The Last Color (ಹಿಂದಿ)
ಸದಾಕಾಲವೂ ಜಾತಿ, ಮೀಸಲಾತಿ, ರಾಜಕೀಯ ಎಂಬ ವಿಷಯಗಳ ಬಗ್ಗೆ ಪರ ಅಥವಾ ವಿರೋಧ ಮಾಡುತ್ತಿರುವ ಜನರು ಸಮಾಜದ ಮತ್ತೊಂದು ಶೋಷಿತರ ವರ್ಗವನ್ನು ಮರೆತೇ ಬಿಟ್ಟಿದ್ದಾರೆ. ಈ ಶೋಷಿತರುಗಳಿಗೆ ದನಿಯಾಗುವವರು ಯಾರಿಲ್ಲ, ಇವರುಗಳಿಗೆ ಯಾರ ಆಸರೆಯೂ ಇಲ್ಲ, ಯಾರ ಸಹಾಯಹಸ್ತವೂ ಇಲ್ಲ.... ಇವರುಗಳದ್ದು ಕೇವಲ ಮೂಕರೋಧನೆಯಷ್ಟೇ.. ಹಾಗಿದ್ದರೆ ಯಾರಿವರು? ಇವರು ಯಾರೆಂದು ಹೇಗೆ ಹೇಳಲಿ? ಇವರುಗಳ ಬಗ್ಗೆ ಏನೆಂದು ಬರೆಯಲಿ? ಇವರುಗಳು ನಮ್ಮ-ನಿಮ್ಮ ನಡುವೆಯೇ ಇದ್ದಾರೆ. ಆದರೆ ನಮಗೆ ಇವರುಗಳನ್ನು ಕಂಡರೆ ಒಂದು ರೀತಿಯ ದಿವ್ಯ ನಿರ್ಲಕ್ಷ್ಯ. ಏಕೆಂದರೆ ಇವರುಗಳು ಹೀಗೇ ಇರಬೇಕು ಎಂಬ ಕಟ್ಟುಪಾಡು ಮಾಡಿರುವವರು ನಾವೇ. ಅವರು ಹಾಗೇ ಇರಬೇಕಷ್ಟೇ... ಅದನ್ನು ಅವರು ಮೀರಿದಾಗ ಮಾತ್ರವೇ ನಮ್ಮ ದೃಷ್ಟಿ ಅವರತ್ತ ಹರಿಯುತ್ತದೆ. ಈ ಸಿನೆಮಾದಲ್ಲಿ ಮೂರು ಮುಖ್ಯ ಪಾತ್ರಗಳಿವೆ. 1) ಹುಟ್ಟಿಸಿದವರು ಯಾರೆಂದೇ ಗೊತ್ತಿಲ್ಲದಿದ್ದರೂ, ತುತ್ತು ಅನ್ನಕ್ಕೂ ತತ್ವಾರವಾಗಿದ್ದರೂ, ಸಮಾಜದ ಜನರಿಂದ 'ಅಸ್ಪೃಶ್ಯ' ಎಂಬ ಬಿರುದು ಪಡೆದಿದ್ದರೂ, ತಾನು ಓದಲೇಬೇಕೆಂದು ಹಠದಿಂದ ಸ್ಕೂಲ್ ಫೀಸಿಗಾಗಿ ಕಷ್ಟ ಪಡುತ್ತಿರುವ 'ಚೋಟಿ' ಎಂಬ ಒಂಭತ್ತರ ಬಾಲಕಿ. 2) ಇಷ್ಟವಿಲ್ಲದ ಮುದುಕನೊಂದಿಗೆ ಮದುವೆಯಾಗಿ, ಜೀವನ ಏನು ಅಂತ ಗೊತ್ತಾಗುವಷ್ಟರಲ್ಲಿ ಆತ ಸತ್ತು, 'ವಿಧವೆ' ಎಂಬ ಹಣೆಪಟ್ಟಿ ಅಂಟಿಸಿಕೊಂಡು, ಜೀವನದ ಸುಖಭೋಗಗಳಿಂದ ವಂಚಿತಳಾಗಿ, ಇಷ್ಟವಿಲ್ಲದ ಜೀವನ ನಡೆಸುತ್ತ ಇರುವ '...