಬೇಕಾಗಿರುತ್ತಾರೆ. ಈಗ ಅದನ್ನು ತಾನೇ ತಾನಾಗಿ ಬಂದ ಕೂಪರ್ ಬಳಿ ಹಂಚಿಕೊಳ್ಳುತ್ತಾರೆ. ಏನೆಂದರೆ ಈಗಾಗಲೇ ಮುಕ್ಕಾಲು ಭಾಗ ನಾಶವಾಗಿರುವ ಭೂಮಿಯನ್ನಂತೂ ಕಾಪಾಡಲು ಸಾಧ್ಯವಿಲ್ಲ. ಆದರೆ ಭೂಮಿಯ ಮೇಲಿನ ಜನರನ್ನಾದರೂ ಕಾಪಾಡಲೇಬೇಕು ಎಂಬುದು ಅವರಾಸೆಯಾಗಿರುತ್ತದೆ. ಅದಕ್ಕಾಗಿ ಸ್ವತಃ ಕಷ್ಟಪಟ್ಟು ಎರಡು ಯೋಜನೆ ತಯಾರಿಸಿರುತ್ತಾರೆ.
ಅವರ ಯೋಜನೆ ಕೆಳಕಂಡಂತಿದೆ.
PLAN "A" : ಭೂಮಿಯ ಜನರನ್ನು ವಾಸಿಸಲು ಯೋಗ್ಯವಿರುವ ಮತ್ತೊಂದು ಗ್ರಹಕ್ಕೆ ಶಿಫ್ಟ್ ಮಾಡುವುದು.
PLAN "B" : ಗಗನಯಾತ್ರಿಗಳನ್ನು ಕೆಲವು ಭ್ರೂಣಗಳೊಂದಿಗೆ ಸ್ಪೇಸ್ ಶಿಪ್ಪಿನಲ್ಲಿ ವಾಸಯೋಗ್ಯ ಗ್ರಹಗಳನ್ನು ಹುಡುಕಲು ಕಳಿಸುವುದು. ಮತ್ತು ವಾತಾವರಣ ಇರಬಹುದಾದ ವಾಸಯೋಗ್ಯ ಗ್ರಹದಲ್ಲಿ ಗಗನಯಾತ್ರಿಗಳು ತಮ್ಮೊಡನೆ ಕೊಂಡೊಯ್ಯುವ ಮಾನವ ಭ್ರೂಣಗಳನ್ನೇ ಬೆಳೆಸಿ ಹೊಸ ಮಾನವ ಪೀಳಿಗೆಯನ್ನು ಸೃಷ್ಟಿಸುವುದು.
ಆದರೆ ಇವೆರೆಡೂ ಕಾರ್ಯಕ್ಕಾಗಿ ನಾವು ನಮ್ಮ ಸೌರವ್ಯೂಹದಿಂದಾಚೆ ಹೋಗುವುದು ಅನಿವಾರ್ಯವಾಗಿರುತ್ತದೆ. ಪಕ್ಕದೂರಿಗೆ ಹೋಗಲು ನೂರೆಂಟು ಸಲ ಯೋಚಿಸುವ ನಾವು ಪಕ್ಕದ ಗೆಲಾಕ್ಸಿಗೆ ಅಂದುಕೊಂಡ ತಕ್ಷಣ ಹೋಗಲು ಸಾಧ್ಯವೇ? ಹೋಗಲಿ... ಅಲ್ಲಿಗೆ ಹೋಗಿ ತಲುಪುವವರೆಗೂ ನಮ್ಮ ಆಯುಸ್ಸು ಉಳಿದಿರುತ್ತದೆಯೇ?
ಆದರೆ ನಮ್ಮ ಬದುಕಿನಲ್ಲಿ ಕೆಲವೊಮ್ಮೆ ಪವಾಡಗಳು ನಡೆಯುತ್ತವೆ....!!!
ಸೌರವ್ಯೂಹದ ಶನಿಗ್ರಹದ ಬಳಿಯ ಕಪ್ಪುರಂಧ್ರದ ಪಕ್ಕದಲ್ಲಿ ಒಂದು "ವರ್ಮ್ ಹೋಲ್" ಸೃಷ್ಟಿಯಾಗಿರುವುದು ಇವರಿಗೆ ಗೊತ್ತಾಗುತ್ತದೆ. 'ವರ್ಮ್ ಹೋಲ್' ಎಂದರೆ ಅತಿ ಕಡಿಮೆ ಸಮಯದಲ್ಲಿ ಮತ್ತೊಂದು ಗೆಲಾಕ್ಸಿಗೆ ಪಯಣಿಸಲು ಇರುವ ಅಡ್ಡದಾರಿಯ ಹಾಗೆ. ಇದನ್ನು ಪವಾಡ ಎಂದು ಯಾಕೆ ಹೇಳಿದೆ ಎಂದರೆ, ಆ ವರ್ಮ್ ಹೋಲ್ ಅನ್ನು ಸೃಷ್ಟಿಸುವಷ್ಟು ತಂತ್ರಜ್ಞಾನದಲ್ಲಿ ನಾವಿನ್ನೂ ಮುಂದುವರೆದಿರುವುದಿಲ್ಲ. ಹಾಗಾಗಿ ಈಗಾಗಲೇ ಸೃಷ್ಟಿಯಾಗಿರುವ ವರ್ಮ್ ಹೋಲಿನ ಮೂಲಕ ನಾವು ಬೇರೆ ಗೆಲಾಕ್ಸಿಗಳಿಗೆ ಅತಿ ಕಡಿಮೆ ಸಮಯದಲ್ಲಿ ಪಯಣಿಸಿ, ಅಲ್ಲಿ ಮನುಷ್ಯ ವಾಸ ಮಾಡಬಹುದಾದ ಪರಿಸರ ಇರುವ ಗ್ರಹಗಳನ್ನು ಕಂಡುಹಿಡಿಯಬಹುದಾಗಿರುತ್ತದೆ.
ಅದಕ್ಕಾಗಿ ಈಗಾಗಲೇ ಪ್ರೊಫೆಸರ್ ಬ್ರಾಂಡ್ 12 ಜನರನ್ನು 12 ದಿಕ್ಕಿನಲ್ಲಿ ಈ ಕಾರ್ಯಕ್ಕಾಗಿ ಕಳಿಸಿರುತ್ತಾರೆ. ಅವರಲ್ಲಿ ಮೂವರು ಮಾತ್ರ ಇದುವರೆಗೂ ಧನಾತ್ಮಕವಾಗಿ ಪ್ರತಿಕ್ರಿಯಿಸಿರುತ್ತಾರೆ. ಹಾಗಾಗಿ ಈ ಮೂರು ಗ್ರಹಗಳಲ್ಲಿ ಮಾನವ ವಾಸ ಮಾಡಬಹುದಾದ ವಾತಾವರಣ ಇರಬಹುದು ಎಂಬುದು ಪ್ರೊಫೆಸರ್ ಅವರ ದೂರದ ಆಸೆಯಾಗಿರುತ್ತದೆ. ಈಗ ಕೂಪರನ ನಾಯಕತ್ವದಲ್ಲಿ ಮತ್ತೊಂದು ತಂಡ 'ವರ್ಮ್ ಹೋಲಿ'ನ ಮೂಲಕ ಹೋಗಿ, ಆ ಮೂರು ಗ್ರಹಗಳನ್ನು ಪರಿಶೀಲಿಸಿದರೆ, ಆದಷ್ಟು ಬೇಗ ಭೂಮಿಯ ಜನರನ್ನು ಆ ಗ್ರಹಕ್ಕೆ ಶಿಫ್ಟ್ ಮಾಡಬಹುದಾಗಿರುತ್ತದೆ. ಕೂಪರ್ ಈ ಕೆಲಸಕ್ಕೆ ಹೊಸಬನೇನಲ್ಲವಾದ್ದರಿಂದ ಒಪ್ಪುತ್ತಾನೆ.
ಆದರೆ ಅವನನ್ನು ಅತಿಯಾಗಿ ಹಚ್ಚಿಕೊಂಡಿದ್ದ ಆತನ ಮಗಳು ಮುರ್ಫಿಗೆ ಇದು ಇಷ್ಟವಾಗುವುದಿಲ್ಲ. ಹೋಗಬೇಡವೆಂದು ಬಹಳಷ್ಟು ಹಠ ಮಾಡುತ್ತಾಳೆ. ಅಷ್ಟರಲ್ಲಿ ಅವಳು ತನ್ನ ಕೊಠಡಿಯಲ್ಲಿ ಬೀಳುತ್ತಿದ್ದ ಪುಸ್ತಕಗಳಿಂದ ದೊರೆತಿದ್ದ ಮಾರ್ಸ್ ಕೋಡುಗಳನ್ನು ಡಿಕೋಡ್ ಸಹ ಮಾಡಿರುತ್ತಾಳೆ. ಅದರಲ್ಲಿಯೂ ಅದೇ ಸಂಕೇತ ಕಂಡಿರುತ್ತದೆ.
"ನಿಲ್ಲು..."
ಅಪ್ಪ ಹೋಗದಿರಲಿ ಅಂತ ಮುರ್ಫಿ ಸುಮ್ಮನೆ ಹಾಗೆ ಹೇಳುತ್ತಿರಬೇಕು ಅಂತ ನಾವಂದುಕೊಳ್ಳುತ್ತೇವೆ. ಮಗಳ ಒತ್ತಡಕ್ಕೆ ಮಣಿಯದ ಕೂಪರ್ ಹೊರಟೇ ಬಿಡುತ್ತಾನೆ. ಹೊರಡುವ ಮುಂಚೆ ಮಗಳಿಗೆ ಒಂದು ವಾಚ್ ಕೊಡುತ್ತಾನೆ. ಅದೇ ರೀತಿಯ ವಾಚ್ ಅವನ ಬಳಿಯೂ ಇರುತ್ತದೆ. ಅದರ ವಿಶೇಷತೆಯೇನೆಂದರೆ, ಬಾಹ್ಯಾಕಾಶದಲ್ಲಿ ಕೂಪರನಿಗೆ ವಯಸ್ಸಾಗುವುದಿಲ್ಲ. ಆದರೆ ಗುರುತ್ವದ ಕಾರಣ ಭೂಮಿಯ ಮೇಲಿರುವ ಮುರ್ಫಿಗೆ ವಯಸ್ಸಾಗುತ್ತಿರುತ್ತದೆ. ಹಾಗಾಗಿ ಕೂಪರ್ ತನ್ನ ಪ್ರಾಜೆಕ್ಟ್ ಮುಗಿಸಿ ವಾಪಸ್ ಭೂಮಿಗೆ ಬಂದಾಗ ಅವನೂ ಮತ್ತು ಮುರ್ಫಿ ಇಬ್ಬರೂ ಒಂದೇ ವಯಸ್ಸಿನವಾರಾಗಿರುತ್ತಾರೆ ಎಂದು ಕೂಪರ್ ಮಗಳಿಗೆ ಹೇಳಿ ಹೊರಡುತ್ತಾನೆ.
ಈ ಬಾಹ್ಯಾಕಾಶ ಪಯಣದಲ್ಲಿ ನಾಲ್ವರು ಯಾನಿಗಳು ಮತ್ತು ಎರಡು ರೋಬಾಟ್ ಇರುತ್ತವೆ.
1. ಕೂಪರ್
2. ಎಮಿಲಿಯಾ ಬ್ರಾಂಡ್
3. ಡೊಯಿಲಿ
4. ರೊಮಿಲಿ
5. ರೋಬೋ ಟಾರ್ಸ್ ಮತ್ತು
6. ರೋಬೋ ಕೇಸ್
ಈಗ ದೂರದ ಮೂರು ಗ್ರಹಗಳಿಂದ ಬರುತ್ತಿರುವ ಪ್ರತಿಕ್ರಿಯೆಯನ್ನು ಆಧರಿಸಿ ಇವರು ಒಂದೊಂದೇ ಗ್ರಹವನ್ನು ಭೇಟಿ ಮಾಡಲು ಹೊರಡುತ್ತಾರೆ.
1. Miller's Planet : ನಾಲ್ವರೂ ಮೊದಲು ಈ ಪ್ಲಾನೆಟ್ಟಿಗೆ ಹೋಗುತ್ತಾರೆ. ಆಗ ರೊಮಿಲಿ ಮಾತೃನೌಕೆಯಲ್ಲಿಯೇ ಉಳಿದುಕೊಂಡು ಉಳಿದ ಮೂವರು ಈ ಗ್ರಹದಲ್ಲಿ ಇಳಿಯುತ್ತಾರೆ. ಈ ಗ್ರಹ ಪೂರ್ತಿ ನೀರಿನಿಂದ ತುಂಬಿಕೊಂಡು ವಾಸಿಸಲು ಅಯೋಗ್ಯವಾಗಿರುತ್ತದೆ. ಅದನ್ನು ಗಮನಿಸಿ ಮೂವರೂ ಮಾತೃನೌಕೆಗೆ ಹೊರಡುವಷ್ಟರಲ್ಲಿ ದೊಡ್ಡದೊಂದು ಅಲೆ ಬಂದು ಇವರ ಸ್ಪೇಸ್ ಕ್ರಾಫ್ಟಿಗೆ ಹೊಡೆಯುತ್ತದೆ. ಆ ಹೊಡೆತದಲ್ಲಿ ಡೊಯಿಲಿ ಸಾಯುತ್ತಾನೆ. ನೀರು ತುಂಬಿಕೊಂಡ ಇವರ ಸ್ಪೇಸ್ ಕ್ರಾಫ್ಟ್ ಮೂರು ಗಂಟೆಗಳ ನಂತರ ಹೊರಡುತ್ತದೆ. ಮರಳಿ ಮಾತೃನೌಕೆ ಸೇರಿದವರಿಗೆ ಆಘಾತ ಎದುರಾಗುತ್ತದೆ.
ಏನೆಂದರೆ ಪ್ಲಾನೆಟ್ ಮಿಲ್ಲರಿನಲ್ಲಿ ಒಂದು ಗಂಟೆ ಎಂದರೆ ಭೂಮಿಯ ಏಳು ವರ್ಷಗಳಿದ್ದಂತೆ. ಇವರು ಮೂರು ಗಂಟೆ ಮಿಲ್ಲರಿನಲ್ಲಿ ಕಳೆದುದರಿಂದ ಭೂಮಿ ಮೇಲೆ ಇಪ್ಪತ್ತೊಂದು ವರ್ಷ ದಾಟಿ ಹೋಗಿರುತ್ತದೆ. ಅಲ್ಲದೇ ಇವರಿಗಾಗಿ ಕಾಯುತ್ತಿದ್ದ ರೊಮಿಲಿಯ ಕೂದಲು ಬೆಳ್ಳಗಾಗಿ ಸ್ವಲ್ಪ ವಯಸ್ಸಾದಂತೆ ಕಾಣುತ್ತಾನೆ. ಕೂಪರನಿಗೆ ಮನೆಯವರ ನೆನಪಾಗುತ್ತದೆ. ಕೂಡಲೇ ಓಡಿ ಹೋಗಿ ಅವರು ಕಳಿಸಿರುವ ವಿಡಿಯೋ ನೋಡುತ್ತಾನೆ. ಈಗಾಗಲೇ ಇಪ್ಪತ್ತೊಂದು ವರ್ಷ ಕಳೆದು ಹೋಗಿರುತ್ತದೆಯಾದ್ದರಿಂದ ಎಲ್ಲರೂ ದೊಡ್ಡವರಾಗಿ ಬಿಟ್ಟಿರುತ್ತಾರೆ. ಆ ವಿಡಿಯೋದಲ್ಲಿ ತನ್ನ ಮಾವ ಸ್ವರ್ಗಸ್ಥರಾಗಿರುವುದು, ಮಗನ ಮದುವೆಯೂ ಆಗಿ ಮಗುವಾಗಿರುವುದು, ಮಗಳು ಮುರ್ಫಿ ನಾಸಾದಲ್ಲಿಯೇ ಸೈಂಟಿಸ್ಟ್ ಆಗಿರುವುದೂ ತಿಳಿಯುತ್ತದೆ. ಅವರೆಲ್ಲರ ಖುಷಿಯ ಕ್ಷಣಗಳನ್ನು ಕಳೆದುಕೊಂಡೆ ಎಂಬ ಪಶ್ಚಾತ್ತಾಪದಲ್ಲಿ ಕೂಪರ್ ಪಾಪಪ್ರಜ್ಞೆಯಿಂದ ನರಳಿ ಕಣ್ಣೀರು ಹಾಕುತ್ತಾನೆ. ಆದರೇನು.....? ಆಗುವುದು ಆಗಿ ಹೋಗಿದೆ. ಈಗ ಕಳೆದುಕೊಂಡ ಕ್ಷಣಗಳನ್ನು ವಾಪಸ್ ತರಲು ಬರುವುದಿಲ್ಲವಲ್ಲ ಎಂದು ಸಮಾಧಾನ ಮಾಡಿಕೊಂಡು ಮುಂದಿನ ಗ್ರಹಕ್ಕೆ ಹೊರಡುತ್ತಾರೆ.
2. Mann's planet : ಈ ಗ್ರಹಕ್ಕೆ ಹೋದಾಗ ತನ್ನ ಸ್ಪೇಸ್ ಕ್ರಾಫ್ಟ್ ಒಳಗೇ ಆಳದ ನಿದ್ರೆಯೊಳಗೆ ಜಾರಿ ಹೈಬರ್ನೇಷನ್ (ಈ ಕ್ರಿಯೆಯಿಂದ ದೇಹಕ್ಕೆ ವಯಸ್ಸಾಗುವುದಿಲ್ಲ) ಆಗಿದ್ದ 'ಮ್ಯಾನ್' ಅನ್ನು ಕೂಪರನ ಟೀಮ್ ಎಚ್ಚರಿಸುತ್ತದೆ. ಮ್ಯಾನ್ ಇದು ಮನುಷ್ಯರು ವಾಸಿಸಲು ಅತ್ಯುತ್ತಮವಾದ ಗ್ರಹ ಎಂದು ಹೇಳುತ್ತಾನೆ. ಹಾಗಾದರೆ ಭೂಮಿಯ ಮನುಷ್ಯರನ್ನು ಇಲ್ಲಿಗೆ ಸಾಗಿಸಬಹುದು ಎಂದು ಎಲ್ಲರೂ ನಿರಾಳರಾಗುತ್ತಾರೆ. ನಾಯಕ ಕೂಪರನಿಗೋ ಆಗಲೇ ಭೂಮಿ ಸೆಳೆಯುತ್ತಿರುತ್ತದೆ. ಈಗಾಗಲೇ ಅವನು ತನ್ನ ಜೀವನದಲ್ಲಿ ಬಹಳಷ್ಟು ಖುಷಿಯ ಕ್ಷಣಗಳನ್ನು ಕಳೆದುಕೊಂಡಿರುತ್ತಾನೆ. ಹಾಗಾಗಿ ಮುಂದಿನ ಅನುಭವಗಳನ್ನು ತನ್ನ ಮಕ್ಕಳೊಡನೆಯೇ ಕಳೆಯಬೇಕು ಎಂಬ ಬಯಕೆ ಅವನನ್ನು ತೀವ್ರತರವಾಗಿ ಕಾಡಲು ತೊಡಗುತ್ತದೆ. ಹಾಗಾಗಿ ಅತ್ಯುತ್ಸಾಹದಿಂದ ಈ ಗ್ರಹವನ್ನು ವಾಸಿಸಲು ಯೋಗ್ಯವೇ ಎಂದು ಪರಿಶೀಲಿಸಲು ಮ್ಯಾನ್ ಜೊತೆ ಸರ್ವೆಗೆ ಹೊರಡುತ್ತಾನೆ.
ಅದೇ ಸಮಯದಲ್ಲಿ ಭೂಮಿಯ ಮೇಲೆ ಪ್ರೊಫೆಸರ್ ಬ್ರಾಂಡ್ ತಮ್ಮ ಕೊನೆಯ ಉಸಿರನ್ನು ಎಳೆಯಲು ಸಿದ್ಧರಾಗಿರುತ್ತಾರೆ. ಸಾಯುವ ಮುಂಚೆ ಮುರ್ಫಿಯ ಬಳಿ ಪ್ಲಾನ್ 'ಎ' ಒಂದು ಫೇಲ್ಯೂರ್ ಪ್ರಾಜೆಕ್ಟ್ ಆಗಿತ್ತು, ಏಕೆಂದರೆ ಅದನ್ನು ಕಾರ್ಯಗತಗೊಳಿಸಲು ಬೇಕಾದ ಗ್ರಾವಿಟಿ ಈಕ್ವೇಷನ್ ತಮಗೆ ದೊರೆತಿಲ್ಲ ಎಂದು ಹೇಳಿ ಪ್ರಾಣ ಬಿಡುತ್ತಾರೆ. ಪ್ಲಾನ್ 'ಎ' ಫೇಲ್ಯೂರ್ ಆಗುವುದು ಎಂದರೆ??? ತನ್ನ ತಂದೆ ಮತ್ತೆಂದೂ ಬರಲಾರರು ಎಂದು ಮುರ್ಫಿಗೆ ಅರಿವಾಗುತ್ತದೆ. ತಂದೆಯ ಮೇಲಿನ ಆಕೆಯ ಕೋಪ ಮತ್ತಷ್ಟು ಹೆಚ್ಚುತ್ತದೆ.
ಇತ್ತ ಮ್ಯಾನ್ ಮತ್ತು ಕೂಪರ್ ಗ್ರಹವನ್ನು ಸರ್ವೇ ಮಾಡುತ್ತಿರುವಾಗ ಅದು ವಾಸಿಸಲು ಯೋಗ್ಯವಲ್ಲ, ಮ್ಯಾನ್ ತಮಗೆ ಸುಳ್ಳು ವರದಿ ಕಳಿಸುತ್ತಿದ್ದ ಎಂಬ ಅಂಶ ಕೂಪರನಿಗೆ ಗೊತ್ತಾಗುತ್ತದೆ. ಆಗ ಇದ್ದಕ್ಕಿದ್ದಂತೆ ಮ್ಯಾನ್ ಕೂಪರನ ಮೇಲೆ ಮಾರಣಾಂತಿಕ ದಾಳಿ ನಡೆಸುತ್ತಾನೆ. ಪರಿಸ್ಥಿತಿಯ ಒತ್ತಡಕ್ಕೆ ಸಿಲುಕಿ, ಯಾರಾದರೂ ಬಂದು ತನ್ನನ್ನು ಕಾಪಾಡುತ್ತಾರೆ ಎನ್ನುವ ಭರವಸೆಯಲ್ಲಿ ಮ್ಯಾನ್ ಇದು ವಾಸಯೋಗ್ಯ ಎಂಬ ಸುಳ್ಳು ರಿಪೋರ್ಟ್ ಕಳಿಸಿರುತ್ತಾನೆ. ಇದು ವಾಸಯೋಗ್ಯವಲ್ಲ ಅಂತ ಮೊದಲೇ ಹೇಳಿದ್ದರೆ ಇವರುಗಳು ಬರುತ್ತಲೇ ಇರಲಿಲ್ಲವಲ್ಲ. ಹಾಗಾಗಿ ತನ್ನ ಪ್ರಾಣ ಉಳಿಸಿಕೊಳ್ಳಲು ಸುಳ್ಳು ಹೇಳಿರುತ್ತಾನೆ. ಈಗ ಇವರೆಲ್ಲರನ್ನೂ ಕೊಂದು, ಅವರ ನೌಕೆಯಲ್ಲಿ ಭೂಮಿಗೆ ಹೋಗಬೇಕು ಅಂತ ಪ್ಲಾನ್ ಸಹ ಮಾಡಿರುತ್ತಾನೆ. ಆದರೆ ಅಂದುಕೊಂಡಿದ್ದೆಲ್ಲ ಆಗಲು ಸಾಧ್ಯವೇ? ಇವನ ಷಡ್ಯಂತ್ರದಿಂದ ಕೂಪರ್ ತಪ್ಪಿಸಿಕೊಳ್ಳುತ್ತಾನೆ. ಆದರೆ ಮ್ಯಾನ್ ತನ್ನ ತಪ್ಪಿಗೆ ತಾನೇ ಪ್ರಾಣ ಕಳೆದುಕೊಳ್ಳುತ್ತಾನೆ. ಇದರ ಮಧ್ಯೆ ಮ್ಯಾನ್ ರೋಬಾಟ್ ಅನ್ನು ವೀಕ್ಷಿಸುತ್ತಿದ್ದ ರೊಮಿಲಿಯೂ ರೋಬಾಟ್ ಸ್ಫೋಟಗೊಂಡು ಸಾಯುತ್ತಾನೆ. ಉಳಿದವರು ಇಬ್ಬರೇ... ಕೂಪರ್ ಮತ್ತು ಎಮಿಲಿಯಾ!
ಈಗ ಅವರಿಬ್ಬರ ಮುಂದಿರುವ ಏಕೈಕ ಆಯ್ಕೆ....
3. Edmund's Planet: ಆದರೆ ಈ ಗ್ರಹಕ್ಕೆ ಹೋಗುವಷ್ಟು ಇಂಧನ ಇವರ ಬಳಿ ಇರುವುದಿಲ್ಲ. ಅದಕ್ಕಾಗಿ ಬ್ಲಾಕ್ ಹೋಲ್ ಬಳಿಯ ಗುರುತ್ವವನ್ನೇ ಇಂಧನವನ್ನಾಗಿ ಬಳಸಿಕೊಂಡು ಎಡ್ಮಂಡ್ ಗ್ರಹಕ್ಕೆ ಹೋಗುವುದಾಗಿ ಯೋಚಿಸುತ್ತಾರೆ. ಅದಕ್ಕಾಗಿ ಕೂಪರ್ ರೋಬೋ ಟಾರ್ಸ್ ನೊಂದಿಗೆ ಮಾತೃನೌಕೆಯಿಂದ ತನ್ನನ್ನು ತಾನು ಎಜೆಕ್ಟ್ ಮಾಡಿಕೊಳ್ಳುತ್ತಾನೆ. ಮಾತೃನೌಕೆ ಎಮಿಲಿಯಾಳೊಂದಿಗೆ ಎಡ್ಮಂಡ್ ಗ್ರಹದತ್ತ ಹಾರುತ್ತದೆ.
ಈಗ ನಡೆಯುವುದು ಅಸಲೀ ಪವಾಡ.
ಮಾತೃನೌಕೆಯಿಂದ ಹೊರಬಿದ್ದ ಕೂಪರ್ ಕಪ್ಪುಕುಳಿಯೊಳಗೆ ಸೆಳೆಯಲ್ಪಡುವ ಬದಲು ಮತ್ತೆಲ್ಲೋ ಸೆಳೆಯಲ್ಪಡುತ್ತಾನೆ. ಅದೊಂದು ಐದನೇ ಆಯಾಮದ ಜಗತ್ತಾಗಿದ್ದು, ಸುತ್ತಲೂ ವಿಚಿತ್ರವಾದ ಬಿಲ್ಡಿಂಗುಗಳ ರೀತಿಯ ರಚನೆ ಇದ್ದು ಕೂಪರ್ ಅದರೊಳಗೆ ವೇಗವಾಗಿ ಬೀಳುತ್ತಾ ಸಾಗುತ್ತಿರುತ್ತಾನೆ. ಹಾಗೆಯೇ ಅವನ ವೇಗ ನಿಧಾನವಾಗುತ್ತಾ ಬರುತ್ತದೆ. ಗಾಳಿಯಲ್ಲಿ ಹಾರುತ್ತಲೇ ಸುತ್ತಲೂ ನೋಡುತ್ತಾನೆ. ಆ ಪರಿಸರ ಚಿರಪರಿಚಿತ ಎನಿಸುತ್ತದೆ.
ಹೌದು... ಕೂಪರ್ ಮಗಳು ಮರ್ಫಿಯ ಪುಸ್ತಕದ ರ‌್ಯಾಕಿನ ಹಿಂಭಾಗದಲ್ಲಿರುತ್ತಾನೆ. ಆದರೆ ವಿಚಿತ್ರ ಎಂದರೆ ಅತ್ತ ಕಡೆಯಿರುವ ಮುರ್ಫಿ ಹತ್ತು ವರ್ಷದವಳು!!!!
ಆದರೆ ಮುರ್ಫಿ ಈಗಾಗಲೇ ಓದು ಮುಗಿಸಿ ನಾಸಾದಲ್ಲಿ ಕೆಲಸಕ್ಕೆ ಸೇರಿದ್ದಾಳಲ್ಲವಾ? ಹಾಗಾದರೆ ಇವಳು...?
ಕೂಪರನಿಗೆ ತಾನು ಟೈಮ್ ಟ್ರಾವೆಲ್ ಮಾಡುತ್ತಾ ಭೂತಕಾಲಕ್ಕೆ ಬಂದಿದ್ದೇನೆ ಎಂದು ಗೊತ್ತಾಗುತ್ತದೆ. ಮಗಳೊಡನೆ ಮಾತನಾಡಲು ಕೆಲವು ಪುಸ್ತಕಗಳನ್ನು ಬದಿಗೆ ಸರಿಸಲು ನೋಡಿದಾಗ ಅವು ಬೀಳುತ್ತವೆ. ಚಿಕ್ಕ ಮುರ್ಫಿ ಪುಸ್ತಕ ಬಿದ್ದದ್ದು ಕಂಡು ಆಶ್ಚರ್ಯ ಚಕಿತಳಾಗಿ ನೋಡುತ್ತಾಳೆ.
ಆಗ ಕೂಪರನಿಗೆ ಮಗಳ ರೂಮಿನಲ್ಲಿ ಪುಸ್ತಕ ಬೀಳಿಸುತ್ತಾ ಇದ್ದದ್ದು ಭೂತವಲ್ಲ, ಬದಲಾಗಿ ಭವಿಷ್ಯದಲ್ಲಿರುವ ತಾನೇ ಎಂದು ಗೊತ್ತಾಗುತ್ತದೆ. ಅಷ್ಟರಲ್ಲಿ ಭೂತದ ಕೂಪರ್ ನಾಸಾಗೆ ಹೊರಡಲು ಮಗಳಿಗೆ ಹೇಳಲು ಬರುತ್ತಾನೆ. ಅವನು ನಾಸಾಗೆ ಹೊರಟರೆ ಮಗಳ ಪ್ರೀತಿ, ಕುಟುಂಬದ ಸಂತೋಷದ ಕ್ಷಣ ಎಲ್ಲವನ್ನೂ ಕಳೆದುಕೊಳ್ಳಬೇಕಾಗುತ್ತದೆ ಎಂದು ಗಾಬರಿಯಾದ ಭವಿಷ್ಯದ ಕೂಪರ್ ತನ್ನ ಭೂತಕ್ಕೆ "ಹೋಗಬೇಡ.. ನಿಲ್ಲು..." ಅಂತ ಕಿರಿಚುತ್ತಾನೆ. ಅವನ ಕಿರಿಚುವಿಕೆ ಅವರಿಗೆ ಕೇಳುವುದಿಲ್ಲವಾದ್ದರಿಂದ morse ಕೋಡಿನಲ್ಲಿ ಪುಸ್ತಕ ಬೀಳಿಸಿ "ನಿಲ್ಲು" ಎಂಬ ಸಂಕೇತ ಕಳಿಸುತ್ತಾನೆ. ಅಲ್ಲದೇ ನೆಲದ ಮೇಲೆ ಬಿದ್ದಿದ್ದ ಮರಳಿನ ಮೇಲೆ ಗುರುತ್ವ ಬಳಸಿ ನಾಸಾದ ಕೋಆರ್ಡಿನೇಟ್ಸ್ ಅನ್ನು ರಚಿಸುತ್ತಾನೆ. ಆ ಕೋಆರ್ಡಿನೇಟ್ಸ್ ಬಳಸಿಯೇ ಭೂತದ ಕೂಪರ್ ನಾಸಾ ತಲುಪುವುದು, ನಂತರ ಇದೆಲ್ಲಾ ನಡೆಯುವುದು.
ನಾವು ಮನಸ್ಸಿನಲ್ಲಿ ಅಂದುಕೊಂಡಿದ್ದು ನಮ್ಮ ಕಣ್ಮುಂದೆ ಸಿಗುವಂತಾದಾಗ ದೇವರು ಸಹಾಯ ಮಾಡಿದ ಎಂದುಕೊಳ್ಳುತ್ತೇವೆ. ಆದರೆ ಅದು ನಿಜವಾಗಿ ಭವಿಷ್ಯದಲ್ಲಿರುವ ನಾವೇ ಭೂತಕಾಲದ ನಮಗೆ ಸಹಾಯ ಮಾಡಿಕೊಳ್ಳುವಂತಾದರೆ?? ಎಷ್ಟು ವಿಚಿತ್ರ ಎನಿಸುತ್ತದೆ ಅಲ್ಲವಾ?
ಅಷ್ಟರಲ್ಲಿ ಐದನೇ ಆಯಾಮದಲ್ಲಿ ತನ್ನೊಂದಿಗೆ ಬಂದರುವ ರೋಬೋ ಟಾರ್ಸ್ ಗ್ರಾವಿಟಿ ಈಕ್ವೇಷನ್ ತಂದಿರುತ್ತದೆ. ಈ ಈಕ್ವೇಷನ್ ಇಂದ ಭೂಮಿಯ ಜನರನ್ನು ಕಾಪಾಡಬಹುದು. ಆದರೆ ಕೂಪರನೋ ಯಾವುದೋ ಆಯಾಮದಲ್ಲಿ ಸಿಕ್ಕಿಬಿದ್ದಿದ್ದಾನೆ. ಈಗ ಕೂಡಲೇ ಆ ಈಕ್ವೇಷನ್ ಅನ್ನು ಮಗಳಿಗೆ ಕಳಿಸಬೇಕು. ತಡ ಮಾಡಿದರೆ ಮತ್ತೆ ಇಂತಹಾ ಅವಕಾಶ ಸಿಗುತ್ತದೆಯೋ ಇಲ್ಲವೋ ಗೊತ್ತಿಲ್ಲ? ಆದರೆ ಕಳಿಸುವುದು ಹೇಗೆ.....?
ಮೊದಲೇ ಹೇಳಿದಂತೆ ಎಲ್ಲಾ ಆಯಾಮಗಳಲ್ಲಿಯೂ ಕಾಮನ್ ಎಂದರೆ "ಗುರುತ್ವ". ಹಿಂದೆ ಅವನು ಮಗಳಿಗೊಂದು ವಾಚ್ ಕೊಟ್ಟಿರುತ್ತಾನಲ್ಲ, ಅದು ಆ ಪುಸ್ತಕದ ಕಪಾಟಿನಲ್ಲಿಯೇ ಇರುತ್ತದೆ. ಅದಕ್ಕೆ ಗುರುತ್ವದ ಬಲದಿಂದ ಗ್ರಾವಿಟಿ ಈಕ್ವೇಷನ್ ಅನ್ನು ಬೈನರಿಯಲ್ಲಿ ಫೀಡ್ ಮಾಡುತ್ತಾನೆ ಕೂಪರ್.
ಅದು ಪ್ರಸ್ತುತ ಕಾಲದಲ್ಲಿ ಭೂಮಿಯಲ್ಲಿರುವ ವಿಜ್ಞಾನಿ ಮುರ್ಫಿಗೆ ಅಕಸ್ಮಾತ್ತಾಗಿ ಆ ರೂಮಿಗೆ ಬಂದಾಗ ಸಿಗುತ್ತದೆ. ಆಕೆಗೂ ಸಹ ತಾನು ಚಿಕ್ಕವಳಿದ್ದಾಗ ಕೋಣೆಯಲ್ಲಿ ಪುಸ್ತಕ ಬೀಳಿಸುತ್ತಿದ್ದುದು ತನ್ನ ತಂದೆಯೇ ಎಂದು ಗೊತ್ತಾಗುತ್ತದೆ. ಇದರ ಮೂಲಕ ತಂದೆ ತಮ್ಮಿಂದ ಹಲವಾರು ವರ್ಷ ದೂರವಿದ್ದರೂ ಸಹ ತಮ್ಮೊಡನೆ ಸಂವಹನ ನಡೆಸುತ್ತಲೇ ಬಂದಿದ್ದರು ಅಂತ ಅರ್ಥವಾಗಿ ಅವಳ ಮುನಿಸು ಕಳೆಯುತ್ತದೆ.
ಮುರ್ಫಿ ವಾಚಿನ ಮೂಲಕ ತಂದೆ ಕಳಿಸಿದ ಕ್ವಾಂಟಮ್ ಈಕ್ವೇಷನ್ ಡಿಕೋಡ್ ಮಾಡಿ, ಭೂಮಿಯ ಜನರನ್ನು ಒಂದು ಸ್ಪೇಸ್ ಸ್ಟೇಷನ್ ನಲ್ಲಿ ಸಾಗಿಸಿ ಕಾಪಾಡುತ್ತಾಳೆ. ಆ ಸ್ಪೇಸ್ ಸ್ಟೇಷನ್ನಿಗೆ ಅವಳದ್ದೇ ಹೆಸರಿಡಲಾಗುತ್ತದೆ. ಕೂಪರ್ ಸ್ಟೇಷನ್!!!
ಅಷ್ಟರಲ್ಲಿ ಭವಿಷ್ಯದ ಕೂಪರನಿಗೆ ಐದನೇ ಆಯಾಮ ನಿಧಾನಕ್ಕೆ ಕರಗುತ್ತಾ ಬಂದು ಎಲ್ಲವೂ ಅಯೋಮಯವಾಗುತ್ತದೆ. ಪ್ರಜ್ಞೆ ತಪ್ಪುತ್ತದೆ. ಎಚ್ಚರವಾದಾಗ ಆತ ಮಗಳು ತಯಾರಿಸಿದ್ದ ಸ್ಪೇಸ್ ಸ್ಟೇಷನ್ನಿನಲ್ಲಿ ಇರುತ್ತಾನೆ. ಆತ ಐದನೇ ಆಯಾಮದಿಂದ ಹೊರ ಬಂದು ಕಪ್ಪು ರಂಧ್ರದೆಡೆ ಸೆಳೆಯಲ್ಪಡುತ್ತಿದ್ದಾಗ ಶನಿಗ್ರಹದ ಬಳಿ ಹೊಸದಾಗಿ ರಚಿತವಾಗಿದ್ದ ಸ್ಪೇಸ್ ಸ್ಟೇಷನ್ನಿನ ಕಣ್ಣಿಗೆ ಬಿದ್ದು ಬಚಾವಾಗಿರುತ್ತಾನೆ. ಅರೆ!! ಹಾಗಾದರೆ ಮಗಳು ತಾನು ಕೊಟ್ಟ ಈಕ್ವೇಷನ್ ಬಳಸಿ ಜನರನ್ನು ಕಾಪಾಡಿದಳೇ... ಜೊತೆಗೆ ತನ್ನನ್ನೂ ಕಾಪಾಡಿದಳೇ... ಅವಳನ್ನು ನೋಡಬೇಕಲ್ಲ.. ಅಂತ ಅತ್ಯುತ್ಸಾಹದಿಂದ ಓಡುತ್ತಾನೆ.
ನೋಡಿದರೆ ಮರ್ಫಿಗೆ ಎಂಭತ್ತಾರು ವರ್ಷ ವಯಸ್ಸಾಗಿರುತ್ತದೆ!!!!
ಕೂಪರ್ ಮಾತ್ರ ಭೂಮಿ ಬಿಡುವಾಗ ಹೇಗಿರುತ್ತಾನೆಯೋ ಈಗಲೂ ಹಾಗೆಯೇ ಇರುತ್ತಾನೆ. ಅಲ್ಲಿ ಮುರ್ಫಿ ತನ್ನ ಕೊನೆಯ ಕ್ಷಣಗಳನ್ನು ಎಣಿಸುತ್ತಿರುತ್ತಾಳೆ. ಕೂಪರ್ ಅವಳಿಗೆ ಮಾತು ಕೊಟ್ಟಂತೆ ಬಂದಿದ್ದೇನೆ ನೋಡು ಎನ್ನುತ್ತಾನೆ. ಈಗ ಮುರ್ಫಿಗೆ ತಂದೆಯ ಬಗ್ಗೆ ಯಾವ ಕೋಪವೂ ಇರುವುದಿಲ್ಲ. ಹಾಗಾಗಿ ನಗುತ್ತಲೇ ತನ್ನ ಸಾವನ್ನು ಎದುರು ನೋಡುತ್ತಿರುತ್ತಾಳೆ. ತಂದೆಯಿಂದಲೇ ಭೂಮಿಯ ಜನರು ಬದುಕಿದ್ದಾರೆ ಎಂಬ ಸಂತೃಪ್ತಿ ಅವಳಿಗಿರುತ್ತದೆ. ಹಾಗಾಗಿ ತಂದೆಗೆ ತನ್ನ ಬಗ್ಗೆ ಚಿಂತಿಸದೇ ಎಡ್ಮಂಡ್ ಗ್ರಹಕ್ಕೆ ಹೋಗಿರುವ ಎಮಿಲಿಯಾಳ ಬಳಿ ಹೋಗುವಂತೆ ಸಲಹೆ ನೀಡುತ್ತಾಳೆ. ಕೂಪರ್ ಮುರ್ಫಿಯನ್ನು ಅವಳ ಕುಟುಂಬದವರೊಡನೆ ಇರಲು ಬಿಟ್ಟು ಎಡ್ಮಂಡ್ ಗ್ರಹದತ್ತ ಹಾರುತ್ತಾನೆ.
ಅತ್ತ...
ಎಡ್ಮಂಡ್ ಗ್ರಹದಲ್ಲಿ ಎಮಿಲಿಯಾ ಯಾರಿಗಾಗಿಯೋ ಕಾಯುತ್ತಾ ಕುಳಿತಿರುವಂತೆ ತೋರಿಸಲಾಗಿದೆ. ಮುಖ್ಯವಾದ ವಿಷಯ ಎಂದರೆ ಅಲ್ಲಿ ಮನುಷ್ಯ ಜೀವಿಸುವ ವಾತಾವರಣ ಇರುತ್ತದೆ. ಇಲ್ಲಿಗೆ ಸಿನೆಮಾ ಮುಗಿಯುತ್ತದೆ. ಆದರೆ ಬಹಳಷ್ಟು ಪ್ರಶ್ನೆಗಳನ್ನು ನಮ್ಮಲ್ಲಿ ಈಗಾಗಲೇ ಹುಟ್ಟು ಹಾಕುವಲ್ಲಿ ಯಶಸ್ವಿಯಾಗುತ್ತದೆ.
ಕೊನೆಗೂ ಇದನ್ನೆಲ್ಲ ಮಾಡಿದವರು ಯಾರು ಅಂತ ನಮಗೆ ಗೊತ್ತಾಗುವುದಿಲ್ಲ...
ಕಪ್ಪುಕುಳಿಯ ಪಕ್ಕ ವರ್ಮ್ ಹೋಲ್ ಸೃಷ್ಟಿಸಿದವರು ಯಾರು.....?
ಬ್ಲಾಕ್ ಹೋಲಿಗೆ ಬೀಳುತ್ತಿದ್ದ ಕೂಪರನ್ನು ಕಾಪಾಡಿದವರು ಯಾರು....?
ಕೂಪರನ ಗತಜೀವನದ ಪುಟಗಳನ್ನು ಐದನೇ ಆಯಾಮದ ಮೂಲಕ ಆತನಿಗೆ ಜೋಡಿಸಿ ತೋರಿಸಿದವರಾರು......?
ಇದೆಲ್ಲವನ್ನೂ ಮಾಡುವುದರ ಮೂಲಕ ಭೂಮಿಯ ಜನರನ್ನು ಬಚಾವು ಮಾಡಿದವರು ಯಾರು.....?
ನಾವು ಪೂಜಿಸುವ ದೇವರೇ ಇರಬಹುದಲ್ಲವೇ...??
**********
ಕೆ.ಎ.ಸೌಮ್ಯ
